ಸಾರಾಂಶ
ಉಡುಪಿ : ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ರಾಜಿನಾಮೆ ಕೇಳಿದ್ದ ಸಿದ್ದರಾಮಯ್ಯ ಅವರು ಈಗ ಅದೇ ಮಾನದಂಡದಲ್ಲಿ ತಾವೂ ರಾಜಿನಾಮೆ ನೀಡಬೇಕು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಗುರುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ರಾಜ್ಯಪಾಲ ಹಂಸರಾಜ್ ಭಾರಧ್ವಜ್ ಅವರು ಅಂದಿನ ಸಿಎಂ ಯಡಿಯೂರಪ್ಪ ಅವರ ಮೇಲೆ ತನಿಖೆಗೆ ಅನುಮತಿ ನೀಡಿದಾಗ, ಇದೇ ಸಿದ್ದರಾಮಯ್ಯ ಅವರು ಯಡಿಯೂರಪ್ಪನವರ ರಾಜಿನಾಮೆ ಪಟ್ಟು ಹಿಡಿದು ಕೇಳಿದ್ದರು. ಈಗ ಅದೇ ಮಾನದಂಡವನ್ನು ಅನುಸರಿಸಿ, ತಮ್ಮ ಮೇಲೆ ತನಿಖೆಗೆ ಆದೇಶವಾಗಿರುವುದರಿಂದ, ಸಿದ್ದರಾಮಯ್ಯ ಅವರು ತಕ್ಷಣ ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕು, ತಮ್ಮ ಮಾತಿನಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ರಾಜಿನಾಮೆ ಕೊಡುವವರೆಗೆ ಬಿಜೆಪಿ ತನ್ನ ಹೋರಾಟ ನಿಲ್ಲಿಸುವುದಿಲ್ಲ. ಬೆಂಗಳೂರಿನಲ್ಲಿ ಗಾಂಧಿ ಪ್ರತಿಮೆ ಮುಂದೆ ಪಕ್ಷದ ವತಿಯಿಂದ ಈಗಾಗಲೇ ಹೋರಾಟ ಆರಂಭವಾಗಿದ್ದು, ರಾಜ್ಯದಾದ್ಯಂತ ಮುಂದುವರಿಯಲಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೋಟ, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರಿಗೆ ಬಹುಶಃ ಸಿದ್ದರಾಮಯ್ಯ ರಾಜಿನಾಮೆ ಕೊಡುತ್ತಾರೆ ಎಂಬ ನಂಬಿಕೆ ಇದ್ದುದರಿಂದ, ಅವರು ರಾಜಿನಾಮೆ ಕೇಳಿರಲಿಕ್ಕಿಲ್ಲ ಎಂದು ಉತ್ತರಿಸಿದರು.
ಸರ್ಕಾರದ ಗ್ಯಾರಂಟಿ ವಂಚನೆ
ರಾಜ್ಯದಲ್ಲಿ 12 ಲಕ್ಷ ಪಡಿತರ ಚೀಟಿಗಳನ್ನು ರದ್ದು ಮಾಡುವುದಕ್ಕೆ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇದರಿಂದ ಸರ್ಕಾರಕ್ಕೆ 5 ಸಾವಿರ ಕೋಟಿ ರು. ಉಳಿತಾಯವಾಗುತ್ತದೆ. ಆದರೆ ರಾಜ್ಯದ 12 ಲಕ್ಷ ಕುಟುಂಬಗಳು ಗ್ಯಾರೆಂಟಿ ಯೋಜನೆಯಿಂದ ವಂಚಿತವಾಗುತ್ತವೆ. ಇದು ರಾಜ್ಯದ ಸರ್ಕಾರದ ವೈಫಲ್ಯ ಮತ್ತು ಜನರಿಗೆ ಮಾಡುತ್ತಿರುವ ವಂಚನೆ ಎಂದು ಆರೋಪಿಸಿದರು.
ಹೈಕೋರ್ಟ್ ನೀಡಿದ ತೀರ್ಪನ್ನು ರಾಜಕೀಯ ಪ್ರೇರಿತ ಎಂದ ಸಚಿವ ಜಮೀರ್ ಅಹಮ್ಮದ್ ಹೇಳಿಕೆಗೆ ತಿರುಗೇಟು ನೀಡಿದ ಕೋಟ, ನ್ಯಾಯಾಲಯದ ತೀರ್ಪನ್ನು ಮಂತ್ರಿಗಳು ತಲೆಬಾಗಿ ಸ್ವೀಕರಿಸಬೇಕು. ಒಪ್ಪಿಗೆ ಇಲ್ಲದೇ ಇದ್ದಲ್ಲಿ ಮೇಲ್ಮನವಿ ಸಲ್ಲಿಸಬೇಕು. ಅದನ್ನು ಬಿಟ್ಟು ಇಂತಹ ಹೇಳಿಕೆ ನೀಡುವ ಮಂತ್ರಿಗಳನ್ನು ಇಟ್ಟುಕೊಂಡು ಸಿದ್ದರಾಮಯ್ಯ ಹೇಗೆ ಆಡಳಿತ ನಡೆಸುತ್ತೀರಿ ಎಂದು ಪ್ರಶ್ನಿಸಿದರು.
ತಿರುಪತಿ ಲಡ್ಡು ಪ್ರಸಾದ ಹಗರಣದ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲ ಎನ್ನುವುದು ಸುಳ್ಳು ಆರೋಪ, ಕೋಟ್ಯಾಂತರ ಹಿಂದು ಭಕ್ತರ ಭಾವನೆಗಳಿಗೆ ನೋವಾಗಿರುವ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಕಠಿಣ ಶಬ್ದಗಳಿಂದ ಖಂಡಿಸಿದ್ದಾರೆ. ಆದರೆ ಆಂಧ್ರದಲ್ಲಿ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಅಧಿಕಾರವನ್ನು ಹಂಚಿಕೊಂಡಿದ್ದ ಕಾಂಗ್ರೆಸ್ ಪಕ್ಷ ಈ ಹಗರಣದ ಬಗ್ಗೆ ಏನು ಮಾತನಾಡುತ್ತಿಲ್ಲ ಎಂದು ಕೋಟ ಪ್ರತ್ಯಾರೋಪಿಸಿದರು.