ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಕಬ್ಬಿನಿಂದ ತಯಾರಾಗುವ ಎಥಿನಾಲ್‌ಗೆ ಕೇಂದ್ರ ಸರ್ಕಾರ ಪ್ರತಿ ಲೀಟರ್‌ಗೆ ಕನಿಷ್ಠ ₹90 ನೀಡಿದರೆ ಕಬ್ಬು ಬೆಳೆದ ರೈತನಿಗೆ ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ಟನ್‌ಗೆ ₹5000 ದರ ನೀಡಲು ಸಾಧ್ಯವಾಗುತ್ತದೆ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹೇಳಿದರು.ಪಟ್ಟಣದಲ್ಲಿ ಕೃಷಿ ಇಲಾಖೆಯಿಂದ ಹನಿ ನೀರಾವರಿ ಯೋಜನೆಯ ಸಲಕರಣೆಗಳನ್ನು ರೈತರಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ಕಬ್ಬಿನಿಂದ ತಯಾರಾಗುವ ಎಥೆನಾಲ್‌ಗೆ ಕೇಂದ್ರ ಸರ್ಕಾರ ಪ್ರತಿ ಲೀಟರ್‌ಗೆ ಕೇವಲ ₹60 ದರ ನೀಡುತ್ತಿದೆ. ಕಾರ್ಖಾನೆಗಳಿಂದ ಪಡೆಯುವ ಎಥೆನಾಲ್‌ನ್ನು ನೇರವಾಗಿ ಪೆಟ್ರೋಲಿಗೆ ಮಿಶ್ರಣ ಮಾಡಿ ಅದನ್ನು ಲೀಟರ್‌ಗೆ ₹103ಗೆ ಮಾರಾಟ ಮಾಡಿ ₹40 ನೇರ ಲಾಭ ಗಳಿಸುತ್ತಿದೆ. ಅದರ ಬದಲಾಗಿ ಕಬ್ಬಿನಿಂದ ತಯಾರಾಗುವ ಎಥಿನಾಲ್‌ಗೆ ಸರ್ಕಾರ ಕನಿಷ್ಠ ಪ್ರತಿ ಲೀಟರ್‌ಗೆ ₹90 ನೀಡಿದರೆ ರೈತರಿಗೂ ಅನುಕೂಲ ಆಗಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಎಥಿನಾಲ್ ದರವನ್ನು ಹೆಚ್ಚಿಸುವ ಮೂಲಕ ರೈತರ ಹಿತ ಕಾಪಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ನಂತರ ಕಬ್ಬು ಬೆಳೆಗಾರರ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಕಬ್ಬು ಬೆಳೆಯುವ ತಾಲೂಕು ಅಥಣಿ. ಇಲ್ಲಿ ಐದು ಸಕ್ಕರೆ ಕಾರ್ಖಾನೆಗಳಿವೆ. ಅಥಣಿ ತಾಲೂಕು ಒಂದರಲ್ಲೆ 75 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಮುಂಬರುವ ದಿನಗಳಲ್ಲಿ ತಾಲೂಕಿನ ಪೂರ್ವ ಭಾಗದ ಅಮಾಜೇಶ್ವರಿ ಏತ ನೀರಾವರಿ ಯೋಜನೆ ಮತ್ತು ಉತ್ತರ ಭಾಗದ ಖಿಳೇಗಾವಿ ಬಸವೇಶ್ವರ ಏತ ನೀರಾವರಿ ಯೋಜನೆ ಕೂಡಲೇ ಅನುಷ್ಠಾನಗೊಂಡರೆ, 200 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಕಬ್ಬಿನಿಂದ ಕೇವಲ ಸಕ್ಕರೆ ಮತ್ತು ಬೆಲ್ಲ ತಯಾರಿಸದೆ ಎಥಿನಾಲ್ ತಯಾರಿಸಿದರೆ ಕಬ್ಬು ಬೆಳೆಗಾರರಿಗೂ ಉತ್ತಮ ದರ ಸಿಗಲಿದೆ ಎಂದು ಹೇಳಿದರು.
