ಸಮಾಜ ಪತ್ರಕರ್ತರ ಅಂಕುಡೊಂಕನ್ನು ಪ್ರಶ್ನಿಸಲಿ: ಕೆವಿ ಪ್ರಭಾಕರ

| Published : Jul 30 2024, 12:30 AM IST

ಸಮಾಜ ಪತ್ರಕರ್ತರ ಅಂಕುಡೊಂಕನ್ನು ಪ್ರಶ್ನಿಸಲಿ: ಕೆವಿ ಪ್ರಭಾಕರ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಮಿಕ ಮತ್ತು ರೈತ ಹಿನ್ನೆಲೆಯಿಂದ ಬರುವ ಪತ್ರಕರ್ತರು ತಮ್ಮ ಹಿನ್ನೆಲೆ ಮತ್ತು ಶ್ರಮಿಕ ಸಮುದಾಯಗಳ ಸಂಕಷ್ಟಗಳಿಗೆ ಬೆಳಕು ಚೆಲ್ಲುವುದನ್ನು ಮರೆತು ಕಾರ್ಪೋರೇಟ್ ಗಳ ಶ್ರೀಮಂತಿಕೆಯ ವಿಜ್ರಂಭಣೆಯನ್ನೇ ಪತ್ರಿಕೋದ್ಯಮ ಅಂದುಕೊಂಡಿದ್ದಾರೆ: ಕೆವಿ ಪ್ರಭಾಕರ

ಕನ್ನಡಪ್ರಭ ವಾರ್ತೆ ಕಲಬುರಗಿ

ಪತ್ರಕರ್ತರು ಪ್ರಶ್ನಾತೀತರಲ್ಲ. ಪತ್ರಕರ್ತರು ಸಮಾಜದ ಅಂಕು ಡೊಂಕುಗಳನ್ನು ಪ್ರಶ್ನಿಸುವ ರೀತಿಯಲ್ಲೇ ಸಮಾಜ ಕೂಡ ಪತ್ರಕರ್ತರ ಅಂಕು ಡೊಂಕು, ಕೊರತೆ ಮತ್ತು ದೌರ್ಬಲ್ಯಗಳನ್ನು ಸಮಾಜ ಪ್ರಶ್ನಿಸಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಕರೆ ನೀಡಿದ್ದಾರೆ.

ಇಲ್ಲಿನ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಪತ್ರಕರ್ತರು ಪ್ರಶ್ನಾತೀತರಲ್ಲ, ಎಲ್ಲರೂ ಅವರನ್ನ ಪ್ರಶ್ನಿಸಬೇಕು ಎಂದರು.

ಕಾರ್ಮಿಕ ಮತ್ತು ರೈತ ಹಿನ್ನೆಲೆಯಿಂದ ಬರುವ ಪತ್ರಕರ್ತರು ತಮ್ಮ ಹಿನ್ನೆಲೆ ಮತ್ತು ಶ್ರಮಿಕ ಸಮುದಾಯಗಳ ಸಂಕಷ್ಟಗಳಿಗೆ ಬೆಳಕು ಚೆಲ್ಲುವುದನ್ನು ಮರೆತು ಕಾರ್ಪೋರೇಟ್ ಗಳ ಶ್ರೀಮಂತಿಕೆಯ ವಿಜ್ರಂಭಣೆಯನ್ನೇ ಪತ್ರಿಕೋದ್ಯಮ ಅಂದುಕೊಂಡಿದ್ದಾರೆ ಎಂದು ವಿಷಾದಿಸಿದರು.

