ಈಗಲಾದರೂ ಸಿದ್ದು ರಾಜೀನಾಮೆ ನೀಡಲಿ: ಶೆಟ್ಟರ್

| Published : Sep 25 2024, 12:53 AM IST

ಸಾರಾಂಶ

ಮುಖ್ಯಮಂತ್ರಿಗಳು ಈಗಲಾದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ತನಿಖೆಯಲ್ಲಿ ನಿರಪರಾಧಿ ಎಂದು ತೀರ್ಪು ಬಂದಲ್ಲಿ ಮರಳಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿ ಎಂದು ಜಗದೀಶ ಶೆಟ್ಟರ್‌ ಹೇಳಿದ್ದಾರೆ.

ಹುಬ್ಬಳ್ಳಿ:

ಮುಖ್ಯಮಂತ್ರಿ ಸಿದ್ಧರಾಮಯ್ಯ ಈಗಲಾದರೂ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಪಾಲರು ಕಾನೂನು ಬದ್ಧವಾಗಿ ಪ್ರಾಸಿಕ್ಯೂಷನ್‌ಗೆ ಆದೇಶ ನೀಡಿದ್ದರು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಇಡೀ ಸರ್ಕಾರವೇ ರಾಜ್ಯಪಾಲರ ವಿರುದ್ಧ ಟೀಕೆ ಮಾಡಿತ್ತು. ಸಾಂವಿಧಾನಿಕ ಹುದ್ದೆಗೆ ಅಪಮಾನ ಮಾಡಿದ್ದರು. ಈಗ ರಾಜ್ಯಪಾಲರ ಪರವಾಗಿ ನ್ಯಾಯಾಲಯ ತೀರ್ಪು ನೀಡಿದೆ ಎಂದರು.

ಮುಖ್ಯಮಂತ್ರಿಗಳು ಈಗಲಾದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ತನಿಖೆಯಲ್ಲಿ ನಿರಪರಾಧಿ ಎಂದು ತೀರ್ಪು ಬಂದಲ್ಲಿ ಮರಳಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿ. ಒಂದು ವೇಳೆ ರಾಜೀನಾಮೆ ನೀಡದೇ ಮುಖ್ಯಮಂತ್ರಿಯಾಗಿ ಮುಂದುವರಿದರೆ ರಾಜ್ಯದ ಜನತೆ ದಂಗೆ ಏಳುತ್ತಾರೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿದ್ದು, ಅಲ್ಲಿನ ಹೈಕಮಾಂಡ್ ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ ಒಬ್ಬ ಆರೋಪಿ ಮುಖ್ಯಮಂತ್ರಿಯನ್ನು ಅಧಿಕಾರ ನಡೆಸಲು ಅವಕಾಶ ಮಾಡಿರುವುದನ್ನು ಪ್ರಶ್ನಿಸಿ ಬಿಜೆಪಿಯಿಂದ ರಾಷ್ಟ್ರಾದ್ಯಂತ ಹೋರಾಟ ನಡೆಸಲಾಗುವುದು ಎಂದರು.

ಮಾತು ಎತ್ತಿದರೆ ಕಾಂಗ್ರೆಸ್ ನಾಯಕರು ನಾವು ಸಂವಿಧಾನದ ರಕ್ಷಕರು ಎನ್ನುತ್ತಾರೆ. ಆದರೆ, ಸಂವಿಧಾನದತ್ತ ರಾಜ್ಯಪಾಲರ ಅಸ್ತಿತ್ವ ಕುರಿತು ಪ್ರಶ್ನೆ ಮಾಡುತ್ತಾರೆ. ಹಿಂದೆ ನಡೆದ ಅರ್ಕಾವತಿ ಹಗರಣದಲ್ಲಿಯೇ ಮುಖ್ಯಮಂತ್ರಿ ಜೈಲಿಗೆ ಹೋಗಬೇಕಿತ್ತು. ಆದರೆ ಇಡೀ ಪ್ರಕರಣ ಮುಚ್ಚಿಹಾಕಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಂಡತನ ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ನಷ್ಟವಾಗಲಿದೆ. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದರು.