ಹಲಸು ಮೇಳದ ಜೊತೆಗೆ ಸಸ್ಯ ಮೇಳವೂ ನಡೆಯಲಿ: ಶಾಸಕ ಅಶೋಕ್ ರೈ

| Published : May 26 2024, 01:33 AM IST

ಸಾರಾಂಶ

ನವತೇಜ ಟ್ರಸ್ಟ್, ಜೆಸಿಐ, ಜಿ.ಎಲ್.ಆಚಾರ್ಯ ಜುವೆಲ್ಲರ್ಸ್‌ ಹಾಗೂ ಅಡಿಕೆ ಪತ್ರಿಕೆ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ಜೈನ ಭವನದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಯಿತು. ಹಲಸು ಹಣ್ಣು ಮೇಳವನ್ನು ಹಲಸು ಹಣ್ಣನ್ನು ಇಬ್ಭಾಗ ಮಾಡಿ ಶಾಸಕರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಯುವ ಪೀಳಿಗೆಗಳಿಗೆ ಸಸ್ಯಗಳ ಮಹತ್ವವನ್ನು ತಿಳಿಸಿಕೊಡುವ ಕೆಲಸವನ್ನು ಹಿರಿಯರು ಮಾಡಬೇಕು. ಕಾಡು ಬೆಳೆಸಿ ನಾಡು ಉಳಿಸಲು ನಾವು ಪಣ ತೊಡಬೇಕಾಗಿದೆ. ಮರ ಗಿಡಗಳನ್ನು ಬೆಳೆಸುವಲ್ಲಿ ನಮ್ಮದು ಮೊದಲ ಆದ್ಯತೆಯಾಗಬೇಕು. ಹಲಸು ಮೇಳದ ಜೊತೆಗೆ ಸಸ್ಯ ಮೇಳವೂ ನಡೆಯಲಿ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.ಅವರು ನವತೇಜ ಟ್ರಸ್ಟ್, ಜೆಸಿಐ, ಜಿ.ಎಲ್.ಆಚಾರ್ಯ ಜುವೆಲ್ಲರ್ಸ್‌ ಹಾಗೂ ಅಡಿಕೆ ಪತ್ರಿಕೆ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ಜೈನ ಭವನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ ಹಲಸು ಹಣ್ಣು ಮೇಳವನ್ನು ಹಲಸು ಹಣ್ಣನ್ನು ಇಬ್ಭಾಗ ಮಾಡಿ ವಿಶೇಷ ರೀತಿಯಲ್ಲಿ ಶುಕ್ರವಾರ ಸಂಜೆ ಉದ್ಘಾಟಿಸಿ ಬಳಿಕ ಮಾತನಾಡಿದರು.ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಗಳಿವೆ. ಹಲಸು ಮೇಳಗಳ ಆಯೋಜನೆ ಮೂಲಕ ಮರೆಯಾಗುತ್ತಿರುವ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಒದಗಿಸುತ್ತಿರುವುದು ಅಭಿನಂದನಾರ್ಹ. ಮೇಳದಲ್ಲಿ ತಿಂಡಿ ತಿನಿಸು ಸ್ವೀಕರಿಸುವುದರ ಜೊತೆಗೆ ಇಲ್ಲಿಂದ ಒಂದು ಹಣ್ಣಿನ ಗಿಡವನ್ನು ಮನೆಗೆ ಕೊಂಡೊಯ್ದು ಬೆಳೆಸುವ ಕೆಲಸ ಮಾಡೋಣ ಎಂದರು.