ಸಮಾಜದ ಸಮಸ್ಯೆಗಳಿಗೆ ಕವಿಗಳು ಕಿವಿಯಾಗಲಿ

| Published : Apr 25 2025, 11:45 PM IST

ಸಮಾಜದ ಸಮಸ್ಯೆಗಳಿಗೆ ಕವಿಗಳು ಕಿವಿಯಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕವಿಯಾದವರು ತಾವು ಕವಿತೆ ಬರೆಯುವ ಮೊದಲು ಅನುಭವಿ ಕವಿಗಳ ಕವಿತೆಗಳನ್ನು ಓದುವ ರೂಢಿ ಬೆಳೆಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಗೋಕಾಕ

ಕವಿತೆಯು ಧ್ವನಿ ಜೊತೆಗೆ ಸಶಕ್ತತೆ ತುಂಬಿಕೊಂಡು ಮೃದತ್ವದ ಜೊತೆಗೆ ಅರ್ಥಪೂರ್ಣವೂ ಆಗಿರಬೇಕು, ಅಂದಾಗ ಮಾತ್ರ ಓದುಗರ ಹೃದಯ ತಟ್ಟುತ್ತದೆ. ಕವಿಗಳು ಪ್ರಚಲಿತ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ ಕಿವಿಯಾಗಬೇಕು. ತಮ್ಮ ಬರಹದ ಮೂಲಕ ಧ್ವನಿ ಮೊಳಗಿಸಬೇಕು ಎಂದು ಕವಯಿತ್ರಿ ಪುಷ್ಪಾ ಮುರಗೋಡ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಮಹಾದೇವಪ್ಪ ಮುನವಳ್ಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾವ್ಯಕೂಟ ಕನ್ನಡ ಬಳಗ ರಾಜ್ಯ ವೇದಿಕೆ, ಗೋಕಾಕ ಗೆಳೆಯರ ಬಳಗ ಹಾಗೂ ಭಾವಯಾನ ವೇದಿಕೆ ಆಶ್ರಯದಲ್ಲಿ ನಡೆದ ಕವಿ ಶಿಕ್ಷಕ ಈಶ್ವರ ಮಮದಾಪೂರ ರವರ ನಾಲ್ಕು ಕೃತಿಗಳ ಬಿಡುಗಡೆಯ ಸಂದರ್ಭದಲ್ಲಿ ಕವಿತೆ ಮತ್ತು ಗಜಲ್ ಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕವಿಯಾದವರು ತಾವು ಕವಿತೆ ಬರೆಯುವ ಮೊದಲು ಅನುಭವಿ ಕವಿಗಳ ಕವಿತೆಗಳನ್ನು ಓದುವ ರೂಢಿ ಬೆಳೆಸಿಕೊಳ್ಳಬೇಕು. ಕನ್ನಡದಲ್ಲಿ ಗಜಲ್ ಪ್ರಕಾರವು ಹೆಚ್ಚು ಜನಪ್ರಿಯವಾಗುತ್ತಿದೆ. ಕನ್ನಡದಲ್ಲಿ ಕವಿತೆ, ಚುಟುಕು ಇತ್ಯಾದಿಗಳ ಜೊತೆಗೆ ಗಜಲ್ ಬರಹದ ಆಸಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಕಾವ್ಯಕೂಟ ಕನ್ನಡ ಬಳಗವು ಶ್ರಮಿಸುತ್ತಿರುವುದು ಅಭಿನಂದನೀಯ ಎಂದರು.

ಬೆಳಗಾವಿ ಜಿಲ್ಲಾ ಕಾವ್ಯಕೂಟ ಕನ್ನಡ ಬಳಗದ ಸಂಚಾಲಕಿ ಆಶಾ ಯಮಕನಮರ್ಡಿ ಮಾತನಾಡಿ, ಕಾವ್ಯಕೂಟ ಬಳಗವು ಸಾಹಿತ್ಯದ ಕಲಿಕಾರ್ಥಿಗಳಿಗೆ ಮತ್ತು ಕವಿಗಳಿಗೆ ನಿತ್ಯ ಕಮ್ಮಟದಂತೆ ಕಾರ್ಯ ನಿರ್ವಹಿಸುತ್ತಿದೆ ಎಂದರು. ವೇದಿಕೆಯ ಮೇಲೆ ಬಳ್ಳಾರಿಯ ಅಬ್ದುಲ್ ಹೈ ತೋರಣಗಲ್ಲು, ರಾಣಿ ಚೆನ್ನಮ್ಮಾ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಬಿ.ಎಸ್.ನಾವಿ, ಈಶ್ವರಚಂದ್ರ ಬೆಟಗೇರಿ, ಈಶ್ವರ ಮಮದಾಪೂರ ಇದ್ದರು.

ಸುಮಾರು 40 ಕವಿಗಳು ತಮ್ಮ ಕವಿತೆ ಹಾಗೂ ಗಝಲ್‌ಗಳನ್ನು ವಾಚಿಸಿದರು. ಕನ್ನಡ ಜಾಗಟೆ ಕವಿತೆ ಮೂಲಕ ರಾಮಚಂದ್ರ ಕಾಕಡೆ ಚಾಲನೆ ನೀಡಿದರು. ಮಾರುತಿ ದೇಸಾಯಿಯವರು ಈಶ್ವರ ಮಮದಾಪೂರ ರವರ ಕುರಿತು ಕವನ ವಾಚಿಸಿದರು. ದುಂಡು ಪೂಜಾರಿ ಸಿದ್ದೇಶ್ವರ ಶ್ರೀಗಳ ಕುರಿತು, ಬಾಲಕೃಷ್ಣ ತಿಗಡಿ ಬುದ್ಧಿ ಜೀವಿಗಳು ಕುರಿತು ವಾಚಿಸಿದರು. ಪ್ರಕಾಶ ಕೋಟಿನತೋಟ, ಇಸ್ಮಾಯಿಲ್ ತಳಕಲ್, ಸುರೇಶ್ ಮುದ್ದಾರ, ಜಯಾನಂದ ಮಾದರ, ವಿದ್ಯಾ ರೆಡ್ಡಿ, ಸಲಿಂ ಚಿನ್ನಾಪೂರ, ಸುಗಂಧಾ ಡಂಬಳ, ರಾಜೇಶ್ವರಿ ಸತ್ತಿಗೇರಿ, ಪ್ರಮೀಳಾ ಜಕ್ಕನ್ನವರ, ಶೈಲಾ ಕೊಟಬಾಗಿ, ನಾಗಮ್ಮ ಪೂಜಾರಿ, ಯಶೋಧಾ ಸಂಕಣ್ಣವರ, ಜ್ಯೋತಿ ದೊಡ್ಡನ್ನವರ ಆನಂದ ಮಾಳವಾದೆ, ರಾಯಪ್ಪ ಗುದಗನವರ ಮುಂತಾದವರ ಕವಿತೆಗಳನ್ನು ವಾಚಿಸಿದರೆ ಶಮಾ ಜಮಾದಾರ, ಜ್ಯೋತಿ ಮಾಳಿ, ನಿರ್ಮಲಾ ಪಾಟೀಲ್, ಈಶ್ವರ ಮಮದಾಪೂರ, ಎಂ.ಆರ್.ಕೆ ಮುಂತಾದವರು ಗಜಲ್ ವಾಚಿಸಿ ಗಮನ ಸೆಳೆದರು. ಜ್ಯೋತಿ ಮಾಳಿ ನಿರ್ವಹಿಸಿದರು.