ಸವಳು ಜವಳು ತಡೆಗಟ್ಟಲು ಹನಿ ನೀರಾವರಿ : ಕಬ್ಬು ಬೆಳೆಗಾರರು ಅತಿಯಾದ ನೀರು, ರಸಗೊಬ್ಬರ ಬಳಸುತ್ತಿರುವುದರಿಂದ ಫಲವತ್ತಾದ ಮಣ್ಣು ಸವಳು ಜವಳು ಹೊಂದುತ್ತಿದೆ. ಪ್ರತಿ ರೈತರು ಮಣ್ಣಿನ ಸಂರಕ್ಷಣೆ ಮಾಡುವುದು ಇಂದಿನ ಅಗತ್ಯವಾಗಿದೆ. ಆದ್ದರಿಂದ ಮಣ್ಣಿನ ಫಲವತ್ತತೆ ಕಾಪಾಡುವ ನಿಟ್ಟಿನಲ್ಲಿ ಪ್ರಾಯೋಗಿಕ ಹಂತವಾಗಿ ತಾಲೂಕಿನ ಕೆಲಸಂಗ, ಹಾಲಳ್ಳಿ, ಅರಟಾಳ ಮತ್ತು ಬಾಡಗಿ ಗ್ರಾಮಗಳ 4,800 ಹೆಕ್ಟರ್ ಪ್ರದೇಶದಲ್ಲಿ ಹನಿ ಹಾಗೂ ತುಂತುರು ನೀರಾವರಿ ಯೋಜನೆಯನ್ನು ವಿಶ್ವಬ್ಯಾಂಕ್ ರಿವಾರ್ಡ್ ಯೋಜನೆ ಅಡಿ ₹90 ಕೋಟಿ ವೆಚ್ಚದಲ್ಲಿ ಹನಿ ನೀರಾವರಿ ಯೋಜನೆಯ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಈ ಗ್ರಾಮಗಳಲ್ಲಿ ಯಶಸ್ವಿಯಾದ ಈ ಯೋಜನೆಯನ್ನು ಮುಂಬರುವ ದಿನಗಳಲ್ಲಿ ಎಲ್ಲಾ ಗ್ರಾಮಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.---ಕಬ್ಬಿನಿಂದ ತಯಾರಾಗುವ ಎಥೆನಾಲ್‌ಗೆ ಕೇಂದ್ರ ಸರ್ಕಾರ ಪ್ರತಿ ಲೀಟರ್‌ಗೆ ಕೇವಲ ₹60 ದರ ನೀಡುತ್ತಿದೆ. ಕಾರ್ಖಾನೆಗಳಿಂದ ಪಡೆಯುವ ಎಥೆನಾಲ್‌ನ್ನು ನೇರವಾಗಿ ಪೆಟ್ರೋಲಿಗೆ ಮಿಶ್ರಣ ಮಾಡಿ ಅದನ್ನು ಲೀಟರ್‌ಗೆ ₹103ಗೆ ಮಾರಾಟ ಮಾಡಿ ₹40 ನೇರ ಲಾಭ ಗಳಿಸುತ್ತಿದೆ. ಅದರ ಬದಲಾಗಿ ಕಬ್ಬಿನಿಂದ ತಯಾರಾಗುವ ಎಥಿನಾಲ್‌ಗೆ ಸರ್ಕಾರ ಕನಿಷ್ಠ ಪ್ರತಿ ಲೀಟರ್‌ಗೆ ₹90 ನೀಡಿದರೆ ರೈತರಿಗೂ ಅನುಕೂಲ ಆಗಲಿದೆ. ಲಕ್ಷ್ಮಣ ಸವದಿ, ಮಾಜಿ ಡಿಸಿಎಂ