ಕ್ಯಾಂಪ್ಕೋ ಸಂಸ್ಥೆ ಅಧ್ಯಕ್ಷ ಕಿಶೋರ್ ಕುಮಾರ್ ಕೂಡ್ಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಲಸು ಹಣ್ಣು ಮೇಳದ ಆಯೋಜನೆಯು ಕೇವಲ ವಾಣಿಜ್ಯ ಉದ್ದೇಶವನ್ನು ಹೊಂದದೆ ಸಾಮಾಜಿಕ ಜಾಗೃತಿಯ ಉದ್ದೇಶವನ್ನೂ ಹೊಂದಿರಬೇಕು. ಇಲ್ಲದಿದ್ದಲ್ಲಿ ಅದರ ಮಹತ್ವ ಕಳೆದುಕೊಳ್ಳುತ್ತದೆ. ಮೇಳದಲ್ಲಿನ ತಿಂಡಿ ತಿನಿಸುಗಳಿಗೆ, ಹಲಸು ಹಣ್ಣುಗಳಿಗೆ ಸಿಕ್ಕಾಪಟ್ಟೆ ಬೆಲೆ ಇರುವುದು ಗ್ರಾಹಕರಲ್ಲಿ ಬೇಸರ ಮೂಡಿಸುತ್ತಿದೆ ಎಂದರು.ಈ ಸಂದರ್ಭ ಅಡಿಕೆ ಪತ್ರಿಕೆಯ ಉಪ ಸಂಪಾದಕ, ಲೇಖಕ ನಾ. ಕಾರಂತ ಪೆರಾಜೆ ಅವರ ಹಲಸು ಸ್ನೇಹಿ ಕೂಟದ ಹಿನ್ನೋಟದ ಹೆಜ್ಜೆಗಳು ‘ಫಲಪ್ರದ’ ಕೃತಿಯನ್ನು ಅಡಿಕೆ ಪತ್ರಿಕೆಯ ಪ್ರಕಾಶಕ ಪಡಾರು ರಾಮಕೃಷ್ಣ ಶಾಸ್ತ್ರಿ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಹಿತ್ತಲ ಗಿಡವಾಗಿದ್ದ ಹಲಸು ಪ್ರಸ್ತುತ ತನ್ನ ಮೌಲ್ಯವರ್ಧಿತ ಉತ್ಪನ್ನ, ವಿಶೇಷ ಆವಿಷ್ಕಾರದ ಕಾರಣದಿಂದಾಗಿ ತುಂಬಾ ಬೆಳದಿದೆ. ಅಡಿಕೆ ಪತ್ರಿಕೆಯು ಹಲಸು ಬಗ್ಗೆ ಹಲವು ಲೇಖನಗಳನ್ನು ಪ್ರಕಟಿಸಿ, ಹಲಸಿಗೆ ಸ್ಥಾನ ಮಾನ ನೀಡುವ ನಿಟ್ಟಿನಲ್ಲಿ ಹಲಸು ಅಭಿಯಾನ ನಡಸಲಾಗುತ್ತಿದೆ ಎಂದರು.ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ, ಗೇರು ಸಂಶೋಧನಾ ನಿರ್ದೇಶನಾಲಯ(ಡಿಸಿಆರ್)ದ ನಿರ್ದೇಶಕ ವಿಜ್ಞಾನಿ ಡಾ. ದಿನಕರ ಅಡಿಗ, ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಲಕ್ಷ್ಮೀಕಾಂತ ಆಚಾರ್ಯ ಮಾತನಾಡಿದರು.ನವತೇಜ ಟ್ರಸ್ಟ್‌ ಅಧ್ಯಕ್ಷ ಅನಂತಪ್ರಸಾದ್ ನೈತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಯೋಜಕ ವೇಣುಗೋಪಾಲ್ ಎಸ್.ಜೆ. ಸ್ವಾಗತಿಸಿದರು. ಜೆಸಿಐ ಪುತ್ತೂರು ಅಧ್ಯಕ್ಷ ಮೋಹನ್ ಕೆ. ವಂದಿಸಿದರು. ನಾ. ಕಾರಂತ ಪೆರಾಜೆ ನಿರೂಪಿಸಿದರು. ಸದಾಶಿವ ಮರಿಕೆ, ಸುಹಾಸ್ ಮರಿಕೆ ಸಹಕರಿಸಿದರು.