ಮಕ್ಕಳ ಹಕ್ಕುಗಳ ರಕ್ಷಣೆ ಮನೆಗಳಿಂದ ಆರಂಭವಾಗಲಿ

| Published : Jul 11 2024, 01:32 AM IST

ಸಾರಾಂಶ

ಭಾರತದಂತಹ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ರಾಷ್ಟ್ರಗಳಲ್ಲಿ ಹಲವಾರು ಸಾಮಾಜಿಕ ಸವಾಲುಗಳು ತಾಂಡವವಾಡುತ್ತಿವೆ. ಶಿಕ್ಷಣ, ಬಾಲ ಕಾರ್ಮಿಕತೆ, ಬಾಲ್ಯವಿವಾಹ, ಭಿಕ್ಷಾಟನೆ, ಬಾಲಾಪರಾಧದಂತಹ ಸಮಸ್ಯೆಗಳಿಂದಾಗಿ ಮಕ್ಕಳು ದೌರ್ಜನ್ಯಕ್ಕೆ ಒಳಗುತ್ತಿದ್ದಾರೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗ ಮುಖ್ಯಸ್ಥ ಡಾ. ಎಂ.ಯು. ಲೋಕೇಶ್‌ ದಾವಣಗೆರೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

- ಮಕ್ಕಳ ಹಕ್ಕುಗಳ ಕುರಿತ ವಿಶೇಷ ಉಪನ್ಯಾಸದಲ್ಲಿ ಡಾ.ಲೋಕೇಶ ಸಲಹೆ । ಕುರ್ಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಭಾರತದಂತಹ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ರಾಷ್ಟ್ರಗಳಲ್ಲಿ ಹಲವಾರು ಸಾಮಾಜಿಕ ಸವಾಲುಗಳು ತಾಂಡವವಾಡುತ್ತಿವೆ. ಶಿಕ್ಷಣ, ಬಾಲ ಕಾರ್ಮಿಕತೆ, ಬಾಲ್ಯವಿವಾಹ, ಭಿಕ್ಷಾಟನೆ, ಬಾಲಾಪರಾಧದಂತಹ ಸಮಸ್ಯೆಗಳಿಂದಾಗಿ ಮಕ್ಕಳು ದೌರ್ಜನ್ಯಕ್ಕೆ ಒಳಗುತ್ತಿದ್ದಾರೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗ ಮುಖ್ಯಸ್ಥ ಡಾ. ಎಂ.ಯು. ಲೋಕೇಶ್‌ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಕುರ್ಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ದಾವಣಗೆರೆ ವಿವಿ ಸಮಾಜ ಕಾರ್ಯ ವಿಭಾಗ (ಎಂಎಸ್‌ಡಬ್ಲ್ಯು) ವಿಭಾಗ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಪಿಡುಗುಗಳು, ಸಮಸ್ಯೆಗಳಿಂದಾಗಿ ಮಕ್ಕಳ ಮೇಲಿನ ದೌರ್ಜನ್ಯಗಳೂ ಹೆಚ್ಚುತ್ತಿವೆ ಎಂದರು.

