ನೀಟ್ ಫಲಿತಾಂಶ ತಡೆಹಿಡಿದು ಮರು ಪರೀಕ್ಷೆ ಮಾಡಲಿ: ಕಾಂಗ್ರೆಸ್‌ನ ಬಿ.ಸಿ.ರಾಜೇಶ್

| Published : Jun 14 2024, 01:08 AM IST / Updated: Jun 14 2024, 01:21 PM IST

ನೀಟ್ ಫಲಿತಾಂಶ ತಡೆಹಿಡಿದು ಮರು ಪರೀಕ್ಷೆ ಮಾಡಲಿ: ಕಾಂಗ್ರೆಸ್‌ನ ಬಿ.ಸಿ.ರಾಜೇಶ್
Share this Article
  • FB
  • TW
  • Linkdin
  • Email

ಸಾರಾಂಶ

ತಕ್ಷಣವೇ ಈಗಿನ ನೀಟ್‌ ಫಲಿತಾಂಶ ತಡೆಹಿಡಿದು ಮರು ಪರೀಕ್ಷೆ ನಡೆಸಿ ಅನ್ಯಾಯವಾದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದರೇ ಪ್ರತಿಭಟನೆಯ ಹಾದಿ ಹಿಡಿಯಲಾಗುವುದು ಎಂದು ಕಾಂಗ್ರೆಸ್ ಮುಖಂಡ ಬಿ.ಸಿ.ರಾಜೇಶ್ ಎಚ್ಚರಿಸಿದರು. ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

  ಹಾಸನ :  ನೀಟ್ ರಾಷ್ಟ್ರೀಯ ಪರೀಕ್ಷೆ ಎಂಬ ಸಣ್ಣ ಸಂಸ್ಥೆ ಖಾಸಗಿಯ ಕಪಿಮುಷ್ಠಿಗೆ ಸಿಲುಕಿದ್ದು, ತಕ್ಷಣವೇ ಈಗಿನ ಫಲಿತಾಂಶ ತಡೆಹಿಡಿದು ಮರು ಪರೀಕ್ಷೆ ನಡೆಸಿ ಅನ್ಯಾಯವಾದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದರೇ ಪ್ರತಿಭಟನೆಯ ಹಾದಿ ಹಿಡಿಯಲಾಗುವುದು ಎಂದು ಕಾಂಗ್ರೆಸ್ ಮುಖಂಡ ಬಿ.ಸಿ.ರಾಜೇಶ್ ಎಚ್ಚರಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ‘2024 ರ ನೀಟ್ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ದಿವಾಳಿಯಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಕಪಿಮುಷ್ಠಿಗೆ ಸಿಲುಕಿ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಲಕ್ಷಾಂತರ ವಿದ್ಯಾರ್ಥಿಗಳು ನೀಟ್ ವ್ಯವಸ್ಥೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ಅನುಮಾನದಿಂದ ನೋಡುವಂತಾಗಿದೆ. ಈ ಬಾರಿಯ ಫಲಿತಾಂಶದಿಂದ ಲಕ್ಷಾಂತರ ವಿದ್ಯಾರ್ಥಿಗಳು ಖಿನ್ನತೆಯಿಂದ ನೋಡುವಂತಾಗಿ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವುದು ದುರದೃಷ್ಟಕರ. ಹಾಗೆಯೇ ಲಕ್ಷಾಂತರ ಕುಟುಂಬಗಳು ಕೌಂಟುಂಬಿಕವಾಗಿ ತುಂಬಾ ನೋವು, ಸಂಕಟ ಅನುಭವಿಸುತ್ತಿರುತ್ತಾರೆ. ದೇಶದಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಅಭದ್ರತೆ ಎದ್ದು ಕಾಣುತ್ತಿದೆ. ಇದು ವಿಶ್ವಗುರುವಿನ ಪಾರದರ್ಶಕ ಆಡಳಿತಕ್ಕೆ ಹಿಡಿದ ಕೈಗನ್ನಡಿ’ ಎಂದು ಟೀಕಿಸಿದರು.

