ಸಾರಾಂಶ
ಮುಳಗುಂದ: ಪೌರ ಸೇವೆಗೆ ಕೃತಜ್ಞತೆ ಸಲ್ಲಿಸಿದಾಗ ಮಾತ್ರ ಪೌರಕಾರ್ಮಿಕರ ದಿನಾಚರಣೆಗೆ ಅರ್ಥ ಬರುತ್ತದೆ. ನಗರ, ಪಟ್ಟಣ ಸುಂದರವಾಗಿ ಕಾಣಲು ಮೂಲ ಕಾರಣಿಭೋತರು ಪೌರಕಾರ್ಮಿಕರು. ಅವರ ಸೇವೆ ಅತ್ಯವಶ್ಯವಾಗಿದ್ದು, ಸಮಾಜಕ್ಕೆ ಅವರ ಸೇವೆ ಅಪಾರ ಎಂದು ಪಪಂ ಸದಸ್ಯ ಕೆ.ಎಲ್. ಕರಿಗೌಡರ ತಿಳಿಸಿದರು.ಸ್ಥಳೀಯ ಪಪಂ ಕಾರ್ಯಾಲಯದಲ್ಲಿ ಮಂಗಳವಾರ ನಡೆದ 14ನೇ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ದಿನ ಬೆಳಗ್ಗೆ ಚಳಿ, ಗಾಳಿ, ಮಳೆಗೆ ಜಗ್ಗದೆ ತಮ್ಮ ಕಾಯಕದಲ್ಲಿ ತೊಡಗುವ ಪೌರಕಾರ್ಮಿಕರು ರಸ್ತೆ, ಬೀದಿಗಳನ್ನು ಸ್ವಚ್ಛಗೊಳಿಸಿ ಪಟ್ಟಣವನ್ನು ಸುಂದರವಾಗಿಸುತ್ತಾರೆ. ಪೌರಕಾರ್ಮಿಕರು ತಮ್ಮ ಕಾಯಕದ ಜತೆಗೆ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸರ್ಕಾರ ತಮಗೆ ನೀಡಿದ ರಕ್ಷಾಕವಚಗಳನ್ನು ಬಳಕೆ ಮಾಡಿಕೊಂಡು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದರು.ಪ್ರಭಾರಿ ಮುಖ್ಯಾಧಿಕಾರಿ ಕೃಷ್ಣ ಹಾದಿಮನಿ ಮಾತನಾಡಿ, ಪೌರಕಾರ್ಮಿಕರು ಶ್ರಮಿಸದಿದ್ದರೆ ಆರೋಗ್ಯವಾಗಿ ಜೀವಿಸಲು ಸಾಧ್ಯವಿಲ್ಲ. ಅಂತಹ ಆರೋಗ್ಯವನ್ನು ಉಡುಗೊರೆಯಾಗಿ ನೀಡಿದ ಪೌರಕಾರ್ಮಿಕರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು. ಕಾಯಕದಲ್ಲಿ ಕೈಲಾಸ ಕಾಣುವ ಶ್ರಮಜೀವಿಗಳು ಪೌರಕಾರ್ಮಿಕರು ಎಂದರು.ಈ ವೇಳೆ ಪೌರಕಾರ್ಮಿಕರಿಗೆ ವೇತನ ಭತ್ಯೆ ನೀಡಲಾಯಿತು. ಆನಂತರ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಪಪಂ ಸದಸರಾದ ಷಣ್ಮುಖಪ್ಪ ಬಡ್ನಿ, ಎನ್.ಆರ್. ದೇಶಪಾಂಡೆ ಸೇರಿದಂತೆ ಹಲವರು ಮಾತನಾಡಿದರು.
ಪೌರಕಾರ್ಮಿಕರ ಸಂಘದ ಅಧ್ಯಕ್ಷ ನೀಲಪ್ಪ ದೊಡ್ಡಮನಿ, ಉಪಾಧ್ಯಕ್ಷ ಮಹಾಂತೇಶ ದಿವಟರ, ಪಪಂ ಅಧ್ಯಕ್ಷೆ ಯಲ್ಲವ್ವ ಕವಲೂರ, ಸದಸ್ಯರಾದ ಮಹಾದೇವಪ್ಪ ಗಡಾದ, ಮಹಾಂತೇಶ ನೀಲಗುಂದ, ಹೊನ್ನಪ್ಪ ಹಳ್ಳಿ, ಮಲ್ಲಪ್ಪ ಚವಾಣ, ದಾವೂದ್ ಜಮಾಲ, ಮರಿಯಪ್ಪ ನಡುಗೇರಿ ಸೇರಿದಂತೆ ಪಪಂ ಸಿಬ್ಬಂದಿ ಇದ್ದರು. ಸಮುದಾಯ ಸಂಘಟನಾಧಿಕಾರಿ ವಾಣಿಶ್ರೀ ನಿರಂಜನ ನಿರೂಪಿಸಿ, ವಂದಿಸಿದರು.