ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಫೆ.22ರಿಂದ 24ರವರೆಗೆ ಮುಧೋಳ ಮತ್ತು ಬೆಳಗಲಿ ಗ್ರಾಮದಲ್ಲಿ ರನ್ನ ಉತ್ಸವ (ವೈಭವ)ವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಉತ್ಸವ ಯಶಸ್ಸಿಗೆ ತಾಲೂಕಿನ ಸಮಸ್ತ ನಾಗರಿಕರು, ಅಧಿಕಾರಿಗಳು, ರನ್ನ ಅಭಿಮಾನಿಗಳು, ವರ್ತಕರು, ಸಾಹಿತಿಗಳು ಹೀಗೆ ಪ್ರತಿಯೊಬ್ಬರು ಕೈ ಜೋಡಿಸಿ ಸಹಾಯ ಸಹಕಾರ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಕೋರಿದರು.ನಗರದ ರನ್ನ ಸಾಂಸ್ಕೃತಿಕ ಭವನದ ಮುಂಭಾಗದಲ್ಲಿ ಬುಧವಾರ ರನ್ನ ಉತ್ಸವ (ವೈಭವ) ಲೋಗೋ, ಬಿತ್ತಿಪತ್ರ, ವಿಡಿಯೋ ಬಿಡುಗಡೆಗೊಳಿಸಿ ನಂತರ ನಾಮಫಲಕ ಮತ್ತು ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಫೆ.22 ಮೊದಲು ದಿನದಂದು ತಾಲೂಕಿನ ರನ್ನ ಬೆಳಗಲಿಯಲ್ಲಿ ಫೆ.23, 24 ಎರಡು ದಿನಗಳವರೆಗೆ ಮುಧೋಳ ನಗರದಲ್ಲಿ ರನ್ನ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು.
ಈಗಾಗಲೇ ಸುಮಾರು 25 ಸಮಿತಿ ರಚಿಸಲಾಗಿದೆ. ಆಯಾ ಸಮಿತಿಯವರು ತಮಗೆ ಒಪ್ಪಿಸಿರುವ ಕೆಲಸ ಕಾರ್ಯಗಳನ್ನು ಅತೀ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಬಹುತೇಕ ಸಿದ್ದತೆ ಕಾರ್ಯಗಳು ಅಂತಿಮ ಹಂತಕ್ಕೆ ತಲುಪಿದೆ. ತಾಲೂಕು, ಜಿಲ್ಲಾ ಸೇರಿ ರಾಜ್ಯಮಟ್ಟದ ವಿವಿಧ ಕ್ಷೇತ್ರದ ಕಲಾವಿದರು, ಹಿರಿಯ-ಕಿರಿಯ ಸಾಹಿತಿಗಳು, ಚಲನಚಿತ್ರ ನಟ-ನಟಿಯರು, ಶ್ರೇಷ್ಠ ಸಂಗೀತ ಕಲಾವಿದರು ಭಾಗವಹಿಸಲಿದ್ದಾರೆ. ಗ್ರಾಮೀಣ ಕ್ರೀಡೆಗಳು, ಕವಿಗೋಷ್ಠಿ, ರನ್ನನ ಕುರಿತು ವಿಚಾರಗೋಷ್ಠಿ ನಡೆಯಲಿವೆ. ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಹೀಗೆ 3 ರನ್ನ ರಥಗಳು ಸಂಚರಿಸಲಿವೆ. ರನ್ನ ಉತ್ಸವ ಇದು ರಾಜ್ಯ ಮಟ್ಟದ್ದಾಗಿದ್ದು, ಇಡೀ ರಾಜ್ಯದ ಜನರು ಆಗಮಿಸಲಿದ್ದಾರೆ ಎಂದು ಹೇಳಿ, ಮುಖ್ಯಮಂತ್ರಿಗಳು ರನ್ನ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ವಿವಿಧ ಇಲಾಖೆಗಳ ಸಚಿವರು ಕೂಡಾ ಆಗಮಿಸಲಿದ್ದಾರೆಂದರು.ಈ ರನ್ನ ಉತ್ಸವ ಅಧಿಕಾರಿಗಳ ಉತ್ಸವವಲ್ಲ. ಇದು ನಾಡಿನ ಉತ್ಸವವಾಗಿದೆ. ಪ್ರತಿಯೊಬ್ಬರು ಇದರಲ್ಲಿ ಭಾಗವಹಿಸಿ ರನ್ನನ ಹಿರಿಮೆ ಮತ್ತು ಗರಿಮೆ ಇಮ್ಮಡಿಗೊಳಿಸಬೇಕೆಂದರು. ಕಾರ್ಯಕ್ರಮದ ಯಶಸ್ವಿಗೆ ದಾನಿಗಳು ಸ್ವಯಂ ಪ್ರೇರಿತರಾಗಿ ಸಹಾಯ ಸಹಕಾರ ನೀಡುತ್ತಿದ್ದಾರೆ. ಆದರೆ ಯಾರಿಗೂ ಒತ್ತಾಯದಿಂದ ಹಣ ಸಂಗ್ರಹ ಮಾಡುತ್ತಿಲ್ಲವೆಂದು ಸಚಿವರು ಸ್ಪಷ್ಟಪಡಿಸಿದರು.
ನಗರದ ರನ್ನ ಸರ್ಕಲ್ ನಿರ್ಮಾಣಕ್ಕೆ ₹25 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಅದಲ್ಲದೆ ನಗರದ ವಿವಿಧ ರಸ್ತೆ ಇನ್ನಿತರ ಕಾಮಗಾರಿಗಳಿಗೆ ₹1.25 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ರನ್ನ ಉತ್ಸವ ಮೈಸೂರು ದಸರಾ ಮಾದರಿಯಂತೆ ಆಗಲಿ ಎಂಬುದು ಎಲ್ಲರ ಉದ್ದೇಶವಾಗಿದೆ ಎಂದರು.ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿ.ಪಂ ಸಿಇಓ ಶಶಿಧರ ಕುರೇರ, ಎಸ್ಪಿ ಅಮರನಾಥ ರೆಡ್ಡಿ, ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಕರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ರನ್ನ ಪ್ರತಿಷ್ಠಾನ ಮತ್ತು ವಿವಿಧ ಸಮಿತಿಗಳ ಪದಾಧಿಕಾರಿಗಳು, ರನ್ನನ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
-----