ಮಕ್ಕಳ ಹಕ್ಕುಗಳ ರಕ್ಷಣೆ ಬಾಲ್ಯದಿಂದಲೇ ಮನೆಗಳಿಂದ ಆರಂಭವಾಗಬೇಕು. ಭಾರತದಲ್ಲಿ ವರ್ಷಕ್ಕೆ ಸುಮಾರು 10 ಲಕ್ಷ ಮಕ್ಕಳು ಕಾಣೆಯಾಗುತ್ತಿದ್ದಾರೆ. ಅದರಲ್ಲಿ ಬಹುತೇಕರು ಮಕ್ಕಳ ಹಕ್ಕುಗಳಿಂದ ವಂಚಿತರಾಗಿ, ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇದು ನಮ್ಮ ದೇಶದ ದುರಂತ. ದೌರ್ಜನ್ಯವನ್ನು ಮೆಟ್ಟಿ ನಿಲ್ಲುವಂತಹ ಸಾಮರ್ಥ್ಯ ನೀವು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ಕವಿತಾ ಮಾತನಾಡಿ, ನಾವು ಮೊದಲು ನಮ್ಮ ಜವಾಬ್ದಾರಿ ನಿರ್ವಹಿಸಬೇಕು. ಅನಂತರ ನಮ್ಮ ಹಕ್ಕುಗಳನ್ನು ಕೇಳಿ ಪಡೆದುಕೊಳ್ಳಬೇಕು. ಹಕ್ಕುಗಳನ್ನು ತಿಳಿದುಕೊಳ್ಳುವ ಜೊತೆಗೆ ಜವಾಬ್ದಾರಿ ಅರಿತು ಬದುಕಬೇಕು. ಹಕ್ಕುಗಳನ್ನು ಪಡೆಯುವಲ್ಲಿ ಅಡ್ಡಿಯಾದರೆ ನಾವು ನಮ್ಮ ಧ್ವನಿ ಎತ್ತಬೇಕು. ಬಾಲ್ಯವಿವಾಹದಿಂದ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗಾಗಿ ಬಾಲಕಿಯರ ಬಾಲ ಮಂದಿರ, ಬಾಲಕರ ಬಾಲ ಮಂದಿರ ಇವೆ. ದೌರ್ಜನ್ಯಕ್ಕೆ, ಶೋಷಣೆಗೊಳಗಾದ ಮಕ್ಕಳಿಗೆ ಪಾಲನೆ, ಪೋಷಣೆ, ರಕ್ಷಣೆ, ಶಿಕ್ಷಣ ಪುನರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿದರು.

ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಸರ್ಕಾರ ಮಾಡುತ್ತದೆ. ಬಾಲ್ಯವಿವಾಹ ಎಲ್ಲಿಯೇ ನಡೆದರೂ 1098 ನಂಬರ್‌ಗೆ ಕರೆ ಮಾಡಿ, ಮಾಹಿತಿ ನೀಡಿದರೆ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಗಮನಕ್ಕೆ ತಂದರೆ, ಅಂತಹ ಕಾನೂನುಬಾಹಿರ ವಿವಾಹಗಳನ್ನು ತಡೆಯುತ್ತೇವೆ. ಅಂತಹ ಮಕ್ಕಳನ್ನು ಬಾಲ್ಯವಿವಾಹ ಪಿಡುಗಿಗೆ ಬಲಿಯಾಗುವುದನ್ನು ತಡೆದು, ಅಪ್ರಾಪ್ತ ಮಕ್ಕಳ ರಕ್ಷಣೆ ಮಾಡಲಾಗುತ್ತದೆ. ಮಕ್ಕಳು ಇಂತಹ ಸಂದರ್ಭದಲ್ಲಿ 1098ಗೆ ಕರೆ ಮಾಡಿ, ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಪಾಲುದಾರರಾಗಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆ ಮುಖ್ಯೋಪಾಧ್ಯಾಯಿನಿ ಕೆ.ಬಿ. ಮೀರಾ ಮಾತನಾಡಿ, ಶಾಲಾ ಮಕ್ಕಳಿಗೆ ಉಪಯುಕ್ತವಾಗುವ ಕಾರ್ಯಕ್ರಮವನ್ನು ದಾವಣಗೆರೆ ವಿವಿ ಸಮಾಜ ಕಾರ್ಯ ವಿಭಾಗ ಹಮ್ಮಿಕೊಂಡಿದ್ದು ಶ್ವಾಘನೀಯ. ಸಂವಿಧಾನ ನಮಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು, ಜವಾಬ್ದಾರಿಯಿಂದ ಪಾಲಿಸಬೇಕು. ಮಕ್ಕಳು, ಪಾಲಕರು ಸಹ ಮಕ್ಕಳ ಹಕ್ಕುಗಳ ಬಗ್ಗೆ ಅರಿಯಬೇಕು. ಈ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ, ಸುರಕ್ಷತೆ, ಉತ್ತಮ ಭವಿಷ್ಯ ಕಟ್ಟಿಕೊಡುವ ಕೆಲಸ ಎಲ್ಲರೂ ಸೇರಿ ಮಾಡೋಣ ಎಂದರು.

