ಸಾರಾಂಶ
ಶಿವಮೊಗ್ಗ: ತಾಂತ್ರಿಕ ಆವಿಷ್ಕಾರಗಳಲ್ಲಿನ ಅಮೂಲಾಗ್ರ ಬದಲಾವಣೆಗಳು ಪರಿಸರಕ್ಕೆ ಹಾನಿ ಮಾಡದೆ ಸಮಾಜವನ್ನು ಉನ್ನತಿಕರಿಸುವ ಸಮತೋಲನ ಕಾಪಾಡಲಿ ಎಂದು ಅಹಮದಾಬಾದ್ ಐಐಎಂ ನಿವೃತ್ತ ಪ್ರಾಧ್ಯಾಪಕ ಪ್ರೊ.ಮುಕುಂದ.ಆರ್.ದೀಕ್ಷಿತ್ ಹೇಳಿದರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಮ್ಯಾನೇಜ್ಮೆಂಟ್ ಸ್ಟಡೀಸ್ ವಿಭಾಗದ ವತಿಯಿಂದ ಭಾರತೀಯ ವಾಣಿಜ್ಯ ಶಾಲೆ, ಎಂಟಿಸಿ ಗ್ಲೋಬಲ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಸಹಯೋಗದಲ್ಲಿ ಕಾಲೇಜಿನ ಸರ್.ಎಂ.ವಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ʼಉದ್ದಿಮೆ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ - ಬ್ಯಾಂಕ್ ಮತ್ತು ತಂತ್ರಜ್ಞಾನಗಳ ಪಾತ್ರʼ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ತಾಂತ್ರಿಕ ನಾವೀನ್ಯತೆಯ ಮೂಲಕ ಉದ್ದಿಮೆ ಕ್ಷೇತ್ರದಲ್ಲಿನ ಪ್ರತಿಯೊಂದು ಪ್ರಕ್ರಿಯೆಗಳು ಅಮೂಲಾಗ್ರ ಬದಲಾವಣೆಗಳನ್ನು ಕಾಣುತ್ತಿವೆ. ಸಾಮಾನ್ಯ ಟೆಲಿಫೋನ್‌ಗಳ ಮೂಲಕ ಪ್ರತಿಯೊಂದು ಸಂವಹನ ಸಾಧ್ಯ ಎಂಬ ಕಾಲದಿಂದ ಹೊರಬಂದು, ಜಗತ್ತೆ ಅಂಗೈಯಲ್ಲಿದೆ ಎಂಬ ಕಲ್ಪನೆ ನೀಡುವಷ್ಟು ಸ್ಮಾರ್ಟ್‌ಫೋನ್‌ಗಳು ಬಳಕೆಯಾಗುತ್ತಿದೆ. ಬ್ಯಾಂಕ್‌ಗಳಿಗೆ ಅಲೆದಾಡಿ ವ್ಯವಹಾರ ನಡೆಸುವ ಹಂತದಿಂದ, ಮೊಬೈಲ್ ಫೋನ್‌ಗಳ ಮೂಲಕವೆ ನಾವು ಇರುವಲ್ಲಿಯೆ, ಜವಾಬ್ದಾರಿಯುತ ವ್ಯವಹಾರ ನಡೆಸಲು ಸಾಧ್ಯವಾಗುತ್ತಿದೆ ಎಂದರು.
