ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಜ್ಞಾನಕ್ಕಿಂತ ಮಿಗಿಲಾದ ವಸ್ತು ಜಗತ್ತಿನಲ್ಲಿ ಯಾವುದೂ ಇಲ್ಲ. ಜ್ಞಾನ ಸಂಪಾದನೆ ಮತ್ತು ಜ್ಞಾನ ಪ್ರಸಾರ ಶಿಕ್ಷಕನ ಎರಡು ಕಣ್ಣುಗಳಿದ್ದಂತೆ. ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾಗಿದೆ, ಗುರುವಿನ ಸ್ಥಾನ ಹೊಂದಿರುವ ಶಿಕ್ಷಕರು ವೃತ್ತಿಯ ಗೌರವ ಕಾಪಾಡಿಕೊಂಡು ಮಕ್ಕಳಿಗೆ ವಿದ್ಯಾರ್ಜನೆ ಮಾಡಬೇಕು ಎಂದು ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಹೇಳಿದರು.ಗುರುವಾರ ಗಚ್ಚಿನ ಮಠದ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶ್ರೇಷ್ಠ ಶಿಕ್ಷಣ ತಜ್ಞ ಡಾ.ಸರ್ವಪಳ್ಳಿ ರಾಧಾಕೃಷ್ಣನ್ ಹಾಗೂ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದ ಕವಲಗುಡ್ಡ ಸಿದ್ದಾಶ್ರಮದ ಅಮರೇಶ್ವರ ಮಹಾರಾಜರು ಮಾತನಾಡಿ, ಸದೃಢ ಹಾಗೂ ಸಮೃದ್ಧ ಭಾರತ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ದೇಶದ ಅತ್ಯುನ್ನತ ಹುದ್ದೆಗಳಲ್ಲಿ ಗುರು ಅಥವಾ ಶಿಕ್ಷಕ ಎಂಬ ಹುದ್ದೆಗೆ ಬಹಳಷ್ಟು ಗೌರವವಿದೆ. ನಮ್ಮ ಶಿಕ್ಷಕರು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೇಷ್ಠ ಶಿಕ್ಷಕ ಹಾಗೂ ಶಿಕ್ಷಣ ತಜ್ಞ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳನ್ನ ಶಿಕ್ಷಕರು ಕಲಿಸಿ ಕೊಡಬೇಕೆಂದು ಕರೆ ನೀಡಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ತಂದೆ ತಾಯಿ ಜನ್ಮ ನೀಡಿದರೆ, ಅವರ ಬದುಕಿಗೆ ಜ್ಞಾನದ ಬೆಳಕು ನೀಡಿ ಸನ್ಮಾರ್ಗದಲ್ಲಿ ನಡೆಸುವ ಗುರುಗಳ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ ಮಾತನಾಡಿದರು. ಇದೆ ವೇಳೆ ನಿವೃತ್ತ ಶಿಕ್ಷಕರು, ಸಾಧಕ ಶಿಕ್ಷಕರಿಗೆ ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು.ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ತಹಸೀಲ್ದಾರ್ ಸಿದ್ದರಾಮ ಬೋಸಗಿ, ತಾಲೂಕು ಪಂಚಾಯತಿ ಅಧಿಕಾರಿ ಶಿವಾನಂದ ಕಲ್ಲಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಮೊರಟಗಿ, ಕ್ಷೇತ್ರ ಸಮನ್ವಯ ಅಧಿಕಾರಿ ಗೌಡಪ್ಪ ಕೋತ, ಅಕ್ಷರ ದಾಸೋಹ ಅಧಿಕಾರಿ ಮಲ್ಲಿಕಾರ್ಜುನ ನಾಮದಾರ ಸೇರಿದಂತೆ ಇತರರು ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಮೋರಟಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ವೈ. ತಳವಾರ ಮತ್ತು ವಿ.ಬಿ. ಚೌಗಲಾ ನಿರೂಪಿಸಿದರು. ಶ್ರಾವಣಿ ಗಸ್ತಿ ವಂದಿಸಿದರು.
ಶಿಕ್ಷಕರೇ ಇಲ್ಲದ ಶಿಕ್ಷಕ ದಿನಾಚರಣೆ: ಶಿಕ್ಷಕ ದಿನಾಚರಣೆ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಂದ ಆಗಮಿಸಬೇಕಾದ ಶಿಕ್ಷಕರು ಕಾರ್ಯಕ್ರಮಕ್ಕೆ ಆಗಮಿಸದ್ದರಿಂದ ಖುರ್ಚಿಗಳು ಖಾಲಿಯಾಗಿರುವುದು ಆಯೋಜಕರಿಗೆ ಮುಜುಗರ ತಂದಿತು.ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಕ ಸಂಘಟನೆಗಳ ಮುಖಂಡರಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿದೆ ಎನ್ನಲಾಗಿದೆ. ಪ್ರತಿವರ್ಷ ಶಿಕ್ಷಕ ದಿನಾಚರಣೆಯಲ್ಲಿ ಭಾಗವಹಿಸುತ್ತಿದ್ದ ಶಿಕ್ಷಕರು ಈ ಬಾರಿ ಕಾರ್ಯಕ್ರಮ ಬಹಿಷ್ಕರಿಸಿದ ಪರಿಣಾಮ ಸಭಾಂಗಣದಲ್ಲಿ ಶಿಕ್ಷಕರಿಲ್ಲದೆ ಬಣಗುಡುತ್ತಿದ್ದ ಖಾಲಿ ಕುರ್ಚಿಗಳಲ್ಲಿ ಪಟ್ಟಣದ ವಿವಿಧ ಶಾಲೆಯ ಮಕ್ಕಳನ್ನು ಕರೆಸಿಕೊಂಡು ಮುಜುಗರದಿಂದ ಪಾರಾಗಲು ಯತ್ನಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರಿಂದ ಕೆಲವರಿಗೆ ಇದು ಮಕ್ಕಳ ದಿನಾಚರಣೆಯೋ ಅಥವಾ ಶಿಕ್ಷಕರ ದಿನಾಚರಣೆಯೋ ಎಂಬ ಗೊಂದಲ ಉಂಟಾಯಿತು.