ಕನ್ನಡಪ್ರಭ ವಾರ್ತೆ ಶಿರಸಿ

ಹಿರಿಯರ ಆದರ್ಶದಂತೆ ನಾವೆಲ್ಲ ಕಾರ್ಯಕರ್ತರು ಸಮರ್ಥ, ಸದೃಢವಾಗಿ ಮುನ್ನಡೆಯೋಣ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಸೋಮವಾರ ನಗರದ ದೀನದಯಾಳ ಸಭಾಭವನದಲ್ಲಿ ಬಿಜೆಪಿ ಸಂಸ್ಥಾಪನಾ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಬಿಜೆಪಿ 1980ರಲ್ಲಿ ಸ್ಥಾಪನೆಗೊಂಡು 46 ವರ್ಷಗಳನ್ನು ಪೂರೈಸಿ 47ನೇ ವರ್ಷಕ್ಕೆ ಪಕ್ಷ ಪಾದರ್ಪಣೆ ಮಾಡುತ್ತಿದೆ. ಬಿಜೆಪಿ ಹುಟ್ಟಿನ ಜೊತೆಗೆ ಜನಸಂಘದ ಹುಟ್ಟಿನ ಬಗ್ಗೆ ತಿಳಿದುಕೊಳ್ಳಬೇಕು ಎಂದರು.ಜವಾಹರಲಾಲ್ ನೆಹರು ವಿದೇಶಿ ಶಕ್ತಿಗಳ ಹಿಡಿತದಲ್ಲಿಟ್ಟು ದೇಶ ಹಿತ ಚಿಂತನೆ ಮಾಡದೆ ಸರ್ವಾಧಿಕಾರಿ ಆಡಳಿತ ನಡೆಸಿದರು. ದೇಶಭಕ್ತರೆಲ್ಲರೂ ಸೇರಿ ನೆಲ, ಜಲ, ಸಂಸ್ಕೃತಿಯ ಮೇಲೆ ನಂಬಿಕೆ ಹೊಂದಿದವರು ಭಾರತಕ್ಕೆ ಸಾಂಸ್ಕೃತಿಕ ವಿಚಾರಧಾರೆಯನ್ನು ಬೆಳೆಸಲು ರಾಜಕೀಯ ಪಕ್ಷ ಬೇಕು ಎಂಬ ಚರ್ಚೆ ನಡೆಯಿತು. ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನವನ್ನು ಕೈಬಿಡುವಂತೆ ಶ್ಯಾಮ ಪ್ರಸಾದ್ ಮುಖರ್ಜಿ ವಿರೋಧದ ನಡುವೆಯೂ ಕಾಶ್ಮೀರ ಪ್ರವೇಶಿಸಿದರು. ಅವರನ್ನು ನೆಹರು ಸರ್ಕಾರ ಬಂಧಿಸಿ ಜೈಲಿನಲ್ಲಿ ಇರಿಸಿತು. ಅಲ್ಲಿ ಅವರ ಮರಣ ಸಂಭವಿಸಿತು. ಅವರ ಸಾವಿನ ಬಗ್ಗೆ ಇನ್ನೂ ಅನುಮಾನಗಳಿವೆ. ಅದೇ ರೀತಿಯಾಗಿ ಪಂಡಿತ ದೀನದಯಾಳ ಉಪಾಧ್ಯಾಯ ಅವರ ಸಾವಿನಲ್ಲಿಯೂ ಅನುಮಾನಗಳಿವೆ. ಕಾಂಗ್ರೆಸ್ ಸರ್ವಾಧಿಕಾರಿಯಾಗಿ ವರ್ತಿಸಿ ಪ್ರಜಾಪ್ರಭುತ್ವವನ್ನು ಹಾಳುಮಾಡಿತು ಎಂದು ಆರೋಪಿಸಿದರು.ಕಳೆದ 12 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶದ ಶಕ್ತಿಯನ್ನು ತೋರಿಸಿದ್ದಾರೆ. ಇಂದಿನ ಸನ್ನಿವೇಶದಲ್ಲಿ ಭಾರತ ನೇತೃತ್ವ ವಹಿಸಲಿ ಎಂಬ ಮಾತು ಕೇಳಿಬರುತ್ತಿದೆ. ದೇಶದ 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕೆಲ ರಾಜ್ಯಗಳಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿರಿಯರ ಆಶಯದಂತೆ 2047ರೊಳಗೆ ವಿಕಸಿತ ಭಾರತ, ಅಭಿವೃದ್ಧಿ ಹೊಂದಿದ ದೇಶವಾಗಬೇಕು. ಅದಕ್ಕಾಗಿ ಸಾಮಾನ್ಯ ಕಾರ್ಯಕರ್ತನಾಗಿ ಕೊಡುಗೆ ನೀಡುವ ಸಂಕಲ್ಪ ಮಾಡೋಣ ಎಂದರು.ನಗರ ಮಂಡಲಾಧ್ಯಕ್ಷ ಆನಂದ ಸಾಲೇರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿ ವಿಶ್ವದ ಅತಿ ದೊಡ್ಡ ಶ್ರೇಷ್ಠ ಪಕ್ಷವಾಗಿ ಹೊರಹೊಮ್ಮಿದೆ. ಇದಕ್ಕೆ ಹಿರಿಯರ ತ್ಯಾಗ, ಬಲಿದಾನ ಕಾರಣವಾಗಿದೆ. ನಾವೆಲ್ಲರೂ ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟಿಸಬೇಕಿದೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ ಮಾತನಾಡಿದರು. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಪ್ರಮುಖರಾದ ರಿತೇಶ್, ಶರ್ಮಿಳಾ ಮಾದನಗೇರಿ, ನಾಗರಾಜ ನಾಯ್ಕ, ಮಾಲತೇಶ ಹಾದಿಮನಿ ಮತ್ತಿತರರು ಉಪಸ್ಥಿತರಿದ್ದರು.