ಸ್ಪರ್ಧಾತ್ಮಕ ಯುಗದ ಪ್ರತಿಯೊಂದು ಉತ್ಪನ್ನಗಳು ನಾವೀನ್ಯತೆಯ ಬೆನ್ನೇರಿ ಬರುತ್ತಿದೆ. ಹೊಸ ಆಧುನಿಕ ಶೈಲಿಯಲ್ಲಿ ಪ್ರಾರಂಭವಾಗುವ ತ್ರಂತ್ರಜ್ಞಾನಗಳು ಮೊದಲು ಹೊಸತನದ ಅನುಭವ ನೀಡುತ್ತದೆಯಾದರು, ನಂತರ ಪರಿಸರಕ್ಕೆ ಮಾರಕವಾಗಿಯೇ ವರ್ತಿಸಿ ಸಮಾಜದಿಂದ ದೂರಾಗಿ ಬಿಡುತ್ತದೆ. ಸ್ಪರ್ಧೆ ಮತ್ತು ಆಧುನಿಕತೆಯ ಧಾವಂತದಲ್ಲಿ ನಾವೂ ಬಳಸುವ ಪ್ಲಾಸ್ಟಿಕ್‌ಗಳು, ಇ-ತ್ಯಾಜ್ಯಗಳು ಪರಿಸರಕ್ಕೆ ಮಾರಕವಾಗಿ ಪರಿಣಮಿಸುತ್ತಿರುವುದನ್ನು ಕೂಡ ಗಂಭೀರವಾಗಿ ಯೋಚಿಸಬೇಕಿದೆ. ಈ ಹಿನ್ನಲೆಯಲ್ಲಿ ಪರಿಸರ ಸ್ನೇಹಿ ತಾಂತ್ರಿಕ ಬದಲಾವಣೆಗಳಿಗೆ ಪ್ರೇರಣಾದಾಯಕ ವಾತಾವರಣ ನಿರ್ಮಾಣವಾಗಲಿ ಎಂದು ಆಶಿಸಿದರು.ಹೈದರಾಬಾದ್ ಐಸಿಬಿಎಂ ಸ್ಕೂಲ್ ಆಫ್ ಬ್ಯುಸಿನೆಸ್ ಎಕ್ಸಲೆನ್ಸ್ ಪ್ರಧಾನ ನಿರ್ದೇಶಕ ಡಾ.ಪಿ.ನಾರಾಯಣ ರೆಡ್ಡಿ ಮಾತನಾಡಿ, ಆವಿಷ್ಕಾರಿ ಬದಲಾವಣೆಗಳು ಯುವ ಸಮೂಹದ ವ್ಯಕ್ತಿತ್ವ ವಿಕಸನಕ್ಕೆ ನಾವೀನ್ಯ ಅವಕಾಶಗಳನ್ನು ನೀಡುತ್ತಿದೆಯಾದರು, ಜೊತೆಯಲ್ಲಿ ಹೊಸ ಸವಾಲುಗಳನ್ನು ನೀಡುತ್ತಿದೆ. ಉತ್ಪಾದನಾ ಕ್ಷೇತ್ರದಲ್ಲಿ ಅದೆಷ್ಟೆ ಹೊಸ ಯೋಜನೆಗಳು ಅನುಷ್ಠಾನಗೊಂಡರು, ಇನ್ನೂ ಅಮೂಲಾಗ್ರ ಬದಲವಾಣೆಗಳಿಗಾಗಿ ಕಾದು ಕುಳಿತ ಅದೆಷ್ಟೋ ಕ್ಷೇತ್ರಗಳಿವೆ, ಅಂತಹ ವಿಚಾರಗಳತ್ತ ಯುವ ಸಮೂಹ ಚಿತ್ತ ಹರಿಸಬೇಕಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಸಮಾಜದ ಹಿತಾಸಕ್ತಿಗಾಗಿ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ, ಸಂಶೋಧನಾ ಅಭಿವೃದ್ಧಿಗೆ ಮತ್ತಷ್ಟು ಆದ್ಯತೆ ನೀಡಬೇಕಿದೆ. ಬ್ಯಾಂಕಿಂಗ್ ಕ್ಷೇತ್ರ ತನ್ನ ಗ್ರಾಹಕರಿಗೆ ಆಧುನಿಕತೆಯ ಹಾದಿಯಲ್ಲಿ ಡಿಜಿಟಲ್ ಸೌಲಭ್ಯಗಳನ್ನು ನೀಡುತ್ತಿರುವುದು ಅಭಿನಂದನೀಯವಾಗಿದ್ದು, ಹಸಿರು ಸ್ನೇಹಿ ವಾತಾವರಣ ನಿರ್ಮಾಣ ಕಾರ್ಯ ಮತ್ತಷ್ಟು ತೀವ್ರಗೊಳ್ಳಲಿ ಎಂದರು.ಕರ್ನಾಟಕ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಜಯನಾಗರಾಜ ರಾವ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಅಧ್ಯಕ್ಷ ಗೋಪಿನಾಥ ಮಾತನಾಡಿದರು.
ಎನ್‌ಇಎಸ್ ನಿರ್ದೇಶಕ ಎಚ್.ಸಿ.ಶಿವಕುಮಾರ್, ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ವಿಭಾಗದ ನಿರ್ದೇಶಕ ಡಾ.ಶ್ರೀಕಾಂತ್, ಡಾ.ಶರ್ಮಾ.ಕೆ.ಆರ್.ಎಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಡಾ.ಜಿ.ಪಿ.ನಾಗೇಶ್ ಸ್ವಾಗತಿಸಿ, ಡಾ.ಹರ್ಷಾ ಮಥಡ್ ವಂದಿಸಿದರು.