ಕನ್ನಡಪ್ರಭ ವಾರ್ತೆ ಪಾಂಡವಪುರ

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿಲ್ಲ. ಹಿಂಬದಿ ರಾಜಕೀಯ ಬಿಟ್ಟು ಸಂಘದ ಬೈಲಾ ಪ್ರಕಾರ ಅವಧಿ ಮುಗಿದ ಬಳಿಕ ಚುನಾವಣೆ ನಡೆಸಿ ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದು ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಹಾರೋಹಳ್ಳಿ ಕೃಷ್ಣ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಕುರುಬರ ಸಂಘದ ಆಡಳಿತ ಮಂಡಳಿಯ ಐದು ವರ್ಷದ ಅವಧಿ ಮಾರ್ಚ್ 6ಕ್ಕೆ ಮುಕ್ತಾಯಗೊಂಡಿದೆ. ಆದರೆ, ಜಿಲ್ಲಾಧ್ಯಕ್ಷ ಸುರೇಶ್ ಡಿಆರ್‌ಗೆ ಸುಳ್ಳು ಮಾಹಿತಿ ನೀಡಿ ಆಡಳಿತ ಮಂಡಳಿ ಅವಧಿ ಮುಂದುವರೆಸಲು ಆದೇಶ ಮಾಡಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಜಿಲ್ಲಾಧ್ಯಕ್ಷರ ಈ ನಡೆ ಜಿಲ್ಲೆಯ ಏಳು ತಾಲೂಕಿನ ಜನರಿಗೂ ಅವಕಾಶ ವಂಚನೆ ಮಾಡುತ್ತಿದ್ದಾರೆ. ನಿಮಗೆ ಸಮುದಾಯದ ಶೇ.90ರಷ್ಟು ಜನ ಬೆಂಬಲ ಇದ್ದರೆ ಚುನಾವಣೆಗೆ ಹೋಗಿ ಮತ್ತೊಮ್ಮೆ ಗೆದ್ದು ಬಂದು ಅಧ್ಯಕ್ಷರಾಗಿ ಆಡಳಿತ ನಡೆಸಿ ಇದಕ್ಕೆ ನಮ್ಮ ವಿರೋಧವಿಲ್ಲ. ಅದನ್ನು ಬಿಟ್ಟು ಹಿಂಬದಿ ರಾಜಕೀಯ ಮಾಡಿದ ಆಟವಾಡಬೇಡಿ ಎಂದು ಕಿಡಿಕಾರಿದರು.

ಸಮುದಾಯದ ಜನರ ಮುಗ್ಧತೆ ಬಳಸಿಕೊಂಡಿರುವ ಜಿಲ್ಲಾ ಹಾಗೂ ತಾಲೂಕು ಕುರುಬರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಚುನಾವಣೆ ನಡೆಸುವ ಬಗ್ಗೆ ಮಾತನಾಡಿದೆ ನಾವು ಸಂಘದಲ್ಲಿ ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂಬು ಹೇಳಿಕೆ ನೀಡುವ ಮೂಲಕ ಸಮಾಜದ ಜನರ ಧಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಹರಿಹಾಯ್ದರು.


