ನಮ್ಮ ತಂಟೆಗೆ ಬಂದವರ ಮೂಗು ತುಂಡರಿಸೋಣ

| Published : May 05 2024, 02:05 AM IST

ಸಾರಾಂಶ

ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಾವು ಸುಮ್ಮನಿರೋದು ಬೇಡ, ಎಲ್ಲರೂ ಒಂದಾಗೋಣ, ನಮ್ಮ ತಂಟೆಗೆ ಬಂದವರ ಮೂಗು ತುಂಡರಿಸೋಣ ಎಂದು ಆಂದೋಲಾ ಕರುಣೇಶ್ವರ ಮಠದ ಗುರುಗಳು, ರಾಮಸೇನೆಯ ಮುಖ್ಯಸ್ಥರಾಗಿರುವ ಸಿದ್ದಲಿಂಗ ಶ್ರೀಗಳು ಕರೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಾವು ಸುಮ್ಮನಿರೋದು ಬೇಡ, ಎಲ್ಲರೂ ಒಂದಾಗೋಣ, ನಮ್ಮ ತಂಟೆಗೆ ಬಂದವರ ಮೂಗು ತುಂಡರಿಸೋಣ ಎಂದು ಆಂದೋಲಾ ಕರುಣೇಶ್ವರ ಮಠದ ಗುರುಗಳು, ರಾಮಸೇನೆಯ ಮುಖ್ಯಸ್ಥರಾಗಿರುವ ಸಿದ್ದಲಿಂಗ ಶ್ರೀಗಳು ಕರೆ ನೀಡಿದ್ದಾರೆ.

ಕೋಟನೂರ್‌ ಡಿ ಗ್ರಾಮದಲ್ಲಿ 2 ದಿನಗಳ ಹಿಂದಷ್ಟೇ ಲಿಂಗಾಯಿತ ಸಮಾಜಕ್ಕೆ ಸೇರಿದ ಸಂಗಮೇಶ ಪಾಟೀಲ್‌ ಎಂಬುವವರ ಮನೆಗೆ ನುಗ್ಗಿ ನಡೆದಂತಹ ಹಲ್ಲೆ ಘಟನೆ ಪ್ರಧಾನವಾಗಿರಿಸಿಕೊಂಡು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಲ್ಲೆ, ಸುಳ್ಳು ಜಾತಿ ನಿಂದನೆ, ಅಟ್ರಾಸಿಟಿ ಪ್ರಕರಣ ದಾಖಲಿಸುವ ಧೋರಣೆಯನ್ನು ವಿರೋಧಿಸಿ ಇಲ್ಲಿನ ಶರಣಬಸವೇಶ್ವರ ಜಾತ್ರ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಸ್ವಾಭಿಮಾನಿ ವೀರಶೈವ ಲಿಂಗಾಯಿತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವೀರಶೈವ ಲಿಂಗಾಯಿತರು ಅದೆಷ್ಟು ದಿನಾಂತ ಹಲ್ಲೆ, ದೌರ್ಜನ್ಯಕ್ಕೊಳಗಾದರೂ ಸುಮ್ಮನಿರುತ್ತೀರಿ? ನಾವು ಧೈರ್ಯದಿಂದ ತಿರುಗಿ ಬೀಳಲೇಬೇಕು, ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಬೇಕೆಂದ ಶ್ರೀಗಳು ತಮ್ಮ ಹರಿತ ಮಾತುಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾಜ್ರುನ ಖರ್ಗೆ, ಶರಣಪ್ರಕಾಶ ಪಾಟೀಲರನ್ನ ಕುಟುಕಿದರು.

ಜ್ಯೂನಿಯರ್‌, ಸಿನಿಯರ್‌ ಕೆಆರ್‌ಜಿ ಎಂದು ಲೇವಡಿ ಮಾಡುತ್ತಲೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ನ ಲಿಂಗಾಯಿತ ವಿರೋಧಿ ಧೋರಣೆಯನ್ನು ಸಮಾಜದ ಒಗ್ಗಟ್ಟಾಗಿ ಖಂಡಿಸಬೇಕೆಂದು ಅನೇಕ ಘಟನೆಗಳನ್ನು ವಿವರಿಸಿದರು. ಪ್ರಿಯಾಂಕ್‌ ಖರ್ಗೆ ಮೋದಿಗೆ ಬೈಯ್ತಾರೆ, ಶರಣಪ್ರಕಾಶ ಪಾಟೀಲ್‌ ಸಂಘ ಪರಿವಾರಕ್ಕೆ ನಿಂದಿಸ್ತಾರೆ, ನಿಜವಾದ ಬಸವ ತತ್ವ ಪ್ರತಿಪಾದಕರಂದರೇ ಪ್ರಧಾನಿ ಮೋದಿ ಎಂಬುವುದು ಇವರಿಬ್ಬರಿಗ ಇನ್ನೂ ಅರಿವಿಗೆ ಬಂದಿಲ್ಲವೆಂಬುದೇ ದೊಡ್ಡ ದುರಂತವೆಂದರು.

ತಮ್ಮ ಪರಿವಾರ, ಕುಟುಂಬದವರಿಂದ ದೂರವಿದ್ದು ಸದಾಕಾಲ ದೇಶದ ಅಳಿಗೆ ಬಗ್ಗೆಯೇ ದುಡಿಯುವ ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧನಿ ಯಾದರಷ್ಟೇ ನಮಗೆಲ್ಲರಿಗೂ ಉಳಿಗಾಲ ಎಂದರು. ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಎಂದು ಡಾ. ಖರ್ಗೆಯವರಿಗೆ ಹೇಳುತ್ತಿದ್ದಾರೆ. ಜ್ಯೂನಿಯರ್‌ ಖರ್ಗೆ ಗ್ರಾಮೀಣಾಭಿವೃದ್ಧಿ ಮಂತ್ರಿಯಾದರೇ ಇಷ್ಟೊಂದು ತೊಂದರೆಯಲ್ಲಿ ನಾವಿದ್ದೇವೆ. ಇನ್ನು ಸಿನಿಯರ್‌ ಖರ್ಗೆಯವರು ಪ್ರಧಾನಿ ಆದ್ರೆ ನಮ್ಮ ಗತಿ? ಎಂದು ಸೇರಿದ್ದವರಿಗೆ ಪ್ರಶ್ನಿಸಿದರು.

ಲಿಂಗಾಯಿತ ಸಮಾಜಕ್ಕೆ ಸೇರಿದವರ ಮನೆಗೆ ನುಗ್ಗಿ ಹಲ್ಲೆ ಮಾಡುತ್ತಾರೆಂದರೆ ಆ ದುಷ್ಟರಿಗೆ ಅದೆಂತಹ ಧೈರ್ಯ? ಯಾರು ಅವರ ಹಿಂದಿರಬೇಕು? ಸಮಾಜ ಇವನ್ನೆಲ್ಲ ಗಮನಿಸಿ ರಾಜಕೀಯವಾಗಿ ನಿರ್ಣಯ ಕೈಗೊಂಡು ಮತ ಹಾಕಿರಿ ಎಂದರು.

ನಮ್ಮ ತಂಟೆಗೆ ಯಾರಾದರೂ ಬಂದಲ್ಲಿ ಅವರ ಮೂಗನ್ನೇ ತುಂಡರಿಸಬೇಕಿದೆ. ಇಲ್ಲದೆ ಹೋದಲ್ಲಿ ದೌರ್ಜನ್ಯ ಮಾಡಿಯೂ ಅವರೆಲ್ಲರೂ ಕತ್ತೆತ್ತಿ ಗತ್ತಿನಿಂದ ತಿರುಗುತ್ತಾರೆ. ಇನ್ನೆಷ್ಟು ದಿನಾಂತ ನಾವು ಹೆದರಿ ಕೂಡುವುದು. ಹೆದರಿದರೆ ಸತ್ತಂತೆ, ಧೈರ್ಯದಿಂದ ಇಂತಹವನನ್ನೆಲ್ಲ ಎದುರಿಸೋಣ, ಕೋಟೂರ್‌ನಲ್ಲಿ ದಾಂಧಲೆ ಮಾಡಿವರಿಗೆ ಕಲಬರಗಿಯ ಈ ಸ್ವಾಭಿಮಾನಿ ಸಮಾವೇಶವೇ ಉತ್ತರ ಎಂದರು.

ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ್‌ ಮಾತನಾಡಿ, ಸ್ವಾಭಿಮಾನಕ್ಕೆ ಧಕ್ಕೆ ಬಂದಲ್ಲಿ ವೀರಶೈವ ಲಿಂಗಾಯಿತರು ಸುಮ್ಮನಿರೋದು ಯಾಕೆ? ನಾವೂ ಮಾರುತ್ತರ ನೀಡೋಣ, ಸಂಘಟಿತರಾಗಿ ಸಮಾಜದ ಮೇಲೆ ಹೆಚ್ಚುತ್ತಿರುವ ಇಂತಹ ಕುಕೃತ್ಯಗಳನ್ನ ಖಂಡಿಸೋಣವೆಂದರು.

ಕೋಟನೂರ್ ಘಟನೆ ಸ್ಯಾಂಪಲ್‌ ಮಾತ್ರ, ಇಂತಹ ಅನೇಕ ಘಟನೆಗಳು ಜಿಲ್ಲಾದ್ಯಂತ ನಡೆಯುತ್ತಿವೆ. ಸಮಾಜದ ಅನೇಕರು ದುಃಖಿತರಾಗುತ್ತಿದ್ದಾರೆ. ನಮ್ಮವರಿಗೆ ಕಣ್ಣೀರು ಬರಿಸುವವರಿಗೆ ನಾವು ಮಾರುತ್ತರ ನೀಡೋಣ, ಸಮಾಜದಲ್ಲಿ ಪಕ್ಷಭೇದ ಮರೆತು ಒಂದಾಗಿ ಮುಂದಡಿ ಇಡಲು ಇದು ಸಕಾಲ ಎಂದು ರೇವೂರ್‌ ಕರೆ ನೀಡಿದರು.

ಲಿಂಗಾಯಿತರಿಗೆ ಡಾ. ಉಮೇಶ ಜಾಧವ್‌ ತುಂಬ ಸಹಾಯ ಮಾಡಿದ್ದಾರೆ, ಯಡಿಯೂರಪ್ಪ ಸಿಎಂ ಆಗಲು ಮೊದಲು ರಾಜೀನಾಮೆ ಕೊಟ್ಟು ಹೊರಬಂದವರೇ ಡಾ. ಜಾಧವ್‌. ಈಗ ನಾವು ಅವರಿಗೆ ಮತ ಹಾಕುವ ಮೂಲಕ ನಮ್ಮ ಸ್ವಾಭಿಮಾನಕ್ಕೆ ಪೆಟ್ಟು ಕೊಡಲು ಹಣಿಸುತ್ತಿವವರಿಗೆ ಪಾಠ ಕಲಿಸೋಣವೆಂದು ರೇವೂರ್‌ ಹೇಳಿದರು.

ನನ್ನ ಗಂಡನನ್ನ ಉಳಿಸಿರಿ- ಸೆರಗೊಡ್ಡಿ ಬೇಡಿಕೊಂಡ ಪ್ರಿಯಾಂಕಾ ಪಾಟೀಲ್‌: ಸಮಾವೇಶದ ವೇಕೆಯಲ್ಲಿದ್ದ ಕೋಟನೂರು ಡಿ ಗ್ರಾಮದಲ್ಲಿ ಹಲ್ಲೆಗೊಳಗಾದ ಪಾಟೀಲ್‌ ಸಂಗಮೇಶರ ಪತ್ನಿ ಪ್ರಿಯಾಂಕಾ ಇವರು ಸೆರಗೊಡ್ಡುತ್ತಲೇ ಕಣ್ಣೀರು ಹಾಕುತ್ತ ತಮ್ಮ ಪತಿದೇವರನ್ನ ಉಳಿಸಿಕೊಡಬೇಕು. ತಮ್ಮ ಕುಟುಂಬದ ಮೇಲಾಗುತ್ತಿರುವ ಅನ್ಯಾಯದಿಂದ ತಮ್ಮನ್ನು ಬದುಕಿಸಬೇಕು ಎಂದು ವೇದಿಕೆಯಲ್ಲೇ ಕಣ್ಣೀರು ಹಾಕಿದ್ದಾಗ ಸೇರಿದ್ದ ಸಭಿಕರು ಮೌನರಾದರು.

