ಯಕ್ಷಗಾನ ಕಲೆ ಉಳಿಸಿ ಬೆಳೆಸುವ ಕಾರ್ಯವಾಗಲಿ: ಈರಪ್ಪ

| Published : Nov 23 2024, 12:32 AM IST

ಯಕ್ಷಗಾನ ಕಲೆ ಉಳಿಸಿ ಬೆಳೆಸುವ ಕಾರ್ಯವಾಗಲಿ: ಈರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ದುರ್ಗಪ್ಪ ಗುಡಿಗಾರ ಹಾಗೂ ದೇವರಾಯ ಪೈ ಅವರು ಯಕ್ಷಗಾನಕ್ಕಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟವರಾಗಿದ್ದರು.

ಭಟ್ಕಳ: ಇಲ್ಲಿನ ದುರ್ಗಪ್ಪ ಗುಡಿಗಾರ ಮೆಮೋರಿಯಲ್ ಯಕ್ಷಗಾನ ಆರ್ಟ್ಸ್ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೇವರಾಯ ಪೈ ಸ್ಮರಣಾರ್ಥ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮವನ್ನು ಉದ್ಯಮಿ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈರಪ್ಪ ಎಂ. ಗರ್ಡಿಕರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ದುರ್ಗಪ್ಪ ಗುಡಿಗಾರ ಹಾಗೂ ದೇವರಾಯ ಪೈ ಅವರು ಯಕ್ಷಗಾನಕ್ಕಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟವರಾಗಿದ್ದರು. ಅವರನ್ನು ತೀರಾ ಹತ್ತಿರದಿಂದ ನೋಡಿದ ನಾನು ಅವರ ಮದ್ದಳೆಯ ಮಾಂತ್ರಿತೆಯನ್ನು ಅರಿತಿದ್ದೇನೆ. ಅತ್ಯಂತ ಯಶಸ್ವಿ ಯಕ್ಷಗಾನ ಕಲಾವಿದರಾದ ಅವರು ತುಂಬಾ ಕಷ್ಟದಿಂದ ಕಲಿತು ಕಲೆಯನ್ನು ಕರಗತ ಮಾಡಿಕೊಂಡವರು. ಯಕ್ಷಗಾನ ಕಲೆ ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷೆ ಶಾರದಾ ದುರ್ಗಪ್ಪ ಗುಡಿಗಾರ್ ವಹಿಸಿದ್ದರು. ಅತಿಥಿಗಳಾಗಿ ಉಪಸ್ಥಿತರಿದ್ದ ಭಟ್ಕಳ ಅರ್ಬನ್ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಹಾಗೂ ಶ್ರೀ ವಾಸುಕಿ ಸೌಹಾರ್ದ ಸಹಕಾರಿಯ ವೃತ್ತಿಪರ ನಿರ್ದೇಶಕ ಸುಭಾಷ ಎಂ. ಶೆಟ್ಟಿ, ಇನ್ನೋರ್ವ ಅತಿಥಿ ಪತ್ರಕರ್ತ ರಾಧಾಕೃಷ್ಣ ಭಟ್ಟ, ಶಿಕ್ಷಕ ಹಾಗೂ ಸಾಹಿತಿ ಶ್ರೀಧರ ಶೇಟ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ದೇವರಾಯ ಪೈ ಅವರ ಪುತ್ರ ಗಣೇಶ ದೇವರಾಯ ಪೈ ಅವರನ್ನು ಗೌರವಿಸಲಾಯಿತು. ಆನಂತರ ನಡೆದ ಯಕ್ಷಗಾನ ಬಯಲಾಟದಲ್ಲಿ ಸುಧನ್ವಾರ್ಜುನ ಪ್ರದರ್ಶನ ಜನಮೆಚ್ಚುಗೆ ಗಳಿಸಿತು. ಬಾಲಗೋಪಾಲರಾಗಿ ಇಶಾನ್ವಿ ಕಿಣಿ, ಚೈತ್ರಾ ಮಧ್ಯಸ್ಥ, ಚೇತನಾ ನಾಯ್ಕ ಹಾಗೂ ಪೀಠಿಕಾ ಸ್ತ್ರೀ ವೇಷದಲ್ಲಿ ಪಲ್ಲವಿ ಕಿಣಿ ಹಾಗೂ ತೇಜಸ್ವಿ ಕಿಣಿ ಪಾತ್ರ ಗಮನ ಸೆಳೆಯಿತು. ಸಂಜನಾ ನಾಗರಾಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗಣಪತಿ ಕಾಯ್ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಇಂದು ವನರಾಗರ ಅನುವಾದಿತ ಕೃತಿ ಬಿಡುಗಡೆ

ಯಲ್ಲಾಪುರ: ಹಿರಿಯ ಸಾಹಿತಿ, ಚಿಂತಕ ವನರಾಗ ಶರ್ಮಾ ಅವರ ಮಾರನೆಯ ಮುಂಜಾನೆ ಮತ್ತು ಪ್ರೇಮದ ಹಾದಿ ಅನುವಾದಿತ ಕಥಾ ಸಂಕಲನ ನ. ೨೩ರಂದು ಬೆಳಗ್ಗೆ ೧೦.೩೦ಕ್ಕೆ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಬಿಡುಗಡೆಗೊಳ್ಳಲಿದೆ.ಸ್ವಾಮಿ ವಿವೇಕಾನಂದ ಸಾಹಿತ್ಯ ಬಳಗ ವಜ್ರಳ್ಳಿ ಹಾಗೂ ಸರ್ವೋದಯ ವಿದ್ಯಾರ್ಥಿ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ವನರಾಗ ಶರ್ಮಾ ಅವರ ಅನುವಾದಿತ ಕೃತಿ ಮಾರನೆಯ ಮುಂಜಾನೆ ಮತ್ತು ಪ್ರೇಮದ ಹಾದಿ ಕಥಾ ಸಂಕಲನವು ಮೂಲ ಹಿಂದಿ ಲೇಖಕರಾದ ಮೃದುಲಾ ಗರ್ಗ ಮತ್ತು ಬಾಲಚಂದ್ರ ಜೋಶಿಯವರದ್ದಾಗಿದ್ದು, ಹಿಂದಿ ಭಾಷೆಯಲ್ಲಿನ ಶ್ರೇಷ್ಠ ಕಥೆಗಳನ್ನು ಒಳಗೊಂಡ ಕೃತಿಯಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ.ಶಿ. ಸಮಿತಿಯ ಡಿ. ಶಂಕರ ಭಟ್ಟ ವಹಿಸುವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ವಕ್ತಾರ ಡಿ.ಎಸ್. ಭಟ್ಟ ಶೇವ್ಕಾರ ಅನುವಾದಿತ ಕೃತಿ ಪರಿಚಯಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿ.ಎಸ್ ಗಾಂವಕರ, ಮುಖ್ಯಾಧ್ಯಾಪಕ ಎಂ.ಕೆ. ಭಟ್ಟ ಉಪಸ್ಥಿತರಿರುವರು. ನಂತರ ವಿದ್ಯಾರ್ಥಿಗಳ ಸ್ವರಚಿತ ಕವನಗಳ ಕವಿಗೋಷ್ಠಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.