ಮಂಡ್ಯದಲ್ಲಿ ಅಂಬರೀಶ್‌ರಂತೆ ಶಾಸಕರು ರಾಜೀನಾಮೆ ನೀಡಲಿ

| Published : Jun 26 2024, 12:42 AM IST

ಸಾರಾಂಶ

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಕರೆ ಕೊಟ್ಟಿದ್ದ ತಾಲೂಕಿನ ಬಂದ್ ಯಶಸ್ವಿಯಾಯಿತು. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಅಂಗಡಿ ಮುಚ್ಚಲಾಗಿತ್ತು. ತಾಲೂಕಿನ ಹಾಗಲವಾಡಿ, ನಿಟ್ಟೂರು ಸಿಎಸ್ ಪುರ, ಕಡಬ ,ಚೇಳೂರು ಸೇರಿದಂತೆ ಸಾವಿರಾರು ರೈತರು ಭಾಗವಹಿಸಿ ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಕೂಗಿದರು.

ಗುಬ್ಬಿ: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಕರೆ ಕೊಟ್ಟಿದ್ದ ತಾಲೂಕಿನ ಬಂದ್ ಯಶಸ್ವಿಯಾಯಿತು. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಅಂಗಡಿ ಮುಚ್ಚಲಾಗಿತ್ತು. ತಾಲೂಕಿನ ಹಾಗಲವಾಡಿ, ನಿಟ್ಟೂರು ಸಿಎಸ್ ಪುರ, ಕಡಬ ,ಚೇಳೂರು ಸೇರಿದಂತೆ ಸಾವಿರಾರು ರೈತರು ಭಾಗವಹಿಸಿ ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಕೂಗಿದರು.

ಜೆಡಿಎಸ್ ಮುಖಂಡ ಬಿ ಎಸ್ ನಾಗರಾಜು ಮಾತನಾಡಿ, ಮಂಡ್ಯದಲ್ಲಿ ಅಂಬರೀಶ್ ಕಾವೇರಿ ನೀರಿನ ಹೋರಾಟಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದೇ ರೀತಿ ಗುಬ್ಬಿ ಕ್ಷೇತ್ರದ ಶಾಸಕರು ರೈತರಿಂದ ಗೆಲುವು ಪಡೆದಿದ್ದಾರೆ ಅಂದ ಮೇಲೆ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ವಿರೋಧಿಸಿ ರೈತರಿಗಾಗಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಶಾಸಕರು ಬರಿ ಬೆಂಬಲ ಕೊಟ್ಟರೆ ಸಾಲದು ಬೀದಿಗಳಿದು ರೈತರ ಪರವಾಗಿ ಹೋರಾಟ ಮಾಡಬೇಕು. ಇಲ್ಲದೆ ಹೋದರೆ ರೈತರ ಶಾಪ ತಟ್ಟಲಿದೆ ಎಂದು ವಾಗ್ದಾಳಿ ನಡೆಸಿದರು.

ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗಿದೆ. ಸರ್ಕಾರ ಎಚ್ಚೆತ್ತುಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ರೂಪಿಸಲಾಗುವುದು ತೆಗೆದಿರುವ ನಾಲೆಯನ್ನು ಸಹ ಮುಚ್ಚುತ್ತೇವೆ ಎಂದರು.

ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿ, ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಬಂದ್ ಯಶಸ್ವಿಯಾಗಿದೆ. ಸರ್ಕಾರಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿದ್ದು ಸರ್ಕಾರ ಎಚ್ಚೆತ್ತು ಈ ಯೋಜನೆಯನ್ನು ಹಿಂಪಡೆಯಬೇಕು. ಕ್ಷೇತ್ರದ ಶಾಸಕರು ಬಂದ್‌ಗೆ ನನ್ನ ಬೆಂಬಲವಿದೆ ಎನ್ನುತ್ತಿದ್ದಾರೆ ಅವರು ಇಲ್ಲಿಗೆ ಬಂದು ರೈತರ ಪರವಾಗಿ ಹೋರಾಟ ಮಾಡಬೇಕಿತ್ತು. ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯಲ್ಲಿ ಶಾಸಕರು ಕಮಿಷನ್ ಪಡೆದು ಗುತ್ತಿಗೆದಾರರನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಯೋಜನೆಯನ್ನು ಹಿಂಪಡೆಯದೆ ಹೋದರೆ ನಾವೇ ಜೆಸಿಬಿ ಹಿಟಾಚಿಗಳನ್ನು ನಾಲೆಯಲ್ಲಿ ಇಳಿಸಿ ಕೆನಾಲ್ ಅನ್ನು ಮುಚ್ಚುತ್ತೇವೆ ಎಂದುಕಿಡಿ ಕಾರಿದರು.

ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಅವೈಜ್ಞಾನಿಕ ಯೋಜನೆಯಾಗಿದ್ದು, ಜಿಲ್ಲೆಯ ರೈತರಿಗೆ ಮರಣ ಶಾಸನವಾಗಲಿದೆ. ರೈತ ಬಾಂಧವರೆಲ್ಲರೂ ಸೇರಿ ಮುಂದಿನ ದಿನಗಳಲ್ಲಿ ಜಿಲ್ಲಾ ಸಮಿತಿ ಕೈಗೊಳ್ಳುವ ನಿರ್ಣಯದಂತೆ ಹೋರಾಟಕ್ಕೆ ಸಜ್ಜಾಗುತ್ತೇವೆ ಎಂದು ತಿಳಿಸಿದರು.

ಮುಖಂಡ ಚಂದ್ರ ಶೇಖರ್ ಬಾಬು ಮಾತನಾಡಿ, ಹೇಮಾವತಿ ನಮ್ಮ ಹಕ್ಕು ಇದನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಬಿಡುವ ಮಾತಿಲ್ಲ. ಮುಂದಿನ ದಿನದಲ್ಲಿ ಮತ್ತಷ್ಟು ಉಗ್ರ ಹೋರಾಟಕ್ಕೆ ನಾವೆಲ್ಲರೂ ಸಿದ್ದರಾಗಿದ್ದೇವೆ ಎಂದರು

ರೈತ ಸಂಘದ ಜಿಲ್ಲಾಧ್ಯಕ್ಷ ಎ ಗೋವಿಂದ ರಾಜು ಮಾತನಾಡಿ, ರಕ್ತ ಕೊಟ್ಟರು ನೀರು ಬಿಡೆವು, ಇಡೀ ತುಮಕೂರು ಜಿಲ್ಲೆಯಾದ್ಯಂತ ರೈತ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ತುಮಕೂರು ಬಂದ್‌ ಯಶಸ್ವಿಯಾಗಿ ಮಾಡಿದ್ದೇವೆ. ಸರ್ಕಾರ ಇದನ್ನು ಮೀರಿ ಮುಂದುವರಿದರೆ ಇಡೀ ರೈತರು ಬೀದಿಗಿರಿಯುತ್ತಾರೆ ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಲಿ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್. ಡಿ .ಭೈರಪ್ಪ ಮಾತನಾಡಿ, ಕಾನೂನು ಪ್ರಕಾರ ನಾವು ಹೋರಾಟ ಮಾಡುತ್ತೇವೆ. ನಿಮ್ಮೆಲ್ಲ ಸಹಕಾರ ನಮಗೆ ಬೇಕಾಗಿದೆ ಎಂದು ತಿಳಿಸಿದರು.

ಹೊನ್ನಗಿರಿ ಗೌಡ ಮಾತನಾಡಿ, ಹೇಮಾವತಿ ನೀರನ್ನು ಪ್ರತ್ಯೇಕ ಎಕ್ಸ್ ಪ್ರಸ್ ಲಿಂಕ್ ಕೆನಾಲ್ ಮೂಲಕ ರಾಮನಗರ ಜಿಲ್ಲೆಗೆ ಕೊಂಡೊಯ್ದರೆ ರೈತರ ಬಾಯಿಗೆ ಮಣ್ಣು ಹಾಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ತುಮಕೂರು ಜಿಲ್ಲೆಯ ನಾಗರಿಕರಿಗೆ ಕುಡಿಯಲು ನೀರಿಲ್ಲದಂತಾಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ಬಿ.ಆರತಿಗೆ ಮನವಿ ಸಲ್ಲಿಸಲಾಯಿತು. ಸಾವಿರಾರು ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಜೆಯವರೆಗೆ ಅಂಗಡಿ ಮುಂಗಟ್ಟು ಮುಚ್ಚಲು ಮತ್ತೊಮ್ಮೆ ಪ್ರಚಾರ ಮಾಡಿ ಪ್ರತಿಭಟನಾ ಸಭೆ ಅಂತ್ಯ ಮಾಡಲಾಯಿತು. ಮುಖಂಡರಾದ ಜಿಎನ್ ಬೆಟ್ಟಸ್ವಾಮಿ, ಯೋಗಾನಂದ ಕುಮಾರ್, ಸಾಗರನಹಳ್ಳಿ ವಿಜಯ್ ಕುಮಾರ್, ನಂಜೇಗೌಡ, ಎಚ್ ಡಿ ಭೈರಪ್ಪ, ಜಿ .ಎನ್. ಅಣ್ಣಪ್ಪಸ್ವಾಮಿ, ವೆಂಕಟೇಗೌಡ, ಪಂಚಾಕ್ಷರಿ, ಸಿದ್ಧಾಂಗಂಗಮ್ಮ,ಎನ್. ಸಿ. ಪ್ರಕಾಶ್,ಶಂಕರ್ ಕುಮಾರ್ ತಾಲೂಕ ಅಧ್ಯಕ್ಷ ವೆಂಕಟೇಗೌಡ ಭಾಗಿಯಾಗಿದ್ದರು.