ಲಕ್ಷ ದೀಪೋತ್ಸವ ಯಶಸ್ವಿಗೊಳಿಸೋಣ

| Published : Sep 19 2024, 01:48 AM IST

ಸಾರಾಂಶ

ಡಾ. ಸುಧಾ ನಾರಾಯಣ ಮೂರ್ತಿ ಸೇರಿ ಅನೇಕ ಗಣ್ಯಮಾನ್ಯರು, ಜನಪ್ರತಿನಿಧಿಗಳಿಗೆ ಆಹ್ವಾನ

ಲಕ್ಷ್ಮೇಶ್ವರ: ಪಟ್ಟಣದ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಹೇಳಿದರು.

ಸೋಮವಾರ ಸಂಜೆ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಪಟ್ಟಣದ ಸೋಮೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನವಾಗಿದ್ದು. ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಲಕ್ಷ ದೀಪೋತ್ಸವವನ್ನು ಅದ್ಧೂರಿಯಾಗಿ ಆಚರಿಸೋಣ. ಜಾತಿ, ಮತ, ಧರ್ಮ, ಪಕ್ಷ ಬೇದಭಾವ ಮರೆತು ಸಹಾಯ-ಸಹಕಾರ, ಸ್ವಯಂ ಪ್ರೇರಣೆದೊಂದಿಗೆ ಪುಲಿಗೆರೆಯ ಆರಾಧ್ಯ ದೈವ ಸೋಮೇಶ್ವರ ದೇವಸ್ಥಾನದ ಲಕ್ಷ ದೀಪೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸೋಣ. ಐತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಸ್ಥಾನವನ್ನು ಇನ್ಪೋಸಿಸ್‌ ಪ್ರತಿಷ್ಠಾನದಿಂದ ₹೪.೫ ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿದ ನಂತರ ಪ್ರತಿ ವರ್ಷ ಪುಲಿಗೆರೆ ಉತ್ಸವ ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ೨೦೧೫ ರಿಂದ ಪ್ರತಿ ೫ ವರ್ಷಕ್ಕೊಮ್ಮೆ ಕಾರ್ತಿಕ ಮಾಸದ ೩ನೇ ಸೋಮವಾರ ದೇವಸ್ಥಾನದ ವಿವಿಧ ಕಮೀಟಿಗಳ ಸಹಯೋಗದಲ್ಲಿ ಲಕ್ಷ ದೀಪೋತ್ಸವ ಸಮಾರಂಭ ನಡೆಸುತ್ತಾ ಬರಲಾಗಿದೆ. ಈ ವರ್ಷ ನ. ೧೮ ರಂದು ವಿಶೇಷವಾಗಿ ಲಕ್ಷ ದೀಪೋತ್ಸವ ಆಚರಿಸಲು ಭಕ್ತ ಸಮೂಹ ನಿರ್ಧರಿಸಿದೆ. ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ, ಪೇಜಾವರ ಶ್ರೀಗಳು, ಕನೇರಿ ಶ್ರೀಗಳು, ಕೊಪ್ಪಳ ಶ್ರೀಗಳು ಹಾಗೂ ಉಡುಪಿ ಶ್ರೀಗಳಿಗೆ ಪಾವನ ಸಾನ್ನಿಧ್ಯ ವಹಿಸಲು ಕೋರಲಾಗಿದೆ.

ಡಾ. ಸುಧಾ ನಾರಾಯಣ ಮೂರ್ತಿ ಸೇರಿ ಅನೇಕ ಗಣ್ಯಮಾನ್ಯರು, ಜನಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗುವುದು. ಲಕ್ಷ ದೀಪೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದರು.

ಮಾಜಿ ಶಾಸಕ ಜಿ.ಎಂ.ಮಹಾಂತಶೆಟ್ಟರ ಮಾತನಾಡಿ, ಭಕ್ತರು ಮನಸ್ಸು ಮಾಡಿದರೆ ಸುಲಭವಾಗಿ ಈ ಕಾರ್ಯ ಮಾಡಲು ಸಾಧ್ಯ. ಈಗಾಗಲೇ ಲಕ್ಷ್ಮೇಶ್ವರದಲ್ಲಿ ದಸರಾ ದರ್ಬಾರ್ ಸೇರಿ ಅನೇಕ ದೊಡ್ಡ ಸಮಾರಂಭಗಳನ್ನು ಎಲ್ಲರಿಗೂ ಮಾದರಿಯಾಗುವಂತೆ ಮಾಡಲಾಗಿದೆ. ಸೋಮೇಶ್ವರ ದೇವಸ್ಥಾನ ಈ ನಾಡಿನ ಎಲ್ಲ ವರ್ಗದ ಜನರ ಶ್ರದ್ಧಾ ಭಕ್ತಿಯ ಪರಮ ಪವಿತ್ರ ಸನ್ನಿಧಿಯಾಗಿದೆ. ದೇವಸ್ಥಾನದ ಅಭಿವೃದ್ಧಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಜಾತಿ, ಧರ್ಮ, ರಾಜಕಾರಣ ಬೆರೆಸುವುದು ಬೇಡ. ಕೊಡುವ ಕೈಗಳು ಸಾಕಷ್ಟಿವೆ, ಅದಕ್ಕಾಗಿ ಮನೆ ಮನೆಗೆ ದೇಣಿಗೆ ಸಂಗ್ರಹ ಬೇಡ. ಎಲ್ಲರೂ ಶ್ರದ್ಧಾ-ಭಕ್ತಿಯಿಂದ ಪಾಲ್ಗೊಂಡರೆ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.

