ಪಿಎಲ್‌ಡಿ ಬ್ಯಾಂಕ್ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಲಿ

| Published : Jun 27 2024, 01:03 AM IST

ಸಾರಾಂಶ

ರೈತರ ಜೀವನಾಡಿ ಆಗಿರುವ ಪಿಎಲ್‌ಡಿ ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಗಂಗಗೊಂಡನಹಳ್ಳಿ ಜಿ.ಕೆ. ಜಗದೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬ್ಯಾಂಕ್‌ನಲ್ಲಿ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ರೈತರಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

- ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಜಿ.ಕೆ.ಜಗದೀಶ್‌ಗೆ ಅಭಿನಂದಿಸಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸಲಹೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ರೈತರ ಜೀವನಾಡಿ ಆಗಿರುವ ಪಿಎಲ್‌ಡಿ ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಗಂಗಗೊಂಡನಹಳ್ಳಿ ಜಿ.ಕೆ. ಜಗದೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬ್ಯಾಂಕ್‌ನಲ್ಲಿ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ರೈತರಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

ಬುಧವಾರ ಪಟ್ಟಣದ ಕಗತೂರು ರಸ್ತೆಯಲ್ಲಿರುವ ಬ್ಯಾಂಕ್‌ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಿಎಲ್ ಡಿ ಬ್ಯಾಂಕ್ ಒಂದು ಕಾಲದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದಿತ್ತು. ಈಗಲೂ ಒಳ್ಳೆಯ ಆರ್ಥಿಕ ವಹಿವಾಟು ನಡೆಸುತ್ತಿದೆ. ಪ್ರಸ್ತುತ ಸರ್ವ ಸದಸ್ಯರ ಉತ್ತಮ ಆಡಳಿತದಿಂದ ಬ್ಯಾಂಕ್ ಲಾಭದಾಯಕ ಸ್ಥಿತಿಯಲ್ಲಿಯೇ ಮುಂದುವರಿದಿದೆ. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡಿ, ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವಲ್ಲಿ ಪಿಎಲ್‌ಡಿ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಶ್ಲಾಘಿಸಿದರು.

ನೂತನ ಅಧ್ಯಕ್ಷ ಗಂಗಗೊಂಡನಹಳ್ಳಿ ಜಿ.ಕೆ. ಜಗದೀಶ್ ಮಾತನಾಡಿ, ಈ ಹಿಂದೆ 1 ಎಕರೆಗೆ ₹63,000 ಸಾಲ ನೀಡಲಾಗುತ್ತಿತ್ತು. ಪ್ರಸ್ತುತ ಈ ಸಾಲದ ಮೊತ್ತವನ್ನು ₹1 ಲಕ್ಷದವರೆಗೆ ಏರಿಕೆ ಮಾಡಲಾಗಿದೆ. ತಾಲೂಕಿನ ಅರ್ಹ ರೈತರು ಈ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರು.

5 ಎಕರೆ ರೈತರಿಗೂ ಟ್ರ್ಯಾಕ್ಟರ್‌ ಸಾಲ:

10 ಎಕರೆ ಭೂಮಿಯನ್ನು ಹೊಂದಿರುವ ರೈತರಿಗೆ ಮಾತ್ರ ಟ್ರ್ಯಾಕ್ಟರ್ ಖರೀದಿಗೆ ಸಾಲ ನೀಡಲಾಗುತ್ತಿತ್ತು. ಈ ನಿಯಮವನ್ನು ಸಡಿಲಗೊಳಿಸಿ, 5 ಎಕರೆ ಭೂ ಪ್ರದೇಶ ಹೊಂದಿರುವ ರೈತರಿಗೂ ಟ್ರ್ಯಾಕ್ಟರ್ ಖರೀದಿಗೆ ಸಾಲ ನೀಡಲಾಗುವುದು. ಬ್ಯಾಂಕ್ ಸರ್ವ ಸದಸ್ಯರನ್ನೂ ವಿಶ್ವಾಸಕ್ಕೆ ಪಡೆದು ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದ ಅವರು ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕಿ ಶೋಭಾ ಉಮೇಶ್, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕರಾದ ಮಲಹಾಳ್ ಕುಮಾರ್, ಪಾಂಡೋಮಟ್ಟಿ ಜಗದೀಶ್, ತಾಲೂಕು ಬಿಜೆಪಿ ಮುಖಂಡರಾದ ಮೆದಿಕೆರೆ ಸಿದ್ದೇಶ್, ಪಾರಿ ಪರಮೇಶ್, ಮಾಚನಾಯ್ಕನಹಳ್ಳಿ ಜಯಣ್ಣ, ತಿಪ್ಪಗೊಂಡನಹಳ್ಳಿ ಮಲ್ಲಿಕಾರ್ಜುನ್, ಪಿ.ಬಿ.ನಾಯಕ, ಕೃಷ್ಣಮೂರ್ತಿ, ಪುರಸಭೆಯ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸದಸ್ಯರಾದ ಕಮಲಾ ಹರೀಶ್, ಸವಿತಾ ರಾಘವೇಂದ್ರ ಶೆಟ್ಟಿ, ಮೊಟ್ಟೆ ಚಿಕ್ಕಣ್ಣ, ತಾಪಂ ಮಾಜಿ ಅಧ್ಯಕ್ಷ ಕಗತೂರು ಪಾಲಾಕ್ಷಪ್ಪ ಮೊದಲಾದವರು ಹಾಜರಿದ್ದರು.

- - - -26ಕೆಸಿಎನ್ಜಿ1:

ಪಿಎಲ್‌ಡಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಗಂಗಗೊಂಡಹಳ್ಳಿ ಜಿ.ಕೆ. ಜಗದೀಶ್ ಅವರನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅಭಿನಂದಿಸಿದರು. ಬ್ಯಾಂಕ್‌ ನಿರ್ದೇಶಕರು, ಸದಸ್ಯರು, ಅಧಿಕಾರಿಗಳು ಇತರರು ಇದ್ದರು.