ಮಾಗಡಿ: ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯಕ್ಕೇನು ಕೊಡುಗೆ ನೀಡಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹಿರಂಗ ಸಭೆ ನಡೆಸಲಿ, ಅಲ್ಲಿಯೇ ಕುಮಾರಸ್ವಾಮಿ ಕೊಡುಗೆಯನ್ನು ಬಹಿರಂಗಪಡಿಸುತ್ತೇವೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಸವಾಲು ಹಾಕಿದರು.
ಮಾಗಡಿ: ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯಕ್ಕೇನು ಕೊಡುಗೆ ನೀಡಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹಿರಂಗ ಸಭೆ ನಡೆಸಲಿ, ಅಲ್ಲಿಯೇ ಕುಮಾರಸ್ವಾಮಿ ಕೊಡುಗೆಯನ್ನು ಬಹಿರಂಗಪಡಿಸುತ್ತೇವೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಹಾಗೂ ಡಿಸಿಎಂ ಬೆಂಗಳೂರಿಗೆ ಮತ್ತು ಮಂಡ್ಯಕ್ಕೆ ಎವ್ಡಿಕೆ ಕೊಡಗೆ ಏನೆಂದು ಮಾಧ್ಯಮಗಳ ಮುಂದೆ ಪ್ರಶ್ನೆ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಅವರಿಬ್ಬರಿಗೂ ತಿಳಿದಿರಲಿ, ಅವರು ಕೇಂದ್ರ ಸಚಿವರಾಗಿದ್ದು ಕೇವಲ ಒಂದು ರಾಜ್ಯಕ್ಕೆ ಸೀಮಿತವಲ್ಲ. ಇಡೀ ದೇಶಕ್ಕೆ ಅವರ ಸೇವೆ ಸಲ್ಲಿಸುತ್ತ ಅವರ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ. ನಿಂತು ಹೋಗಿದ್ದ ಎಷ್ಟೋ ಕಾರ್ಖಾನೆಗಳನ್ನು ಪುನರಾರಂಭ ಮಾಡಿದ್ದಾರೆ. ಅದಿರು ಕಾರ್ಖಾನೆಗಳನ್ನು ಆರಂಭಿಸಿ ಉದ್ಯೋಗಾವಕಾಶಗಳನ್ನು ಕೊಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾಗಿದ್ದಾಗ ರಾಜ್ಯಕ್ಕೆ ಅವರ ಕೊಡುಗೆ ಏನೆಂಬುದು ಸಾಮಾನ್ಯ ಜನಗಳಿಗೂ ಗೊತ್ತಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೂಡ ರಾಜ್ಯಕ್ಕೆ ಮತ್ತು ದೇಶಕ್ಕೆ ದೊಡ್ಡ ಕೊಡುಗೆಯನ್ನೇ ಕೊಟ್ಟಿದ್ದಾರೆ. ಇಬ್ಬರು ನಾಯಕರು ಬಹಿರಂಗ ಸಭೆ ಕರೆಯಲಿ ನಮ್ಮ ನಾಯಕರು ಏನು ಕೊಡುಗೆ ಕೊಟ್ಟಿದ್ದಾರೆಂದು ದಾಖಲೆ ಸಮೇತ ನೀಡಲು ಸಿದ್ದನಿದ್ದೇನೆ. ಈ ರೀತಿ ಮಾಧ್ಯಮಗಳ ಮುಂದೆ ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಹೇಳಿದರು.ಡಿಕೆಶಿ ಮುಖ್ಯಮಂತ್ರಿ ಆಗಲಿ: ಡಿ.ಕೆ.ಶಿವಕುಮಾರ್ ಅವರ ಮುಖ್ಯಮಂತ್ರಿ ಆಗುವ ಪ್ರಯತ್ನ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಶಿವಕುಮಾರ್ ನಮ್ಮ ಜಿಲ್ಲೆಯ ನಾಯಕರು. ಅವರು ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದ್ದಾರೆ. ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಅವರು ಮುಖ್ಯಮಂತ್ರಿಗಳಾದರೆ ನಮ್ಮದೇನು ಅಭ್ಯಂತರವಿಲ್ಲ. ಅಸೂಯೆ ಪಡಲ್ಲ. ಅವರು ಮುಖ್ಯಮಂತ್ರಿಗಳಾಗಲಿ ಎಂದರು.
