ಮಕ್ಕಳಿಗೆ ಶಿಕ್ಷಕರು ಮಾದರಿಯಾಗಿರಲಿ: ಡಾ.ಗುರುರಾಜ್ ಕರಜಗಿ

| Published : May 13 2024, 12:06 AM IST

ಮಕ್ಕಳಿಗೆ ಶಿಕ್ಷಕರು ಮಾದರಿಯಾಗಿರಲಿ: ಡಾ.ಗುರುರಾಜ್ ಕರಜಗಿ
Share this Article
  • FB
  • TW
  • Linkdin
  • Email

ಸಾರಾಂಶ

ಸುರಪುರ ನಗರದ ತಕ್ಷಶಿಲಾ ಇಂಟರ್‌ನ್ಯಾಷನಲ್ ಸ್ಕೂಲ್ ಕಾರ್ಯಕ್ರಮವನ್ನು ವಿವಿಧ ಮಠಾಧೀಶರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ಶಿಕ್ಷಕರು ಮಕ್ಕಳಿಗೆ ಎಲ್ಲಿಯವರೆಗೂ ಮಾದರಿಯಾಗುವುದಿಲ್ಲವೋ ಅಲ್ಲಿಯವರೆಗೂ ಮೌಲ್ಯ ಕಲಿಸುವುದು ಸಾಧ್ಯವಿಲ್ಲ. ಮಕ್ಕಳ ಮುಂದೆ ನಮ್ಮ ಭಾಷೆ, ನಡೆ ಉತ್ತಮವಾಗಿರಬೇಕು ಎಂದು ಶಿಕ್ಷಣ ತಜ್ಞ ಹಾಗೂ ಬೆಂಗಳೂರಿನ ಸೃಜನಶೀಲ ಅಧ್ಯಾಪನ ಕೇಂದ್ರದ ಅಧ್ಯಕ್ಷ ಡಾ.ಗುರುರಾಜ್ ಕರಜಗಿ ಹೇಳಿದರು.

ನಗರದ ಹಸನಾಪುರದ ವೈ. ವರದರಾಜ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ತಕ್ಷಶಿಲಾ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು, ಮೌಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ. ನಮ್ಮ ಶಾಲೆಯ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಹುದ್ದೆಗಳಿಗೆ ಹೋಗಲಿ ಎಂಬ ಶ್ರದ್ಧೆ ಇಟ್ಟುಕೊಂಡು ಶಿಕ್ಷಕರು ಪಾಠ ಮಾಡಬೇಕು. ಶಿಕ್ಷಣ ಅಂದರೇ ಕೇವಲ ಸರ್ಟಿಫೀಕೆಟ್ ಅಲ್ಲ, ಅದು ಮೌಲ್ಯಯುತವಾಗಿದೆ ಎಂದರು.

12ನೇ ಶತಮಾನದಲ್ಲಿ ಕ್ರಾಂತಿ ನಡೆದ, ಸಂತರ, ಶರಣರು, ಸೂಫಿಗಳು ನಡೆದಾಡಿದ ಜಾಗ ಇದು. ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿ ಸರಿಯಲ್ಲ. ಇಲ್ಲಿಯೂ ಕೂಡ ಉತ್ತಮ ಶಿಕ್ಷಣ ವ್ಯವಸ್ಥೆ ಇದೆ. ಪ್ರತಿಭಾವಂತರಿದ್ದಾರೆ. ಇಲ್ಲಿಯೇ ಕಲಿತ ಅನೇಕರು ವಿದೇಶದಲ್ಲಿದ್ದಾರೆ. ಮಕ್ಕಳಿಗೆ ಕನ್ನಡ, ಇಂಗ್ಲಿಷ್ ಭಾಷೆ ಬರಬೇಕು. ಇಂಗ್ಲೀಷ್ ಭಾಷೆ ಗೊತ್ತಿದ್ದರೆ ಜಗತ್ತಿನ ಯಾವ ದೇಶಕ್ಕೂ ಹೋದರು ಆತ್ಮವಿಶ್ವಾಸದಿಂದ ಮಾತನಾಡಬಹುದು. ನಮ್ಮ ಪರಿಸರ, ಸಂಸ್ಕೃತಿ ಜತೆಗೆ ಜಗತ್ತಿನ ಪರಿಸರ ಅರ್ಥವಾಗಬೇಕು. ತಕ್ಷಶಿಲಾ ಸಿಬಿಎಸ್‌ಇ ಶಾಲೆ ಮಾದರಿಯಾಗಬೇಕು ಎಂದು ತಿಳಿಸಿದರು.

ಭಗೀರಥ ಪೀಠ ಹೊಸದುರ್ಗದ ಡಾ. ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಮತ್ತು ಅಗತೀರ್ಥದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಸಂದೇಶ ನೀಡಿ, ವಿದ್ಯೆ ಯಾರೂ ಕಸಿಯದ ಸಂಪತ್ತು. ಡಾ. ಮುಕುಂದ ಯನಗುಂಟಿ ಮತ್ತು ಅಂಬಿಕಾ ಅವರು ಈ ಭಾಗದಲ್ಲಿ ಸಿಬಿಎಸ್‌ಇ ಇಂಟರ್‌ನ್ಯಾಷನಲ್ ಸ್ಕೂಲ್ ಪ್ರಾರಂಭಿಸಿರುವುದು ಒಳ್ಳೆಯ ಕಾರ್ಯವಾಗಿದೆ ಎಂದು ನುಡಿದರು.

ಗೊಲಪಲ್ಲಿಯ ಶ್ರೀವಾಲ್ಮೀಕಿ ಆಶ್ರಮದ ವರದಾನೇಶ್ವರ ಸ್ವಾಮೀಜಿ, ದೇವರಗೋನಾಲದ ಹೈಯಾಳಲಿಂಗೇಶ್ವರ ದೇವಸ್ಥಾನದ ಸಣಕೆಪ್ಪ ಪೂಜಾರಿ, ಶಾಲೆಯ ಮುಖ್ಯಗುರು ರಾಕೇಶ ವೇದಿಕೆಯಲ್ಲಿದ್ದರು.

ಸಂಸ್ಥೆಯ ಅಧ್ಯಕ್ಷೆ ಅಂಬಿಕಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಮುಕುಂದ ಯನಗುಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿ, ವಂದಿಸಿದರು.-

13000 ವರ್ಷಗಳ ಹಿಂದೆ ತಕ್ಷಶಿಲಾ ಪ್ರಪಂಚದ ಹಳೆಯ ವಿಶ್ವ ವಿದ್ಯಾಲಯ ಮತ್ತು ವಿಶ್ವದ ನಂ.1 ಯುನಿವರ್ಸಿಟಿ ಅದಾಗಿತ್ತು. ವಿವಿಧ ದೇಶಗಳ 10 ಸಾವಿರ ವಿದ್ಯಾರ್ಥಿಗಳು ಅಂದು ಅಭ್ಯಾಸ ಮಾಡುತ್ತಿದ್ದರು. ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ತಕ್ಷಶಿಲಾ ಎಂಬ ಹೆಸರಿಟ್ಟಿರುವ ಪ್ರಶಂಸನೀಯ.

ಡಾ. ಗುರುರಾಜ್ ಕರಜಗಿ, ಶಿಕ್ಷಣ ತಜ್ಞರು.