ಇಂದು ಮುದ್ರಣ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮಗಳು ಹೆಚ್ಚಾಗಿ ಕಾರ್ಪೊರೇಟ್ ಆರ್ಭಟದ ಭಾಗವಾಗಿ ಕಾರ್ಯನಿರ್ವಹಿಸುವಂತಾಗಿದೆ. ಬಡ ಮತ್ತು ಮಧ್ಯಮ ವರ್ಗಗಳಿಂದಲೇ ಹೆಚ್ಚಾಗಿ ಪತ್ರಕರ್ತರು ಬರುತ್ತಿದ್ದಾಗ್ಯೂ, ಅವರೆಲ್ಲಾ ಬಡವರ ಪರವಾಗಿ ಚಿಂತನೆ ನಡೆಸುವುದಕ್ಕಿಂತಲೂ ಕಾರ್ಪೊರೇಟ್ ಆರ್ಭಟಕ್ಕೆ ದನಿಯಾಗುವ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜ ಮತ್ತು ಸರಕಾರದ ಮಧ್ಯೆ ಸೇತುವೆಯಂತೆ ಮಾಧ್ಯಮ ಕಾರ್ಯನಿರ್ವಹಿಸಿದಾಗ ಮಾತ್ರ ಜನರ ಕಷ್ಟಗಳು ಸುಲಭವಾಗಿ ಸರಕಾರದ ಗಮನಕ್ಕೆ ಬರುತ್ತವೆ. ಆದರೆ, ಇತ್ತೀಚೆಗೆ ಜನಸಾಮಾನ್ಯರ ಕಷ್ಟಗಳಿಗಿಂತಲೂ ವ್ಯಕ್ತಿ ಆಧರಿತ ವರದಿಗಳು ಹೆಚ್ಚು ಆದ್ಯತೆ ಪಡೆಯುತ್ತಿವೆ. ಅದರಲ್ಲೂ ಮುಖ್ಯವಾಗಿ ಪತ್ರಕರ್ತರಾದವರು ಕೇಳಿಸಿಕೊಳ್ಳುವ ವ್ಯವಧಾನ ಕಳೆದುಕೊಳ್ಳುತ್ತಿದ್ದಾರೆ. ಇದರ ದುಷ್ಪರಿಣಾಮ ಎಂಬಂತೆ ಬ್ರೇಕಿಂಗ್ ನ್ಯೂಸ್ ಸಂಪ್ರದಾಯ ಹುಟ್ಟಿಕೊಂಡಿದೆ. ಈ ವಿದ್ಯಮಾನದಿಂದಾಗಿ ಪತ್ರಕರ್ತರನ್ನು ಅನುಮಾನದಿಂದ ನೋಡುವಂತಾಗಿದೆ ಎಂದುಪ್ರಭಾಕರ ಸೂಚ್ಯವಾಗಿ ಪತ್ರಿಕೋದ್ಯಮ, ಪತ್ರಕರ್ತರ ಕಿವಿ ಹಿಂಡಿದರು.

ಪತ್ರಕರ್ತರಿಗೆ ಶೀಘ್ರ ಆರೋಗ್ಯ ಭಾಗ್ಯ ವಿಮೆ ಸವಲತ್ತು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಶೀಘ್ರದಲ್ಲೇ ಆರೋಗ್ಯ ಭಾಗ್ಯ ಯೋಜನೆ ಜಾರಿಗೊಳಿಸಲಾಗುತ್ತಿದೆ. ನಿರಂತರ ಧಾವಂತದಲ್ಲಿ ಸುದ್ದಿಗಾಗಿ ಅತ್ತಿತ್ತ ಸುತ್ತುವ ಪತ್ರಕರ್ತರು ಅನಾರೋಗ್ಯಕ್ಕೆ ತುತ್ತಾದಾಗ ಅಂತಹವರಿಗೆ ನೆರವಾಗಲೆಂದೇ ಈ ಯೋಜನೆ ರೂಪಿಸಲಾಗುತ್ತಿದೆ. ಮುಂದಿನ ಕೆಲವೇ ದಿನಗಳಲ್ಲಿ ಅಗತ್ಯ ಮಾರ್ಗಸೂಚಿಗಳನ್ನು ಪ್ರಕಟಿಸುವ ಮೂಲಕ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಮಾಹಿತಿ ನೀಡಿದರು.

ಸಾಮಾನ್ಯವಾಗಿ ಬಡ ಮತ್ತು ಮಧ್ಯಮ ವರ್ಗಗಳಿಂದ ಬರುವ ಪತ್ರಕರ್ತರು ಆರೋಗ್ಯ ಕೈಕೊಟ್ಟಾಗ ಹೆಚ್ಚು ಸಂಕಷ್ಟಕ್ಕೆ ಗುರಿಯಾಗುತ್ತಾರೆ. ರಾಜ್ಯ ಸರಕಾರ ಈಗಾಗಲೇ ವಿಶೇಷವಾಗಿ ಪತ್ರಕರ್ತರಿಗಾಗಿ ಆರೋಗ್ಯ ಭಾಗ್ಯಯೋಜನೆ ಜಾರಿಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಅದಾಗಲೇ ರು.10 ಕೋಟಿ ಅನುದಾನ ತೆಗೆದಿರಿಸಲಾಗಿದೆ. ಈ ಬಗ್ಗೆ ವೈದ್ಯಕೀಯ ಸಚಿವರಾದ ಡಾ. ಶರಣಪ್ರಕಾಶರೊಂದಿಗೂ ಚರ್ಚಿಸಿರುವೆ. ಇಂಥ ಯೋಜನೆ ಘೋಷಿಸಿದ ಮುಖ್ಯಮಂತ್ರಿಗಳನ್ನು ತಾವು ಅಭಿನಂದಿಸುವುದಾಗಿ ತಿಳಿಸಿದರು.

15 ದಿನಗಳಲ್ಲಿ ಬಸ್ ಪಾಸ್: ಗ್ರಾಮೀಣ ಪತ್ರಕರ್ತರಿಗೆ ಈಗಾಗಲೇ ರಾಜ್ಯ ಸರಕಾರ ಬಸ್ ಪಾಸ್ ಯೋಜನೆ ಘೋಷಿಸಿದೆ. ಆದರೆ, ಗ್ರಾಮೀಣ ಭಾಗದ ಅರ್ಹ ಪತ್ರಕರ್ತರನ್ನು ಗುರುತಿಸುವ ಕೆಲಸ ಸ್ವಲ್ಪ ಕಠಿಣವಾಗಿರುವ ಕಾರಣಕ್ಕಾಗಿ ಪೂರಕವಾದ ಮಾರ್ಗಸೂಚಿಗಳನ್ನು ಪ್ರಕಟಿಸಿದ ನಂತರ ಮುಂದಿನ 15 ದಿನಗಳಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಸುಳಿವು ನೀಡಿದರು.

ವೃತ್ತಿ ಬದ್ಧತೆಗೆ ಹೆಚ್ಚಿನ ಒತ್ತು ನೀಡಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರು ಮೊದಲು ತಮ್ಮ ಆರೋಗ್ಯದ ಕಡೆಗೆ ಕಾಳಜಿ ವಹಿಸುತ್ತಲೇ ವೃತ್ತಿ ಬದ್ಧತೆಗೆ ಹೆಚ್ಚಿನ ಒತ್ತು ನೀಡಬೇಕೆಂದರು. ಮಾಧ್ಯಮಕ್ಷೇತ್ರದಲ್ಲಿ ಇಂದು ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ.ಈ ದಿಕ್ಕಿನಲ್ಲಿ ಪತ್ರಕರ್ತರು ಹೆಚ್ಚು ಕಾಳಜಿ ವಹಿಸಬೇಕೆಂದು ಕಿವಿಮಾತು ಹೇಳಿದರು. ಮಾಧ್ಯಮಗಳ ವಿಶ್ವಾಸಾರ್ಹತೆ ಮಾತು ಬಂದಾಗ ಮುದ್ರಣ ಮಾಧ್ಯಮದತ್ತ ಜನ ಇಂದಿಗೂ ಆಶೆಯಿಂದ ನೋಡುತ್ತಿದ್ದಾರೆ. ಸಮೀಕ್ಷೆಗಳಲ್ಲಿ ಶೇ. 62 ರಷ್ಟು ವಿಶ್ವಾಸಾರ್ಹತೆ ಮುದ್ರಣ ಮಾಧ್ಯಮದ ಮೇಲೆಯೇ ಇದೆ ಎಂದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಎಲ್‌ಸಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ ಇದ್ದರು.

