ಸಾರಾಂಶ
ಬಳ್ಳಾರಿ: ಶಾಸಕ ನಾಗೇಂದ್ರ ಬಗ್ಗೆ ಮಾತನಾಡುವಾಗ ಶಾಸಕ ಜನಾರ್ದನ ರೆಡ್ಡಿ ಎಚ್ಚರಿಕೆಯಿಂದರಬೇಕು. ಶೋಷಿತ ಸಮುದಾಯದ ನಾಯಕನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ನಾವು ಸಹಿಸುವುದಿಲ್ಲ. ಕೇಸ್ ದಾಖಲಿಸಿ, ಹೋರಾಟ ನಡೆಸುತ್ತೇವೆ ಎಂದು ಶೋಷಿತ ಸಮುದಾಯಗಳ ಒಕ್ಕೂಟ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ರಾಮ್‌ಪ್ರಸಾದ್ ಮಾತನಾಡಿ, ಕೆಲ ದಿನಗಳ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ಶಾಸಕ ಜನಾರ್ದನ ರೆಡ್ಡಿ, ವಾಲ್ಮೀಕಿ ಸಮಾಜದ ನಾಯಕ ಹಾಗೂ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರನ್ನು ಡಸ್ಟ್‌ಬಿನ್‌ಗೆ ಹೋಲಿಸಿದ್ದಾರೆ. ಈ ರೀತಿಯ ಹೇಳಿಕೆಗಳನ್ನು ನೀಡುವುದನ್ನು ಜನಾರ್ದನ ರೆಡ್ಡಿ ನಿಲ್ಲಿಸಬೇಕು. ಇಲ್ಲದಿದ್ದರೆ ರೆಡ್ಡಿ ವಿರುದ್ಧ ಕೇಸ್ ದಾಖಲಿಸಿ, ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಜನಾರ್ದನ ರೆಡ್ಡಿ ಒಂದು ಬಾರಿ ಮಾತ್ರ ಶಾಸಕರಾಗಿದ್ದಾರೆ. ನಾಗೇಂದ್ರ ಅವರು ನಾಲ್ಕುಬಾರಿ ಶಾಸಕರಾಗಿದ್ದಾರೆ. ಒಂದು ಬಾರಿ ಗೆದ್ದವರು ಈ ರೀತಿಯ ಅವಾಚ್ಯವಾಗಿ ನಿಂದಿಸುವುದನ್ನು ಮೊದಲು ನಿಲ್ಲಿಸಬೇಕು. ನಾಗೇಂದ್ರ ಅವರಿಗೆ ತನ್ನದೇ ಆದ ಗೌರವ ಇದ್ದೇ ಇದೆ. ರೆಡ್ಡಿ ಅವರಿಂದ ಕಲಿಯಬೇಕಾದ ಅಗತ್ಯವಿಲ್ಲ ಎಂದರು.
ಕಾಂಗ್ರೆಸ್ ಮುಖಂಡ ಹುಮಾಯೂನ್ ಖಾನ್ ಮಾತನಾಡಿ, ಶಾಸಕ ನಾಗೇಂದ್ರ ಅವರ ವಿರುದ್ಧ ಏಕವಚನದಲ್ಲಿ ನಿಂದಿಸಿರುವ ಜನಾರ್ದನ ರೆಡ್ಡಿ ಸಂಡೂರು ಉಪ ಚುನಾವಣೆ ಘೋಷಣೆ ಬಳಿಕ ನಾಲಿಗೆಗೆ ಲಗಾಮು ಇಲ್ಲದಂತೆ ಮಾತನಾಡಲು ಶುರು ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರ ವಿರುದ್ಧವೂ ನಾನಾ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.ಜನಾರ್ದನ ರೆಡ್ಡಿಗೆ ಬೇರೆಯವರನ್ನು ಅಗೌರವದಿಂದ ಮಾತನಾಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಬಳ್ಳಾರಿಯಲ್ಲಿ ಹುಟ್ಟಿ ಬೆಳೆದ ನಮಗೆ ಜನಾರ್ದನ ರೆಡ್ಡಿಯ ಬಗ್ಗೆ ಎಲ್ಲವೂ ಗೊತ್ತಿದೆ. ಹಿರಿಯರನ್ನು ಏಕವಚನದಲ್ಲಿ ಮಾತನಾಡುವುದನ್ನೇ ಬಂಡವಾಳ ಮಾಡಿಕೊಂಡಿರುವ ಜನಾರ್ದನ ರೆಡ್ಡಿ, ಎನ್ನೋಬಲ್ ಸಂಸ್ಥೆ ಮೂಲಕ ಜನರಿಗೆ ಯಾವ ರೀತಿ ಸೇವೆ ಮಾಡಿದ್ದಾರೆ ಎಂಬುದೂ ಗೊತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಎ.ಮಾನಯ್ಯ ವ್ಯಂಗ್ಯವಾಡಿದರು.
ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ವಾಕ್ ಸ್ವಾತಂತ್ರ್ಯ ಇದೆ ಎಂದು ಏನೋನೋ ಮಾತನಾಡುವುದು ಸರಿಯಲ್ಲ. ಜನಾರ್ದನ ರೆಡ್ಡಿ ಅತ್ಯಂತ ಕೆಳ ಮಟ್ಟದಲ್ಲಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ನಾಲ್ಕು ಬಾರಿ ಶಾಸಕರಾಗಿರುವ ನಾಗೇಂದ್ರ ಅವರು ಡಸ್ಟ್‌ಬಿನ್ ಆಗಲು ಸಾಧ್ಯವೇ? ಎಂದರಲ್ಲದೆ, ಜನಾರ್ದನ ರೆಡ್ಡಿಯ ನಡೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.ಒಕ್ಕೂಟದ ಮುಖಂಡರಾದ ಡಾ.ಗಾದಿಲಿಂಗನಗೌಡ, ಯರಗುಡಿ ಮೋಕಾ ಮುದಿಮಲ್ಲಯ್ಯ, ಬೆಣಕಲ್ ಬಸವರಾಜಗೌಡ, ಸಿದ್ದಮ್ಮನಹಳ್ಳಿ ತಿಮ್ಮನಗೌಡ, ವಿ.ಕೆ.ಬಸಪ್ಪ, ಎರಕುಲಸ್ವಾಮಿ, ಕೆ.ಎರಿಸ್ವಾಮಿ, ಪಿ.ಜಗನ್ನಾಥ್ (ಜಗನ್), ಸಂಗನಕಲ್ಲು ವಿಜಯಕುಮಾರ್, ಬಿ.ಎಂ.ಪಾಟೀಲ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಶೋಷಿತ ಸಮುದಾಯಗಳ ಒಕ್ಕೂಟದ ಎಚ್ಚರಿಕೆ ಕುರಿತು ಸಂಡೂರಿನಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಜನಾರ್ದನ ರೆಡ್ಡಿ, ಡಸ್ಟ್‌ಬಿನ್ ಎಂದರೆ ಕಸ ಹಾಕುವ ಜಾಗ. ನಾಗೇಂದ್ರ ಡಸ್ಟ್‌ಬಿನ್‌ಗಿಂತಲೂ ಕಳಪೆ ಡಸ್ಟ್. ನನ್ನ ವಿರುದ್ಧ ನೂರು ಕೇಸ್ ಹಾಕಿದರೂ ಅಂಜುವುದಿಲ್ಲ ಎಂದಿದ್ದಾರೆ.