ಜಿಲ್ಲಾ ಕುರುಬರ ಸಂದ ಮಾಜಿ ಉಪಾಧ್ಯಕ್ಷ ಬನ್ನಂಗಾಡಿ ರೇವಣ್ಣ ಮಾತನಾಡಿ, ಸಮುದಾಯರ ಕೆಲವರು ಪತ್ರಿಕೆಗಳಲ್ಲಿ ಹೆಸರು ಬರುವುದಕ್ಕಾಗಿ ಜಿಲ್ಲಾಧ್ಯಕ್ಷರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಸಮಾಜದ ಜನರ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆಯಿಂದ ಮಾತನಾಡಬೇಕು. ಸುಖಸುಮ್ಮನೆ ನಾಲಿಗೆ ಹರಿಬಿಟ್ಟರೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಾಂಡವಪುರ ಕುರುಬರ ಸಂಘದ ಅಧ್ಯಕ್ಷ ಹಾರೋಹಳ್ಳಿ ಡಿ.ಹುಚ್ಚೇಗೌಡ ಕಳೆದ 20 ವರ್ಷದಿಂದ ಅಧ್ಯಕ್ಷರಾಗಿದ್ದು, ಸಂಘದ ಅಭಿವೃದ್ಧಿಗೆ ಇವರ ಕೊಡುಗೆ ಶೂನ್ಯ. ಜಿಲ್ಲಾಧ್ಯಕ್ಷರ ಪರ ಮಾತನಾಡಿದರೆ ನಮ್ಮ ಅಧ್ಯಕ್ಷ ಸ್ಥಾನವು ಭದ್ರವಾಗಿರುತ್ತದೆ ಎಂಬ ಕಾರಣಕ್ಕೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸಮುದಾಯದ ಸರ್ವೋಚ್ಛ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಕಾರಣಕ್ಕೆ 2013 ಮತ್ತು 2023 ಎರಡು ಅವಧಿಯಲ್ಲಿ ತಾಲೂಕಿನ ಕುರುಬ ಸಮುದಾಯದ ಜನರು ರೈತಸಂಘಕ್ಕೆ ಮತ ನೀಡಿದರು. ಎರಡು ಅವಧಿಯಲ್ಲೂ ರೈತಸಂಘದ ಶಾಸಕರು ಆಯ್ಕೆಯಾದರು ಎಂದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರು. ಅವರಿಂದ ತಾಲೂಕು ಸಂಘಕ್ಕೆ ಕನಿಷ್ಠ ಪಕ್ಷ ಒಂದು ನಿವೇಶನ ಮಾಡಿಸಿಕೊಳ್ಳಲು, ಒಂದು ಕಚೇರಿ ಅಥವಾ ಸಂಘದ ಸದಸ್ಯತ್ವ ಮಾಡಿಸಿಲು ಸಾಧ್ಯವಾಗಿಲ್ಲ. ಅಧ್ಯಕ್ಷರೆ ನಿಮಗೆ ವಯಸ್ಸಾಗಿ ಆರೋಗ್ಯ ಸಮಸ್ಯೆ ಇದೆ. ದಯಮಾಡಿ ಈಗಿರುವ ಆಡಳಿತ ಮಂಡಳಿಯ ಸದಸ್ಯರು ಯುವಕರಿಗೆ ಅವಕಾಶ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಪಿ.ರಮೇಶ್ ಮಾತನಾಡಿ, ತಾಲೂಕು ಕುರುಬ ಸಂಘದ ಅಧ್ಯಕ್ಷ ಡಿ.ಹುಚ್ಚೇಗೌಡರು ತಾಲೂಕು ಸಂಘದಸರ್ವ ಸದಸ್ಯರ ಸಭೆ ನಡೆಸಲು ಸಾಧ್ಯವಾಗಿಲ್ಲ. ಇವರು ಮತ್ತೊಬ್ಬರ ಬಗ್ಗೆ ಆರೋಪಿಸುತ್ತಾರೆ. ಜಿಲ್ಲಾ ಸಂಘದ ನಿರ್ದೇಶಕರನ್ನು ವಜಾಗೊಳಿಸಲು ಜಿಲ್ಲಾಸಂಘದ ಆಡಳಿತ ಮಂಡಳಿಗೆ ಅಧಿಕಾರ ಕೊಟ್ಟವರು ಯಾರು ಎಂದು ಕಿಡಿಕಾರಿದರು.

ಬೆಟ್ಟಹಳ್ಳಿ ಕೆ.ಸ್ವಾಮಿ ಮಾತನಾಡಿ, ಜಿಲ್ಲಾ ಸಂಘದ ಮಾಜಿ ಉಪಾಧ್ಯಕ್ಷ ಬನ್ನಂಗಾಡಿ ರೇವಣ್ಣ ಅವರೇ ನಿಮ್ಮನ್ನ ತಾಲೂಕಿನ ಜನತೆ ಅವಿರೋಧವಾಗಿ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆಯ್ಕೆ ವೇಳೆ ಕೃಷ್ಣರ ಜತೆ ಇರುತ್ತೇನೆ ಎಂಬುದಾಗಿ ಮಾತುಕೊಟ್ಟು ಈಗ ತಪ್ಪಿದಿದ್ದೀರಾ. ಈಗ ನೀವು ಸಮುದಾಯದ ಜನರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದೀರಿ ಎಂಬ ಎಚ್ಚರಿಕೆ ಇರಲಿ. ಹೀಗೆ ಮುಂದುವರೆದರೆ ತಕ್ಕ ಪಾಠಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದಕ್ಕೂ ಮುನ್ನ ಜಿಲ್ಲಾ ಮತ್ತು ತಾಲೂಕು ಸಂಘದ ಕೆಲವರ ವಿರುದ್ಧ ಮುಖಂಡರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಕುರುಬರ ಸಂಘದ ಉಪಾಧ್ಯಕ್ಷ ಕರೀಗೌಡ, ಮುಖಂಡರಾದ ಶಿವಪ್ಪ, ಸ್ವಾಮಿ, ಹಾರೋಹಳ್ಳಿ ಧನುಷ್ಕೋಟಿ, ಕುಮಾರ್, ಚಲುವರಾಜು ಲೋಕೇಶ್(ಮುದ್ದ), ಗಿರೀಗೌಡ, ಬೆಟ್ಟಹಳ್ಳಿ ನಾರಾಯಣ, ಅರಳಕುಪ್ಪೆ ಮಹೇಶ್, ರಾಜೇಶ್, ಅಂತನಹಳ್ಳಿ ಮಂಜು, ಮಂಚನಹಳ್ಳಿ ಸಿದ್ದೇಗೌಡ, ಅಂದಾನಿಗೌಡ ಸೇರಿದಂತೆ ಹಲವರು ಇದ್ದರು.