ಆರು ಪತ್ರಕರ್ತರಿಗೆ ಕಾಗಲ್ಕರ್ ಪ್ರಶಸ್ತಿ: ಪತ್ರಕರ್ತರಾದ ದೇವಯ್ಯ ಗುತ್ತೇದಾರ್, ಹಣಮಂತರಾವ್ ಭೈರಾಮಡಗಿ, ಶಾಮಕುಮಾರ್ ಶಿಂಧೆ, ಬಿ.ವಿ.ಚಕ್ರವರ್ತಿ, ಮಲ್ಲಿಕಾರ್ಜುನ ನೈಕೊಡಿ ಮತ್ತು ಡಾ.ಶಿವರಂಜನ ಸತ್ಯಂಪೇಟ ಅವರಿಗೆ 2024ನೇ ಸಾಲಿನ ದಿ. ವಿ.ಎನ್. ಕಾಗಲಕರ್ ಪ್ರಶಸ್ತಿ ಘೋಷಿಸಲಾಗಿತ್ತು. ಈ ಪೈಕಿ ದೇವಯ್ಯ, ಹಣಮಂತರಾವ ಗೈರು ಹಾಜರಾಗಿದ್ದರು. ಉವರನ್ನು ಹೊರತುಪಡಿಸಿ ಉಳಿದ ನಾಲ್ವರು ಪುರಸ್ಕಾರ ಸ್ವೀಕರಿಸಿದರು. ಶರಣಬಸಪ್ಪಜಿಡಗಾ, ಬಸವರಾಜ ಚಿನಿವಾರ, ವಿ.ವಿ.ದೇಸಾಯಿ, ಪುರುಷೋತ್ತಮ ಕುಲಕರ್ಣಿ, ನಾಗಲಾಂಬಿಕಾ ರವಿ ಹೊನ್ನಾ, ಬಿಂದು ಮಾಧವರಾವ್, ಭಜರಂಗಿ ನಿಂಬರಕರ್, ಸುವರ್ಣಾಎಸ್.ದೊಡ್ಡಮನಿ, ರಾಘವೇಂದ್ರ ಶರ್ಮಾ, ಶಾಂತಪ್ಪಕೋರೆ, ರವಿಶಂಕರ ಬುರ್ಲಿ, ಸಂಜೆವಾಣಿಯ ಹಿರಿಯ ವರದಿಗಾರ ವಿಜಯೇಂದ್ರ ಕುಲಕರ್ಣಿ, ರಾಚಪ್ಪ ಜಂಬಗಿ, ಈರಣ್ಣ ವಗ್ಗೆ, ಪ್ರಕಾಶ್‌ದೊರೆ, ಸರ್ಫರಾಜ್, ವಿಶ್ವರಾಧ್ಯ ಹಂಗನಳ್ಳಿ, ಮಹ್ಮದ್ ಸಲೀಮುದ್ದೀನ್, ಕೃಷ್ಣ ಕುಲಕರ್ಣಿ, ಅಕ್ರಂ ಪಾಶಾ, ರವಿ ಜಾಲವಾದಿ, ಶೇಖ್ ಬಾಬಾ, ದೇವಿಂದ್ರಪ್ಪ ಜಡಿ, ಲಿಂಗರಾಜ ಸ್ವಾಮಿ, ಸುಧೀರ ಬಿರಾದಾರ್, ಮಲ್ಲಿಕಾರ್ಜುನ ಯಾದಗಿರಿ, ಶಾಮಸುಂದರ ಕುಲಕರ್ಣಿ, ಸುರೇಶ ಬಡಿಗೇರ, ಶ್ರೀಕಾಂತ ಬಿರಾಳ ಮತ್ತು ಶರಣಪ್ಪ ಎಳ್ಳಿ ಅವರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಕನ್ನಡಪ್ರಭದ ಮಧುಸೂಧನ ಮುದ್ನಾಳ್‌, ಗಿರೀಶ ಕುಲಕರ್ಣಿಯವರಿಗೆ ಉತ್ತಮ ಸಿಬ್ಬಂದಿ ಪುರಸ್ಕಾರ ನೀಡಿ ಗೌರವಿಸಲಾಯ್ತು.