ಸಾರಾಂಶ
ಯತ್ನಾಳ್ ಮತ್ತು ಅತೃಪ್ತರಿಗೆ ಚರ್ಚೆಗೆ ಯಡಿಯೂರಪ್ಪ ಮುಕ್ತ ಆಹ್ವಾನ
ಕನ್ನಡಪ್ರಭ ವಾರ್ತೆ ದಾವಣಗೆರೆ
ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಇಟ್ಟುಕೊಂಡವರಿಗೆ ವಿನಂತಿಸುತ್ತೇನೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಚರ್ಚೆ ಮಾಡೋಣ ಬನ್ನಿ. ಏನಾದರೂ ಕೊರತೆ ಇದ್ದರೆ ಸರಿಪಡಿಸಿಕೊಂಡು, ಪಕ್ಷವನ್ನು ಬಲಪಡಿಸಿಕೊಂಡು ಮುಂದೆ ಸಾಗೋಣ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಶಾಸಕ ಬಸವನಗೌಡ ಪಾಟೀಲ್ ಮತ್ತಿತರೆ ಅತೃಪ್ತರ ಗುಂಪಿಗೆ ಮುಕ್ತ ಆಹ್ವಾನ ನೀಡಿದ್ದಾರೆ.ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಜನ್ಮದಿನಾಚರಣೆ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಕೆಲವರು ಒಡಕುಂಟು ಮಾಡುತ್ತಿರುವುದು ನಿಜ. ಈ ವಿಚಾರದ ಬಗ್ಗೆ ಈಗಾಗಲೇ ಕೇಂದ್ರ ನಾಯಕರ ಗಮನಕ್ಕೂ ಬಂದಿದೆ. ಏನೇ ಗೊಂದಲ, ಭಿನ್ನಾಭಿಪ್ರಾಯವಿದ್ದರೂ ಬನ್ನಿ, ಕುಳಿತು ಚರ್ಚಿಸೋಣ ಎಂದು ಹೇಳಿದರು.
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ಸಿನವರು ಸೆಳೆಯುತ್ತಾರೆ ಎಂದು ಕೆಲವರು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಮುಂದೆಯೂ ಒಂದಾಗಿ ಚುನಾವಣೆ ಎದುರಿಸುತ್ತವೆ. ಎರಡೂ ಪಕ್ಷಗಳು ಒಟ್ಟಾಗಿ ಹೋದರೆ, ಅಧಿಕಾರಕ್ಕೆ ಬರುವುದು ಕಷ್ಟವಾಗಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಾವೆಲ್ಲರೂ ಒಂದಾಗಿದ್ದೇವೆ ಎಂದು ತಿಳಿಸಿದರು.ರಾಜ್ಯದ ಜನತೆ ಗಟ್ಟಿಯಾಗಿ ಬಿಜೆಪಿಗೆ ಬೆಂಬಲಿಸಬೇಕು. ಪೊಳ್ಳು ಘೋಷಣೆಗಳಿಗೆ ಬಲಿಯಾಗದೇ, ಬಿಜೆಪಿಗೆ ಮತದಾರರು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು. ಈ ವೇಳೆ ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಚನ್ನಗಿರಿ ಮಾಜಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ, ಯುವ ಮುಖಂಡ ಮಾಡಾಳ ಮಲ್ಲಿಕಾರ್ಜುನ ಇತರರು ಇದ್ದರು.