ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳು ಆಶ್ರಯ ತಾಣಗಳಲ್ಲ. ಅವು ಬದುಕಿನ ಮಾರ್ಗದರ್ಶಕವು ಹೌದು. ಸರ್ಕಾರ ಎಲ್ಲಾ ಸೌಲಭ್ಯ ನೀಡಿದೆ. ಆ ಸೌಲಭ್ಯ ಬಳಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಿ.ಮಂಜುನಾಥ ಕರೆ ನೀಡಿದರು.ಇಲ್ಲಿನ ಗಾಡಿಕೊಪ್ಪ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ವೃತ್ತಿಪರ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ಪ್ರತಿ ಹುಣ್ಣಿಮೆಯಲ್ಲಿ ಏರ್ಪಡಿಸುವ ಮನೆ, ಮನ ಸಾಹಿತ್ಯ ಕಾರ್ಯಕ್ರಮ ಸಾಹಿತ್ಯ ಹುಣ್ಣಿಮೆಯ 239ನೇ ತಿಂಗಳ ಸಂಭ್ರಮ ಮತ್ತು ಗುರುಪೂರ್ಣಿಮೆ ಪ್ರಯುಕ್ತ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭವ್ಯ ಭಾರತದ ಜಾತ್ಯತೀತ ಮನೋಭಾವ ರೂಪಗೊಳ್ಳಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಜಾತಿಗೆ, ಧರ್ಮಕ್ಕೆ ಪ್ರತ್ಯೇಕ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸುವ ಬದಲು ಎಲ್ಲರನ್ನೂ ಒಳಗೊಂಡ ನಿಲಯದ ವ್ಯವಸ್ಥೆ ಮಾಡಿದರೆ ಭಾವೈಕ್ಯತೆಯ ಅರಿವು ಮಕ್ಕಳಿದ್ದಾಗಲೇ ರೂಪಗೊಳ್ಳಲು ಪ್ರಭಾವ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು.ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ ಮಾತನಾಡಿ, ಓದು, ಬರಹ ಬಿಟ್ಟರೆ ಪ್ರಪಂಚದ ಅರಿವಿಲ್ಲದಂತೆ ವಿದ್ಯಾರ್ಥಿ ಜೀವನ ಕಳೆದುಹೋಗುತ್ತೆ. ತ್ರೈಮಾಸಿಕ ಪರೀಕ್ಷೆ ಆಚೆ ನಾವು ಓದುವ, ಅರಿಯುವ ಅಗತ್ಯ ತುಂಬಾ ಇದೆ. ಸಾಹಿತ್ಯ, ಸಾಂಸ್ಕೃತಿಕ ಆಸಕ್ತಿ ರೂಪಿಸಿಕೊಳ್ಳಲು ಇಂತಹ ಕಾರ್ಯಕ್ರಮ ಅವಶ್ಯವಿದೆ. ಕನ್ನಡದಲ್ಲಿ ಏನೆಲ್ಲಾಯಿದೆ ಎನ್ನುವುದನ್ನು ಅದರೊಳಗೆ ಪ್ರವೇಶ ಮಾಡಿನೋಡಬೇಕು. ನಮಗೆ ಒತ್ತಡದ ಬದುಕಿನ ಜೊತೆಗೆ ಸಾಹಿತ್ಯ, ಸಂಗೀತದ ಸಹವಾಸ ಮನಸ್ಸು ಹಗುರಾಗಲು ನೆರವಾಗುತ್ತೆ. ಕನ್ನಡ ಭಾಷೆಯನ್ನು ಮರೆಯದೇ ಚನ್ನಾಗಿ ಕಲಿಯುವುದು ಮುಖ್ಯ ಎಂದರು.
ಹಿರಿಯ ಸಾಹಿತಿ ಡಾ. ಶಾಂತಾರಾಮ ಪ್ರಭು ಮಾತನಾಡಿದರು.ಗಾಯಕಿ ನಳಿನಾಕ್ಷಿ, ಕೆ.ಎಸ್.ಮಂಜಪ್ಪ, ಸವಿತಾ, ಮಹಾದೇವಿ, ನಿಲಯಾರ್ಥಿ ಬೀದರ್ ಜಿಲ್ಲೆಯ ಖಾದರ್ ಹಾಡುಗಳನ್ನು ಹಾಡಿದರು.
ಕವಿಗಳಾದ ಎಂ.ನವೀನ್ ಕುಮಾರ್, ನಿಲಯಾರ್ಥಿ ಆಂಜನೇಯ ತುಮಕೂರು ಕವನ ವಾಚಿಸಿದರು. ಪ್ರೊ. ಸತ್ಯನಾರಾಯಣ ಹನಿಗವನ ವಾಚಿಸಿದರು. ಶಿಕ್ಷಕ ಮೋಹನ್ ಕುಮಾರ್, ನಿಲಯಾರ್ಥಿ ಯಶವಂತ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.ಗುರುಪೂರ್ಣಿಮೆ ಪ್ರಯುಕ್ತ ಡಾ.ಶಾಂತಾರಾಮ ಪ್ರಭು, ಎಂ.ಎಸ್.ರಜತ್ ಕುಮಾರ್ ಅವರನ್ನು ಗೌರವಿಸಲಾಯಿತು.
ನಿಲಯ ಪಾಲಕರಾದ ಎಂ.ಎಸ್.ರಜತ್ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಅನಿತಾ ಸೂರ್ಯ ನಿರೂಪಿಸಿದರು. ಡಿ. ಗಣೇಶ್ ವಂದಿಸಿದರು. ಭೈರಾಪುರ ಶಿವಪ್ಪಗೌಡ, ನಾರಾಯಣ ನಿರ್ವಹಿಸಿದರು.