ಎಲ್ಲ ಹೋರಾಟಗಾರರನ್ನು ಸ್ಮರಣೆ ಮಾಡುವುದು ಆದ್ಯ ಕರ್ತವ್ಯವಾಗಿದೆ. ನಮ್ಮ ಸಂವಿಧಾನದ ಆಶಯದಂತೆ ನಡೆದುಕೊಂಡು ದೇಶ ಕಟ್ಟುವ ನಿಟ್ಟಿನಲ್ಲಿ ಕೈಜೋಡಿಸೋಣ.

ಕನ್ನಡಪ್ರಭ ವಾರ್ತೆ ವಿಜಯಪುರ

ಸ್ವಾತಂತ್ರ‍್ಯ ಯೋಧರ ತ್ಯಾಗ, ಬಲಿದಾನ, ಹೋರಾಟ ನಮ್ಮೆಲ್ಲರಿಗೂ ಮಾರ್ಗದರ್ಶನ. ಪ್ರತಿದಿನ ಆ ಹೋರಾಟಗಾರರ ತ್ಯಾಗ ಮತ್ತು ಬಲಿದಾನ ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಹೇಳಿದರು.ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ, ಜಿಪಂ, ಮಹಾನಗರಪಾಲಿಕೆ ಭಾರತೀಯ ಸೇವಾದಳ, ಭಾರತೀಯ ಸ್ಕೌಟ್ಸ್ ಹಾಗೂ ಗೈಡ್ಸ್ ಇವರ ಸಹಯೋಗದಲ್ಲಿ ಹುತಾತ್ಮ ದಿನಾಚರಣೆ ಅಂಗವಾಗಿ ನಗರದ ಹುತಾತ್ಮರ ವೃತ್ತದಲ್ಲಿರುವ ಸ್ಮಾರಕಕ್ಕೆ ಹಾಗೂ ಮಹಾತ್ಮ ಗಾಂಧಿಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಎಲ್ಲ ಹೋರಾಟಗಾರರನ್ನು ಸ್ಮರಣೆ ಮಾಡುವುದು ಆದ್ಯ ಕರ್ತವ್ಯವಾಗಿದೆ. ನಮ್ಮ ಸಂವಿಧಾನದ ಆಶಯದಂತೆ ನಡೆದುಕೊಂಡು ದೇಶ ಕಟ್ಟುವ ನಿಟ್ಟಿನಲ್ಲಿ ಕೈಜೋಡಿಸೋಣ. ನಮ್ಮದು ಹೆಮ್ಮೆಯ ದೇಶವಾಗಿದೆ. ದೇಶದ ಸೈನಿಕರು ನಮ್ಮ ಹೆಮ್ಮೆಯಾಗಿದ್ದಾರೆ. ಹುತಾತ್ಮರ ದಿನವನ್ನು ಪೂರ್ಣ ಪಾವಿತ್ರ್ಯತೆ ಮತ್ತು ಅತ್ಯುತ್ತಮವಾಗಿ ಆಚರಿಸಲಾಗುತ್ತಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರ ಪಾತ್ರ ಮತ್ತು ರಾಷ್ಟ್ರೀಯ ಐಕ್ಯತೆಯ ಮೂಲ ಉದ್ಧೇಶಗಳ ಕುರಿತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಗೌರವ ಸಲ್ಲಿಸಲಾಗುತ್ತಿದೆ ಎಂದರು.

ರಾಷ್ಟ್ರಪಿತ ಮಹತ್ಮಾ ಗಾಂಧಿ ಅವರು ತಮ್ಮ ಸತ್ಯ- ಅಹಿಂಸಾ ಮಾರ್ಗದಿಂದ ದೇಶದ ಸ್ವಾತಂತ್ರ‍್ಯಕ್ಕಾಗಿ ಅನೇಕ ಸತ್ಯಾಗ್ರಹ, ಉಪವಾಸ ಕೈಗೊಂಡರು. ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆಗಳು ನಮ್ಮ ಮೇಲೆ ಪ್ರಭಾವ ಬೀರಿ, ಅವರ ವಿಚಾರಧಾರೆಗಳನ್ನು ತಿಳಿಯಬೇಕು. ಈ ದೇಶಕ್ಕಾಗಿ ಹುತಾತ್ಮರಾದ ಅನೇಕ ಧೀರ ಸೈನಿಕರು, ಪೊಲೀಸರು ಅವರ ಕೊಡುಗೆ ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ತಮ್ಮ ಜೀವ ತ್ಯಾಗ ಬಲಿದಾನ ಮಾಡಿ ನಮಗೆ ನೀಡಿದ ಸ್ವಾತಂತ್ರ‍್ಯವನ್ನು ಉಳಿಸಿ, ಸಂರಕ್ಷಿಸುವುದರ ಜೊತೆಗೆ ಶ್ರೀಮಂತಗೊಳಿಸುವುದು ನಮಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆರ್.ಸಿ ಹಿರೇಮಠ ಉಪನ್ಯಾಸ ನೀಡಿ, ಅನೇಕ ಹೋರಾಟಗಾರರ ತ್ಯಾಗ ಬಲಿದಾನದಿಂದ ಪಡೆದುಕೊಂಡ ನಮ್ಮ ಸ್ವಾತಂತ್ರ‍್ಯದ ಐತಿಹಾಸಿಕ ವಿಚಾರಗಳನ್ನು ಆ ಹೋರಾಟಗಾರರ ಜೀವನ ಚರಿತೆ ಅರಿಯುವ ಮೂಲಕ ಯುವಪೀಳಿಗೆ ಪ್ರೇರಣೆ ಹೊಂದಬೇಕು ಎಂದರು. ಮಹಾತ್ಮ ಗಾಂಧಿ ದೇಶದ ಸ್ವಾತಂತ್ರ‍್ಯಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಅನೇಕ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗದ ಫಲವಾಗಿ ದೇಶ ಸ್ವಾತಂತ್ರ‍್ಯ ಹೊಂದಿದೆ ಎಂದು ಹೇಳಿದರು.

ನಂತರ ಹುತಾತ್ಮರ ಚೌಕದಿಂದ ಮಹಾತ್ಮ ಗಾಂಧಿ ಚೌಕಿಗೆ ತೆರಳಿ ಮಹಾತ್ಮಾ ಗಾಂಧಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಪ್ರಾಣ ತೆತ್ತು ಹುತಾತ್ಮರಾದವರ ಸ್ಮರಣಾರ್ಥವಾಗಿ ಮೌನಾಚರಣೆ ಮಾಡಿ, ನಮನ ಸಲ್ಲಿಸಲಾಯಿತು. ವಿದ್ಯಾರ್ಥಿನಿಯರಾದ ತನ್ವಿ ಹಾಗೂ ಈರಮ್ಮ ಭಾರತವನ್ನು ಶ್ರೀಮಂತಗೊಳಿಸಿದ ಸ್ವಾತಂತ್ರ‍್ಯ ಹೋರಾಟಗಾರರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ಯುವಪೀಳಿಗೆ ಆ ದಿಸೆಯಲ್ಲಿ ನಡೆಯೋಣ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.

ಮೇಯರ್ ಮಡಿವಾಳಪ್ಪ ಕರಡಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಪಂ ಉಪಕಾರ್ಯದರ್ಶಿ ಪ್ರಕಾಶ ವಡ್ಡರ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ವಿಜಯಪುರ ತಹಶೀಲ್ದಾರ ಪ್ರಶಾಂತ ಚನಗೊಂಡ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ ಸಲಿಂ ಬಿಜಾಪುರ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.