ಕೋಟನೂರ್‌ ಘಟನೆಯಲ್ಲಿ ಅಂಬೇಡ್ಕರ್‌ ಅವರಿಗೆ ಅಪಮಾನ ಮಾಡಿದರು ಎಂದು ಸುಳ್ಳು ಕಥೆ ಕಟ್ಟಿ ತಮ್ಮ ಪತಿ ಸಂಗಮೇಶರನ್ನ ಸಿಕ್ಕಿಸುವ ಪ್ರಯತ್ನ ಸಾಗಿದೆ. ಕೋಟನೂರಿನ ಕೆಲವರು ಇದರ ಹಿಂದ ಸಂಚು ಮಾಡುತ್ತಿದ್ದಾರೆ. ಮನೆ ಹೊಕ್ಕು ಎಲ್ಲರನ್ನು ಅವಾಚ್ಯವಾಗಿ ನಿಂದಿಸುತ್ತ ಥಳಿಸಿದ್ದಾರೆ. ನಮ್ಮ ಮನೆಗೆ 50 ರಿಂದ 60 ಜನ ನುಗ್ಗಿ ಬಡಿಗೆ, ಮುಳ್ಳಿನ ಕಟ್ಟಿಗೆಗಳಿಂದ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಮನೆ ಮುಂದಿನ 5 ವಾಹನಗಳಿಗೂ ಬೆಂಕಿ ಇಟ್ಟಿದ್ದಾರೆ. ಅಂದಿನ ಹಲ್ಲೆ ತೀವ್ರತೆ ನೋಡಿದರೆ ಪತಿ ಉಳಿದದ್ದೆ ಪರಮಾಶ್ಚರ್ಯವೆಂದು ತಮಗೊದಗಿರುವ ದುರವಸ್ಥೆಗೆ ಕಣ್ಣೀರಿಟ್ಟರು.

ವೇದಿಕೆಯಲ್ಲಿ ಸೇರಿದ್ದ ಹತ್ತಾರು ಗುರುಗಳು, ಹಿರಿಯರು, ಮುಖಂಡರುಗಳು ಪ್ರಿಯಾಕ್‌ ಪಾಟೀಲರ ಕಣ್ಣೀರಿಗೆಸಾಕ್ಷಿಯಾದರು. ತಮ್ಮ ಕುಟುಂಬಕ್ಕೆ ಒದಗಿರುವ ಕಷ್ಟದ ಗಳಿಗೆ ಯಾರಿಗೂ ಬರಬಾರದು. ತಮ್ಮ ಮನೆಗೆ ಎಲ್ಲರು ಬಂದು ಭೇಟಿಯಾಗಿದ್ದಾರೆ. ಘನೆಯ ತನಿಖೆಗೆ ಸಿಐಡಿಗೆ ಹೇಳಿದ್ದಾರೆ. ಇದನ್ನ ಸಿಬಿಐಗೆ ಒಪ್ಪಿಸಬೇಕು. ತನಿಖೆಯಲ್ಲಿ ಪತಿಯೇ ಆರೋಪಿ ಅಂತಾದರೆ ಶಿಕ್ಷೆ ಕೊಡಿ. ವಿನಾಕಾರಣ ನಿರಪರಧಿಗೆ ಶಿಕ್ಷೆ ಆಗೋದು ಬೇಡ. ಯಾರದ್ದೋ ಸಂಚಿಗೆ ನಾವೇಕೆ ಬಲಿಪಶುವಾಗಬೇಕು ಎಂದು ಪ್ರಿಯಾಂಕಾ ಪಾಟೀಲ್‌ ಖಾರವಾಗಿ ಪ್ರಶ್ನಿಸಿದಳು.