ಸಾರಾಂಶ
ಬೆಳ್ತಂಗಡಿ ಮೇಲಂತಬೆಟ್ಟುವಿನ ಗಣಿಗಾರಿಕೆ ಸ್ಥಳಕ್ಕೆ ಪೊಲೀಸರು ಹಾಗೂ ತಹಸೀಲ್ದಾರ್ ತೆರಳಿದಾಗ ಅಕ್ರಮವಾಗಿ ಬಳಕೆ ಮಾಡುತ್ತಿದ್ದ 8 ಡಿಟೊನೇಟರ್‌ಗಳು ಸಿಕ್ಕಿವೆ. ಈ ಕಾರಣಕ್ಕಾಗಿ ಶಶಿರಾಜ್ ಎಂಬಾತನನ್ನು ಬಂಧಿಸಲಾಗಿದೆ. ಇಂಥವನ ಪರವಾಗಿ ಹರೀಶ್ ಪೂಂಜ ಠಾಣೆಗೆ ಹೋಗಿ ಬೆದರಿಕೆ ಹಾಕಿರೋದು ಖಂಡನೀಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ವ್ಯಕ್ತಿ ಪರವಾಗಿ ಶಾಸಕ ಹರೀಶ್ ಪೂಂಜ ಠಾಣೆಗೆ ಹೋಗಿ ಪೊಲೀಸರಿಗೇ ಬೆದರಿಕೆ ಹಾಕಿದ್ದು ಬೆಳ್ತಂಗಡಿ ಕ್ಷೇತ್ರದ ಮತದಾರರಿಗೆ ಮಾತ್ರವಲ್ಲ, ಇಡೀ ಜಿಲ್ಲೆಗೆ ಕಳಂಕ. ರೌಡಿ ಶೀಟರ್ ಪರವಾಗಿ ಶಾಸಕರೇ ರೌಡಿಯಂತೆ ವರ್ತಿಸ್ತಾರೆ ಅಂದರೆ ಏನರ್ಥ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮತ್ತು ಎಂಎಲ್ಸಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಭಂಡಾರಿ, ಬೆಳ್ತಂಗಡಿ ಮೇಲಂತಬೆಟ್ಟುವಿನ ಗಣಿಗಾರಿಕೆ ಸ್ಥಳಕ್ಕೆ ಪೊಲೀಸರು ಹಾಗೂ ತಹಸೀಲ್ದಾರ್ ತೆರಳಿದಾಗ ಅಕ್ರಮವಾಗಿ ಬಳಕೆ ಮಾಡುತ್ತಿದ್ದ 8 ಡಿಟೊನೇಟರ್‌ಗಳು ಸಿಕ್ಕಿವೆ. ಈ ಕಾರಣಕ್ಕಾಗಿ ಶಶಿರಾಜ್ ಎಂಬಾತನನ್ನು ಬಂಧಿಸಲಾಗಿದೆ. ಇಂಥವನ ಪರವಾಗಿ ಹರೀಶ್ ಪೂಂಜ ಠಾಣೆಗೆ ಹೋಗಿ ಬೆದರಿಕೆ ಹಾಕಿರೋದು ಖಂಡನೀಯ ಎಂದರು.
ಹಿಂದೂ ಧರ್ಮಕ್ಕೆ ಅವಮಾನ:ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಮ್ ಅವರನ್ನು ಹರೀಶ್ ಪೂಂಜ ಕಾಗೆಗೆ ಹೋಲಿಸಿದ್ದಾರೆ. ಹಿಂದೂ ಧರ್ಮದಲ್ಲಿ ಕಾಗೆಗೆ ಎಷ್ಟು ಬೆಲೆ ಇದೆ ಗೊತ್ತಿದೆಯಾ ಅವರಿಗೆ? ಶನಿ ದೇವರನ್ನು ಪೂಜೆ ಮಾಡಲ್ವಾ? ಪೂಂಜ ನೇರವಾಗಿ ಹಿಂದೂ ಧರ್ಮ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು.ಪೂಂಜ ರಾಜೀನಾಮೆ ನೀಡಲಿ:ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಬೆಳ್ತಂಗಡಿ ತಾಲೂಕಿನ ಜನತೆ ಹರೀಶ್ ಪೂಂಜರಂಥ ಶಾಸಕರನ್ನು ಎಂದೂ ನೋಡಿಲ್ಲ. ರತ್ನವರ್ಮ ಹೆಗ್ಗಡೆ ಅವರಿಂದ ಹಿಡಿದು ವೈಕುಂಠ ಬಾಳಿಗರು, ವಸಂತ ಬಂಗೇರರಂಥವರು ಶಾಸಕರಾಗಿ ಕ್ಷೇತ್ರದ ಜನತೆಗೆ ಗೌರವ ತಂದುಕೊಟ್ಟಿದ್ದರು. ವಸಂತ ಬಂಗೇರರು ಭ್ರಷ್ಟಾಚಾರದ ವಿರುದ್ಧ ಹೋರಾಡಿದವರು, ಎಂದೂ ಭ್ರಷ್ಟರು, ರೌಡಿಗಳ ಪರ ಇರಲಿಲ್ಲ. ಕೂಡಲೆ ಅವರು ರಾಜೀನಾಮೆ ನೀಡಿ, ಮರು ಚುನಾವಣೆಗೆ ನಿಂತು ಗೆಲ್ಲಲಿ ನೋಡೋಣ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್, ಲುಕ್ಮಾನ್ ಬಂಟ್ವಾಳ, ಶಾಲೆಟ್ ಪಿಂಟೊ, ನೀರಜ್‌ಪಾಲ್, ಸುಹಾನ್ ಆಳ್ವ, ಲಾರೆನ್ಸ್ ಡಿಸೋಜ ಮತ್ತಿತರರಿದ್ದರು.