ದಾವಿವಿ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕರಾದ ಡಾ.ಬಿ.ಎಸ್.ಪ್ರದೀಪ, ಡಾ.ಪಟವರ್ದನ್ ರಾಠೋಡ್‌, ಡಾ.ಬಿ.ಪಿ.ಶಿವಲಿಂಗಪ್ಪ, ಡಾ.ಕೆ.ತಿಪ್ಪೇಶ, ಶಾಲೆ ಸಿಬ್ಬಂದಿ ಎಸ್.ಪಾರ್ವತಮ್ಮ, ಎಚ್.ವಿರೂಪಾಕ್ಷಿ, ಎ.ಆರ್.ರಾಘವೇಂದ್ರ, ಎಂ.ವಿ. ಶಕುಂತಲ, ಎಸ್.ಪ್ರಕಾಶ, ಕಾವ್ಯ, ಎಂ.ನಾಗರಾಜ ಇತರರು ಇದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಛಾಯಾಂಕ, ಸಮಾಜ ಕಾರ್ಯ ಪ್ರಶಿಕ್ಷಣಾರ್ಥಿಗಳಾದ ಕೆ.ವಿ.ರಮ್ಯಾ, ಕೆ.ಜಿ.ಮಂಜುನಾಥ, ಎಚ್.ಎಸ್. ಪರಿಮಳ ಕಾರ್ಯಕ್ರಮ ನಡೆಸಿಕೊಟ್ಟರು.

- - -

ಬಾಕ್ಸ್ * ದೇಶದಲ್ಲಿ 1.26 ಕೋಟಿಗೂ ಅಧಿಕ ಬಾಲಕಾರ್ಮಿಕರು ಕುರ್ಕಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಸಿ.ಎನ್.ಜಗದೀಶ ಕೂಲಂಬಿ ಮಾತತಾಡಿ, ಸಂವಿಧಾನದ 24ನೇ ವಿಧಿ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆರ್ಥಿಕ ಸಂಪಾದನೆಯ ಉದ್ದೇಶದಿಂದ ದುಡಿಯುವುದನ್ನು ಬಾಲ ಕಾರ್ಮಿಕತೆ ಎನ್ನಲಾಗುತ್ತದೆ. ವಿಶ್ವದ ಬಡ ದೇಶಗಳಲ್ಲಿ ಪ್ರತಿ 5 ಮಕ್ಕಳಲ್ಲಿ ಒಂದು ಮಗು ಬಾಲ ಕಾರ್ಮಿಕವಾಗಿರುತ್ತದೆ. ವಿಶ್ವದ ಶೇ.70 ಬಾಲ ಕಾರ್ಮಿಕರನ್ನು ಕೃಷಿ ಕ್ಷೇತ್ರವೊಂದರಲ್ಲೇ ಕಾಣಬಹುದು. 2011ರ ಜನಗಣತಿ ಪ್ರಕಾರ ಭಾರತದಲ್ಲಿ 1.26 ಕೋಟಿ ಹಾಗೂ ವಿಶ್ವಾದ್ಯಂತ 21.5 ಕೋಟಿ ಬಾಲ ಕಾರ್ಮಿಕರಿದ್ದಾರೆ ಎಂದು ತಿಳಿಸಿದರು.

- - - -10ಕೆಡಿವಿಜಿ5:

ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ದಾವಣಗೆರೆ ವಿವಿ ಸಮಾಜ ಕಾರ್ಯ ವಿಭಾಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಮಕ್ಕಳ ಹಕ್ಕುಗಳ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.