‘ನೀಟ್ ಪರೀಕ್ಷೆಯಲ್ಲಿ ಸುಮಾರು67 ವಿದ್ಯಾರ್ಥಿಗಳು 720  ಅಂಕಕ್ಕೆ720 ಅಂಕ ಪಡೆದಿದ್ದಾರೆ. ಸುಮಾರು 8 ವಿದ್ಯಾರ್ಥಿಗಳು ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾರೆ. ಇದುವರೆಗೆ ನೀಟ್ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತಿತ್ತು. ಆದರೆ ಈ ಬಾಲ ಪರೀಕ್ಷಾ ಕೇಂದ್ರಗಳಲ್ಲಿಯೇ ಅಕ್ರಮ ನಡೆದಿದೆ. ಒಂದು ಪ್ರಶ್ನೆಗೆ 4 ಅಂಕವಿದ್ದು, ಒಂದು ಪ್ರಶ್ನೆ ತಪ್ಪಾದರೆ ಒಂದು ಅಂಕ ಕಡಿತವಾಗುತ್ತದೆ, ಹೀಗಿರುವಾಗ718 719 ಅಂಕ ತೆಗೆದುಕೊಳ್ಳುವುದು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಬಹು ವಿದ್ಯಾರ್ಥಿಗಳದ್ದಾಗಿದೆ. ತಮಿಳುನಾಡಿನಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಕೆ. ರಾಜನ್ ರವರಿಂದ ನೀಟ್ ವಿಷಯವಾಗಿ ಸಮಗ್ರ ವರದಿಯನ್ನು ತರಿಸಿಕೊಂಡು ಅಲ್ಲಿನ ಸ್ಟಾಲಿನ್ ಸರ್ಕಾರ ನೀಟ್ ವ್ಯವಸ್ಥೆಯಿಂದ ವಿನಾಯಿತಿ ಕೋರಿ ರಾಷ್ಟ್ರಪತಿಗಳ ಸಹಿಗಾಗಿ ಕಳುಹಿಸಿದೆ. 1500 ವಿದ್ಯಾರ್ಥಿಗಳಿಗೆ ಕೃಪಾಂಕದ ನೆಪದಲ್ಲಿ ತಲಾ 240 ಅಂಕ ನೀಡಿರುವುದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ’ ಎಂದು ಕಿಡಿಕಾರಿದರು.

ಖಾಸಗಿ ಶಿಕ್ಷಣ ಮಾಫಿಯಾ ಕೇಂದ್ರ ಸರ್ಕಾರ ಯಂತ್ರದೊಂದಿಗೆ ಶಾಮೀಲಾಗಿ ಪ್ರಶ್ನೆ ಪತ್ರಿಕೆ ಸೋರಿಕೆಯು ಬಹುಕೋಟಿ ಉಧ್ಯಮವನ್ನು ನಡೆಸುತ್ತಿದೆ. ಇದಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮತ್ತು ಕೇಂದ್ರ ಸರ್ಕಾರ ಪರೋಕ್ಷವಾಗಿ ಬೆಂಬಲ ನೀಡುತ್ತಿರುವುದು ದುರುದೃಷ್ಟಕರವಾಗಿದೆ ಎಂದು ದೂರಿದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿಯೂ ಸಹ ಅಕ್ರಮಗಳು ನಡೆದಿರುವುದು ಕಂಡು ಬಂದಿದ್ದು, ಈ ಕಾನೂನು ಬಾಹಿರ ಕೃತ್ಯವನ್ನು ರಾಜಕೀಯ ನಾಯಕರು ಪಕ್ಷಾತೀತವಾಗಿ, ಎಲ್ಲಾ ಪ್ರಗತಿಪರ ಸಂಘ ಸಂಸ್ಥೆಗಳು, ಬುದ್ಧಿಜೀವಿಗಳು, ಲೇಖಕರು ಉಗ್ರವಾಗಿ ಖಂಡಿಸಿ ಪ್ರತಿಭಟಿಸಿ ಹೋರಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. ಕೇಂದ್ರ ಸರ್ಕಾರ ತಕ್ಷಣವೇ 2024 ನೀಟ್ ಪರೀಕ್ಷಾ ಫಲಿತಾಂಶವನ್ನು ತಡೆಹಿಡಿದು ಮರು ಪರೀಕ್ಷೆ ನಡೆಸಿ ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡರಾದ ಜಿ.ಒ.ಮಹಾಂತಪ್ಪ, ಕುಮಾರ್ ಗೌರವ್, ನವೀನ್, ನಟರಾಜು ಇತರರು ಹಾಜರಿದ್ದರು.