ಸಭೆಯಲ್ಲಿ ಭಕ್ತರ ಕಮೀಟಿಯ ಖಜಾಂಚಿ ಚನ್ನಪ್ಪ ಜಗಲಿ ಕಾರ್ಯಕ್ರಮ ಯಶಸ್ವಿಗಾಗಿ ಸ್ವಾಗತ, ಪ್ರಸಾದ, ಪ್ರಚಾರ, ಹಣಕಾಸು, ವೇದಿಕೆ ಸೇರಿ ವಿವಿಧ ಸಮಿತಿಗಳ ರಚನೆ ಸೂಚಿಸಿದರು. ಸಭೆಯಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ದೇವಸ್ಥಾನದಲ್ಲಿ ನಡೆಯುವ ಎಲ್ಲ ಕಾರ್ಯಗಳಿಗೆ ಹಿಂದಿನಂತೆ ಸಂಪೂರ್ಣ ಸಹಾಯ-ಸಹಕಾರ ನೀಡುವುದಾಗಿ ಹೇಳಿದರು.

ಕಾರ್ಯಕ್ರಮದ ಯಶಸ್ವಿಗಾಗಿ ಕೈಗೊಳ್ಳಬೇಕಾದ ಎಲ್ಲ ರೂಪರೇಷೆಗಳ ಬಗ್ಗೆ ವಿವರವಾದ ಚರ್ಚೆ ಜರುಗಿಸಿ ಅನೇಕ ಭಕ್ತರು ತಮ್ಮ ಸಲಹೆ ಸೂಚನೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಸೋಮೇಶ್ವರ ದೇವಸ್ಥಾನ ಭಕ್ತರ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ವಹಿಸಿದ್ದರು. ಸಭೆಯಲ್ಲಿ ವಿ.ಎಲ್.ಪೂಜಾರ, ಎಸ್.ಪಿ. ಪಾಟೀಲ, ಬಸವೇಶ ಮಹಾಂತಶೆಟ್ಟರ್‌, ಬಸಣ್ಣ ಬೆಂಡಿಗೇರಿ, ನೀಲಪ್ಪ ಕರ್ಜೆಕಣ್ಣವರ, ಸೋಮಣ್ಣ ಉಪನಾಳ, ಸಿದ್ದನಗೌಡ ಬಳ್ಳೊಳ್ಳಿ, ಶಿವಯೋಗಿ ಅಂಕಲಕೋಟಿ, ಯಲ್ಲಪ್ಪಗೌಡ ಉದ್ದನಗೌಡರ, ಸುಭಾಷ ಓದುನವರ, ಶಂಕ್ರಣ್ಣ ಬಾಳಿಕಾಯಿ, ಮಹೇಶ ಹೊಗೆಸೊಪ್ಪಿನ, ಕೆ.ಎಸ್. ಕುಲಕರ್ಣಿ, ಸಿ.ಜಿ. ಹಿರೇಮಠ, ಸುರೇಶ ರಾಚನಾಯ್ಕರ, ರಾಘವೇಂದ್ರ ಪೂಜಾರ, ಬಂಗಾರಪ್ಪ ಮುಳಗುಂದ, ಬಸವಣ್ಣೆಪ್ಪ ನಂದೆಣ್ಣನವರ, ಸಿ.ಆರ್. ಲಕ್ಕುಂಡಿಮಠ, ಈರಣ್ಣ ಮುಳಗುಂದ, ಚಂದ್ರಗೌಡ ಪಾಟೀಲ, ಕಿರಣ ನವಲೆ, ಶಿವಾನಂದ ಲಿಂಗಶೆಟ್ಟಿ, ನಾಗರಾಜ ಕಳಸಾಪುರ, ಸೋಮಶೇಖರ ಕೆರಿಮನಿ, ವಿರುಪಾಕ್ಷ ಆದಿ, ಮಯೂರ ಪಾಟೀಲ, ಬಸವರಾಜ ಮೆಣಸಿನಕಾಯಿ ಇದ್ದರು. ಜಿ.ಎಸ್ ಗುಡಗೇರಿ, ಈಶ್ವರ ಮೇಡ್ಲೇರಿ ನಿರ್ವಹಿಸಿದರು.