ಸಾರಾಂಶ
- ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಾವೆಲ್ಲರೂ ಕನ್ನಡತನ ಉಳಿಸಿಕೊಳ್ಳಲು ಕಂಕಣಬದ್ಧರಾಗೋಣ, ತಾಯಿ ಭುವನೇಶ್ವರಿ ಸೇವೆಯನ್ನು ಮನ:ಪೂರ್ವಕವಾಗಿ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಕರೆ ನೀಡಿದರು.
ಜಿಲ್ಲಾಡಳಿತ ಜಿಲ್ಲಾ ಆಟದ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಚಿವರು ಮಾತನಾಡಿದರು. ನಮ್ಮ ಭಾರತ ದೇಶ ಗಣರಾಜ್ಯವಾದ ನಂತರ ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಕೂಗು ಮಹತ್ವ ಪಡೆದಿತ್ತು. ಸುಗಮ ಆಡಳಿತ ವ್ಯವಸ್ಥೆಗೆ ಸ್ಥಳೀಯ ಪ್ರಾಂತ್ಯದ ಭಾಷೆ ಆಧಾರಿತ ಆಡಳಿತ ವ್ಯವಸ್ಥೆ ಪರಿಣಾಮಕಾರಿಯಾಗಿದ್ದು, ಆ ನಿಟ್ಟಿನಲ್ಲಿ ಪಂಡಿತ್ ಜವಾಹರಲಾಲ್ ನೆಹರು ರವರ ದೂರ ದೃಷ್ಟಿ ಆಡಳಿತದ ಪರಿಣಾಮ ಕನ್ನಡ ಭಾಷೆ ಮಾತನಾಡುವ ನಮ್ಮ ಪ್ರದೇಶಕ್ಕೆ ಮಾನ್ಯತೆ ಸಿಕ್ಕಿತು. ದೇಶಾದ್ಯಂತ ಭಾಷಾ ವಾರು ರಾಜ್ಯಗಳ ರಚನೆಗೆ ನಾಂದಿ ಹಾಡಲಾಯಿತು. ಅದರ ಪರಿಣಾಮವಾಗಿ 1956ರ ನ. 1 ರಂದು ಭಾಷಾವಾರು ರಾಜ್ಯ ರಚನೆ ಅನುಷ್ಠಾನಕ್ಕೆ ಬಂದು ಮೈಸೂರು ರಾಜ್ಯವಾಗಿ ಉಗಮವಾಯಿತು ಎಂದರು.ಉತ್ತರ ಕರ್ನಾಟಕದ ಹಲವು ಮಹನೀಯರ ಬೇಡಿಕೆ ಹಾಗೂ ಆ ಕಾಲಘಟ್ಟದ ಸಾಹಿತಿಗಳು, ಕವಿಗಳು, ವಿಮರ್ಶಕರು ಹಾಗೂ ಬುದ್ಧಿಜೀವಿಗಳ ಹೋರಾಟದ ಫಲವಾಗಿ ಮೈಸೂರು ರಾಜ್ಯವನ್ನು ನಮ್ಮ ರಾಜ್ಯದ ಎಲ್ಲಾ ಬಹುಭಾಗ ಹಾಗೂ ಸಂಸ್ಕೃತಿ ಪ್ರತಿನಿಧಿಸುವಂತಹ ’ಕರ್ನಾಟಕ’ ಎಂಬ ಹೆಸರು ನಮ್ಮ ರಾಜ್ಯಕ್ಕೆ 1973ರ ನವಂಬರ್ 1 ರಂದು ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸು ನೇತೃತ್ವದಲ್ಲಿ ನಾಮಕರಣವಾಯಿತು ಎಂದು ಹೇಳಿದರು.
ಎರಡೂವರೆ ಸಾವಿರ ವರ್ಷಗಳ ಹಿರಿಮೆ ಹೊಂದಿರುವ ನಮ್ಮ ಕನ್ನಡ ನಾಡಿನಲ್ಲಿ ತಾಯಿ ಭುವನೇಶ್ವರಿಯನ್ನು ಕರುನಾಡ ದೇವಿಯಾಗಿ ಆರಾಧಿಸುತ್ತಿದ್ದೇವೆ. ನಮಗೆ ಕನ್ನಡ ಎಂದರೆ ಬರಿ ನುಡಿ ಅಲ್ಲ, ಅದು ಜೀವ, ಭಾವ, ಉಸಿರು ಮತ್ತು ನಮ್ಮ ಹೆಮ್ಮೆ. ಮಹಾಕವಿ ಕುವೆಂಪು ಅವರು ಹೇಳಿದಂತೆ ’ಕನ್ನಡವೇ ಸತ್ಯ ಕನ್ನಡವೇ ನಿತ್ಯ’ ಎಂಬ ಭಾವನೆ ಕನ್ನಡಿಗರ ಎದೆಯಲ್ಲಿ ಸದಾ ಹಸಿರಾಗಿರಬೇಕು."ಕರುನಾಡು " ಎಂಬ ಪದ ಎತ್ತರದ ಭೂಭಾಗ ಎನ್ನುವ ಅರ್ಥ ನೀಡುತ್ತದೆ. ಕರ್ನಾಟಕದ ಜನತೆ ನಿಜಕ್ಕೂ ಎಲ್ಲಾ ಅರ್ಥದಲ್ಲೂ ಎತ್ತರದ, ಗೌರವದ ಸ್ಥಾನಮಾನಗಳಿಗೆ ಸದಾ ಅರ್ಹರಾಗಿದ್ದಾರೆ ಎಂದು ಹೇಳಿದರು.
