ಸಾರಾಂಶ
ನರಗುಂದ: ಆಧುನಿಕ ಶಿಕ್ಷಣ ನೀಡುವ ಧಾವಂತದಲ್ಲಿ, ಶಿಕ್ಷಣ ಬೋಧಿಸುವ ಭರಾಟೆಯಲ್ಲಿ ಪಾಶ್ಚಾತ್ಯ ಸಂಸ್ಕೃತಿ ರೂಢಿಸದೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಹಿಂದೂ ಧರ್ಮದ ದೇಶೀಯ ಸಂಸ್ಕೃತಿ ಕಲಿಸಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಅವರು ಪಟ್ಟಣದ ಗಾಂಧಿ ಚೌಕ ಬಳಿ ಭಾನುವಾರ ವಿದ್ಯಾನಿಕೇತನ ಎಜುಕೇಷನ್ ಟ್ರಸ್ಟ್ ಅಡಿ ಆರಂಭವಾಗುತ್ತಿರುವ ಬಚಪನ್ ಪ್ಲೇ ಸ್ಕೂಲ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಣವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಅದನ್ನು ಸಮರ್ಥವಾಗಿ ಪಡೆಯಬೇಕು. ಬಾಲ್ಯದಿಂದ ಅಂತಿಮ ಹಂತದ ವರೆಗೂ ಶಿಕ್ಷಣದ ಜತೆಗೆ ದೇಶಿ ಸಂಸ್ಕೃತಿ ಬೋಧಿಸಬೇಕು ಎಂದು ಹೇಳಿದರು.ಬಾಲ್ಯದಲ್ಲಿ ಮಗುವಿಗೆ ಆಸಕ್ತಿಗೆ ಅನುಗುಣವಾಗಿ ಕಲಿಸಬೇಕು. ಇದೇ ಭಾಷೆ ಕಲಿಯಬೇಕೆಂಬ ಒತ್ತಡ ಹೇರದೇ ಅವರಿಗೆ ಬರುವ ಭಾಷೆಯಲ್ಲಿ ಬೋಧಿಸಬೇಕು. ಮಕ್ಕಳಿಗೆ ಕಲಿಕಾ ವಾತಾವರಣ ರೂಪಿಸಬೇಕು. ಶಾಲೆಗೆ ಖುಷಿಯಿಂದ ಬರುವಂತಾಗಬೇಕು. ಬಾಲ್ಯದಲ್ಲಿ ಅಕ್ಷರದ ಭದ್ರ ಬುನಾದಿ ಹಾಕಬೇಕು. ಅಂತಾರಾಷ್ಟ್ರೀಯ ಸಂಸ್ಥೆಯ ಬಚಪನ್ ಶಾಖೆ ನರಗುಂದದಲ್ಲಿ ಆರಂಭಗೊಳ್ಳುತ್ತಿರುವುದು ಶ್ಲಾಘನೀಯ. ಸದೃಢ ಭಾರತಕ್ಕೆ ಭದ್ರ ಬುನಾದಿಯೊಂದಿಗೆ ಉತ್ತಮ ಪ್ರಜೆಗಳನ್ನು ಬಚಪನ್ ಸಂಸ್ಥೆ ಕೊಡುಗೆಯಾಗಿ ನೀಡಲಿ ಎಂದು ಆಶಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಮಾತನಾಡಿ, ಆರಂಭಿಕ ಹಂತದ ಶಿಕ್ಷಣ ಮಹತ್ವದ್ದು. ಕಲಿಕೆಗೆ ಪೂರಕ ವಾತಾವರಣದಲ್ಲಿ ಮಗುವನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.ಪ್ರಾಸ್ತಾವಿಕವಾಗಿ ವಿದ್ಯಾನಿಕೇತನ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಪವನ ಗುಜಮಾಗಡಿ ಮಾತನಾಡಿ, ಬಚಪನ್ ಪ್ಲೇ ಸ್ಕೂಲ್ ಕಲಿಕಾ ಚಟುವಟಿಕೆಯಿಂದ ಕೂಡಿದೆ. ಮನೆಯ ಸಂಸ್ಕಾರದ ಜತೆ ತಂತ್ರಜ್ಞಾನ, ದೇಶಿ ಸಂಸ್ಕೃತಿಯ ಶಿಕ್ಷಣ ಇಲ್ಲಿ ನೀಡಲಾಗುವುದು ಎಂದರು.
ಸಾನ್ನಿಧ್ಯ ವಹಿಸಿದ್ದ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಮಾತನಾಡಿ, ಆರಂಭದಲ್ಲಿಯೇ ಮಗುವಿಗೆ ಉತ್ತಮ ಮೌಲ್ಯಯುತ ಶಿಕ್ಷಣ ನೀಡಬೇಕು. ಅದು ಈ ಶಾಲೆಯಿಂದ ಸಾಕಾರಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ವಿದ್ಯಾನಿಕೇತನ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಬಿ.ಕೆ. ಗುಜಮಾಗಡಿ, ಮುಖ್ಯ ಶಿಕ್ಷಕಿ ಪ್ರಿಯಾಂಕಾ ಗುಜಮಾಗಡಿ, ಪ್ರಿಯಾಂಕಾ ಬಾಲಾಜಿ, ಬಚಪನ್ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು, ಪಾಲಕರು ಇದ್ದರು.