ಹೇಮೆಗೆ ನಾವೂ ಭೇಟಿ ಕೊಡ್ತೇವೆ:ಶಾಸಕ ಬಾಲಕೃಷ್ಣ ಹೇಮಾವತಿ ಯೋಜನೆಯನ್ನು ಇಷ್ಟು ವಿಳಂಬ ಮಾಡುವ ಅವಶ್ಯಕತೆ ಇರಲಿಲ್ಲ. ನನಗೆ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್ ಅವರಿಗೆ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಹೇಮಾವತಿ ಯೋಜನೆ ಉದ್ಘಾಟನೆಗೆ ವಿಳಂಬ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಸಂಸದ ಡಾ.ಸಿ.ಎನ್. ಮಂಜುನಾಥ್ ಹಾಗೂ ಮಾಜಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ್ ಅವರನ್ನು ಸ್ಥಳಕ್ಕೆ ಕರೆಸಿ ಹೇಮಾವತಿಗೆ ನಮ್ಮ ಕೊಡುಗೆ ಏನೆಂಬುದನ್ನು ಬಹಿರಂಗಪಡಿಸುತ್ತೇನೆ. ಕೆರೆಗಳಿಗೆ ನೀರು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಲಿ ಎಂದು ಒತ್ತಾಯಿಸಿದರು.
ಪಟ್ಟಣದ ಎನ್‌ಇಎಸ್ ವೃತ್ತದಲ್ಲಿ ನಾನು ನಿರ್ಮಿಸಿದ್ದ ಗಾಂಧಿ ಪುತ್ಥಳಿಯನ್ನು ತೆರವು ಮಾಡಿ ಈಗ ರಸ್ತೆ ಮಧ್ಯದಲ್ಲಿ ಅವೈಜ್ಞಾನಿಕವಾಗಿ ಗಾಂಧಿ ಪ್ರತಿಮೆ ನಿರ್ಮಿಸಿದ್ದಾರೆ. ಈಗಾಗಲೇ ಅಪಘಾತಗಳು ನಡೆಯುತ್ತಿದ್ದು, ಮುಂದೆ ಅದೊಂದು ಅಪಘಾತದ ಸ್ಥಳವಾಗಿ ಮಾರ್ಪಡುತ್ತದೆ. ಇಂಜಿನಿಯರ್‌ಗಳು ರಸ್ತೆಗೆ ಸುರಕ್ಷಿತ ಕ್ರಮವನ್ನು ವಹಿಸಬೇಕು. ಗಾಂಧಿ ಪ್ರತಿಮೆ ಜತೆ ತಾಲೂಕಿಗೆ ಮತ್ತು ರಾಜ್ಯಕ್ಕೆ ಕೊಡುಗೆ ಕೊಟ್ಟ ಮಹನೀಯರ ಪ್ರತಿಮೆಗಳನ್ನು ಸ್ಥಾಪನೆ ಮಾಡಲಿ. ಆ ಮೂಲಕವಾದರೂ ಬಾಲಕೃಷ್ಣ ಗಣ್ಯರಿಗೆ ಗೌರವ ಸಲ್ಲಿಸಲಿ ಎಂದು ಮಾಜಿ ಶಾಸಕರು ಉತ್ತರಿಸಿದರು.ಈ ವೇಳೆ ಜೆಡಿಎಸ್ ಮುಖಂಡರಾದ ಪಂಚೆ ರಾಮಣ್ಣ, ಜೈಕುಮಾರ್, ಬೆಳಗುಂಬ ವಿಎಸ್ಎಸ್‌ಎನ್ ಅಧ್ಯಕ್ಷ ಹೊಸಹಳ್ಳಿ ರಂಗನಾಥ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಜಯಕುಮಾರ್, ಕೆ.ವಿ.ಬಾಲು, ಮಹೇಶ್, ವೆಂಕಟೇಶ್, ಕೆಂಪಸಾಗರ ಗುಂಡ, ನರಸಿಂಹಮೂರ್ತಿ, ರೋಹಿತ್ ಇತರರು ಭಾಗವಹಿಸಿದ್ದರು.