ಮಹಾಕಾವ್ಯಗಳ ರಚನೆಗೆ ಸಂಸ್ಕೃತ ಬಿಟ್ಟು ಕನ್ನಡವನ್ನು ಆಯ್ದುಕೊಂಡ ಪಂಪ, ಪೊನ್ನ, ರನ್ನರಂತಹ ಮಹಾಕವಿಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಪ್ರಾಕಾರಗಳು ವಿಶೇಷ ಮೆರುಗು ತಂದುಕೊಟ್ಟಿವೆ ಎಂದರು.ಕನ್ನಡಕ್ಕೆ ಹೊಸ ಕಾಯಕಲ್ಪ ನೀಡಲು ಶ್ರಮಿಸಿದ ಗೋವಿಂದ ಪೈ, ಪಂಜೆ ಮಂಗೇಶರಾಯರು, ಬಿಎಂಶ್ರೀ, ಅಂಬಳೆ ಕೃಷ್ಣ ಶಾಸ್ತ್ರಿ ಹಾಗೂ ಕನ್ನಡಕ್ಕೆ ದೇಶದಲ್ಲಿಯೇ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಗೌರವ ತಂದು ಕೊಟ್ಟ ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿನಾಯಕ ಕೃಷ್ಣ ಗೋಕಾಕ್, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಹಾಗೂ ಚಂದ್ರಶೇಖರ ಕಂಬಾರರು ಕನ್ನಡಿಗರನ್ನು ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ ಎಂದು ಹೇಳಿದರು.
ಕನ್ನಡ ಮಾತನಾಡುವ ಜನರೆಲ್ಲಾ ಒಂದುಗೂಡಲು, ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದು ಮಾಡಲು ಕರ್ನಾಟಕದ ಕುಲ ಪುರೋಹಿತರಾದ ಆಲೂರು ವೆಂಕಟರಾಯರ ಜೊತೆಗೂಡಿ ಅಸಂಖ್ಯಾತ ಕನ್ನಡಿಗರು, ಕನ್ನಡಾಭಿಮಾನಿಗಳು ಮಾಡಿದ ಹೋರಾಟದ ಫಲ ಇಂದು ನಾವು ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲು ಕಾರಣವಾಗಿದೆ ಎಂದರು.ಎರಡೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡಕ್ಕೆ ’ಶಾಸ್ತ್ರೀಯ ಭಾಷೆ’ ಗೌರವ ಸಿಕ್ಕಿರುವುದು ನಮ್ಮ ಹೆಮ್ಮೆ. ಆದರೆ, ಭಾಷೆ ನಿರಂತರವಾಗಿ ಬಳಕೆಯಾಗುತ್ತಿದ್ದರೆ ಮಾತ್ರವೇ ಅದರ ಸೊಬಗು ಸೌಂದರ್ಯ, ಆದರ ಅಭಿಮಾನ ಹೆಚ್ಚಾಗುವುದು ಮತ್ತು ಈ ಭಾಷೆಯನ್ನು ಸಮೃದ್ಧವಾಗಿಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.ಶಾಸಕ ಎಚ್.ಡಿ. ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಉಪಸ್ಥಿತರಿದ್ದರು.
--ಬಾಕ್ಸ್--ನಾಡಿನ ಮಹತ್ವ ಸಾರಿದ ಕಾರ್ಯಕ್ರಮ
ರಾಜ್ಯೋತ್ಸವದ ಈ ಸು-ಸಂದರ್ಭದ ಮಹತ್ವವನ್ನು ಪ್ರಸ್ತುತ ಸಮಾಜದ ಎಲ್ಲಾ ಯುವಕ, ಯುವತಿಯರು ಹಾಗೂ ನಾಗರಿಕರಿಗೆ ಪರಿಚಯಿಸಲು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಯೋಚನೆ ಹಾಗೂ ಯೋಜನೆಯಂತೆ "ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ " ಎಂಬ ಶೀರ್ಷಿಕೆಯಡಿ ’ಕರ್ನಾಟಕ ಸಂಭ್ರಮ-50 ಎಂಬ ಅರ್ಥಗರ್ಭಿತ ಕಾರ್ಯಕ್ರಮ ಆಯೋಜಿಸಿ ಕರ್ನಾಟಕ ನಾಮಾಂಕಿತದ ಮಹತ್ವ ಸಾರಿದೆ ಎಂದರು.- 1 ಕೆಸಿಕೆಎಂ 1
ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಸಾಮೂಹಿಕ ಕವಾಯತಿನಲ್ಲಿ ಪಾಲ್ಗೊಂಡಿದ್ದ ತುಕಡಿಗಳಿಂದ ಗೌರವ ಸ್ವೀಕರಿಸಿದರು.