ಸಾರಾಂಶ
ನನ್ನ ಮಗ ಅಲೋಕ್ ವಿಶ್ವನಾಥ್ ಸಹ ಅಕಾಂಕ್ಷಿಯಾಗಿದ್ದು, ಹೈಕಮಾಂಡ್ ಯಾರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿದರೂ ನಾವೆಲ್ಲಾ ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕು, ಮೂರನೇ ಬಾರಿಗೆ ಮೋದಿಯವರನ್ನು ಪ್ರಧಾನಿಯನ್ನಾಗಿಸಿ, ಬಲಿಷ್ಠ ರಾಷ್ಟ್ರವನ್ನು ಕಟ್ಟೋಣ.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ವಿಶ್ವದಲ್ಲೇ ಮೂರನೇ ಅತೀದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆಯಲು ಮೋದಿ ನಾಯಕತ್ವವು ನಮಗೆ ಬೇಕು. ಆದ್ದರಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವರಿಷ್ಠರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಲೋಕಸಭೆ ಸ್ಪರ್ಧೆಗಾಗಿ ಯಾರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿದರೂ ಎರಡೂ ಪಕ್ಷಗಳ ಕಾರ್ಯಕರ್ತರು ಅವರ ಗೆಲುವಿಗೆ ಶ್ರಮವಹಿಸಬೇಕು ಎಂದು ಶಾಸಕ ವಿಶ್ವನಾಥ್ ತಿಳಿಸಿದರು.ತಾಲೂಕಿನ ಚಂದನದೂರು ಗ್ರಾಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಶಾಸಕ ವಿಶ್ವನಾಥ್, ನನ್ನ ಮಗ ಅಲೋಕ್ ವಿಶ್ವನಾಥ್ ಸಹ ಅಕಾಂಕ್ಷಿಯಾಗಿದ್ದು, ಹೈಕಮಾಂಡ್ ಯಾರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿದರೂ ನಾವೆಲ್ಲಾ ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕು, ಮೂರನೇ ಬಾರಿಗೆ ಮೋದಿಯವರನ್ನು ಪ್ರಧಾನಿಯನ್ನಾಗಿಸಿ, ಬಲಿಷ್ಠ ರಾಷ್ಟ್ರವನ್ನು ಕಟ್ಟೋಣ ಎಂದರು.
ಜೆಡಿಎಸ್ ಪಕ್ಷದ ಕೋಟೆ ಭಾಸ್ಕರ್ ಮಾತನಾಡಿ, ಹಣದ ವ್ಯಾಮೋಹಕ್ಕಾಗಲಿ, ಅಧಿಕಾರದ ಆಸೆಗಾಗಲಿ ಯಾವುದಕ್ಕೂ ಬಗ್ಗದೇ ನಮ್ಮ ಜನರ ಪರಿಸ್ಥಿತಿಯನ್ನು ಅರಿತಿರುವ ನಾಯಕರಿಗೆ ನಮ್ಮ ಪಕ್ಷದ ಬೆಂಬಲ ಇದ್ದೆ ಇರುತ್ತದೆ. ಇದೇ ಮೈತ್ರಿ ವಿಧಾನಸಭಾ ಚುನಾವಣೆಗೆ ಮುಂಚೆಯಾಗಿದ್ದರೆ ಇಂದು ನಮ್ಮ ರಾಜ್ಯದ ಪರಿಸ್ಥಿತಿ ವೈಭವಪೂರ್ಣವಾಗಿರುತ್ತಿತ್ತು ಎಂದು ತಿಳಿಸಿದರು.ರಾಜ್ಯದ ಕಾಂಗ್ರೆಸ್ ಸರ್ಕಾರ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು ಈಗ ಈಡೇರಿಸಲಾಗದೆ, ಜನರ ದಿಕ್ಕು ತಪ್ಪಿಸುತ್ತಿದೆ, ಈ ಚುನಾವಣೆಯಲ್ಲಿ ಅವರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಜೆಡಿಎಸ್ ನಾಯಕ ಹಾಗೂ ಜಿಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ರಾಜ್ಯದಲ್ಲಿ ಈಗ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಈ ಎರಡು ಪಕ್ಷದ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ಮುಂದಾಗಬೇಕು ಎಂದರು.ಕಾರ್ಯಕ್ರಮದಲ್ಲಿ ರವಿ ನಾರಾಯಣರೆಡ್ಡಿ, ಡಾ. ಶಶಿಧರ್, ಮಾರ್ಕೆಟ್ ಮೋಹನ್, ಜಯಣ್ಣ, ರಮೇಶ್ ರಾವ್ , ಜೆಡಿಎಸ್ ತಾಲೂಕು ಅಧ್ಯಕ್ಷ ಮಂಜುನಾಥ್ ರೆಡ್ಡಿ,ಕೋಟೆ ಭಾಸ್ಕರ್,ಬೈಪಾಸ್ ನಾಗರಾಜು,ನಗರಗೆರೆ ವೆಂಕಟರಮಣಪ್ಪ ಹಾಗೂ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು.