ಸಾರಾಂಶ
ನಮ್ಮ ನಡುವಿನ ಸ್ಪರ್ಧೆ ಬಿಟ್ಟು ಸಮಾಜದ ಒಳಿತಿಗಾಗಿ, ಶಿಕ್ಷಣಕ್ಕಾಗಿ ಒಟ್ಟಾಗಿ ಹೆಜ್ಜೆ ಇಡಬೇಕಿದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕರೆಕೊಟ್ಟರು.
ಬೆಂಗಳೂರು : ನಮ್ಮ ನಡುವಿನ ಸ್ಪರ್ಧೆ ಬಿಟ್ಟು ಸಮಾಜದ ಒಳಿತಿಗಾಗಿ, ಶಿಕ್ಷಣಕ್ಕಾಗಿ ಒಟ್ಟಾಗಿ ಹೆಜ್ಜೆ ಇಡಬೇಕಿದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕರೆಕೊಟ್ಟರು.
ಕೆಂಗೇರಿಯಲ್ಲಿನ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದಿಂದ ಭಾನುವಾರ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳ 16ನೇ ದಿನದ ಪುಣ್ಯಾರಾಧನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಚಂದ್ರಶೇಖರನಾಥ ಸ್ವಾಮೀಜಿಯವರು ಸಮಾಜಕ್ಕೆ ನೀಡಿದ ಕೊಡುಗೆ ದೊಡ್ಡದು. ಶಿಕ್ಷಣ ಸಂಸ್ಥೆಗಳನ್ನು ತೆರೆದು ಸಮಾಜ ಅಕ್ಷರಸ್ಥವಾಗುವಂತೆ ಮಾಡಿದ್ದಾರೆ. ಅವರು ಕಟ್ಟಿದ ಸಂಸ್ಥೆಗಳನ್ನು ಬೆಳೆಸಿ ಮುನ್ನಡೆಸಬೇಕು. ಅದಕ್ಕೆ ಸಮುದಾಯ ಬೆಂಬಲವಾಗಿ ನಿಲ್ಲಬೇಕು. ನಮ್ಮ ನಡುವಿನ ಸ್ಪರ್ಧೆಯನ್ನು ಬಿಟ್ಟು ಎಲ್ಲರೂ ಒಂದಾಗಬೇಕು. ಸಮಾಜದ ಶ್ರೀಗಳು ಒಟ್ಟಾಗಿ ಹೋಗಬೇಕು ಎಂದು ಹೇಳಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಈ ಭಾಗದಲ್ಲಿ ಮಠವನ್ನು, ಶಿಕ್ಷಣ ಸಂಸ್ಥೆಯನ್ನು ಶ್ರದ್ಧೆಯಿಂದ ಕಟ್ಟಿದ ಚಂದ್ರಶೇಖರನಾಥ ಸ್ವಾಮೀಜಿಯವರು ವಿದ್ಯಾದಾನ ಮಾಡಿದ್ದಾರೆ. ತಾವೇ ಸ್ವತಃ ಕೃಷಿ ಕೆಲಸ ಮಾಡಿ ಮಕ್ಕಳಿಗೆ ಊಟ ಹಾಕಿದ್ದಾರೆ. ಶ್ರೀಮಠವನ್ನು ನಾಡಿಗೆ ಅರ್ಪಣೆ ಮಾಡಿದ್ದಾರೆ. ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ನಮ್ಮ ಮಹತ್ವದ ಜವಾಬ್ದಾರಿ. ಅವರು ಸಮಾಜ ಮತ್ತು ಧರ್ಮದ ಪರವಾಗಿ ಗಟ್ಟಿಯಾದ ಧ್ವನಿಯಾಗಿ ನಿಂತಿದ್ದರು ಎಂದು ಸ್ಮರಿಸಿಕೊಂಡರು.
ಆದಿಚುಂಚನಗಿರಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ಮಲೆ ಮಹದೇಶ್ವರ ಬೆಟ್ಟದ ಡಾ. ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕುಣಿಗಲ್ ಸಿದ್ದರಾಮಚೈತನ್ಯ ಸ್ವಾಮೀಜಿ ಮಾತನಾಡಿದರು. ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ನಿವೃತ್ತ ನ್ಯಾಯಾಧೀಶರಾದ ಗೋಪಾಲಗೌಡರು, ಚಂದ್ರಶೇಖರಯ್ಯ ಸೇರಿ ಇತರರಿದ್ದರು.