ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷೆ ನೀತಿಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ ಮಾತನಾಡಿ, ಕರ್ನಾಟಕ ರಾಜ್ಯದ ಪಠ್ಯಕ್ರಮದಲ್ಲಿ ಸಾಧಾರಣವಾಗಿ ಕನ್ನಡವನ್ನು ಪ್ರಥಮ ಭಾಷೆಯಾಗಿ, ಇಂಗ್ಲಿಷನ್ನು ದ್ವಿತೀಯ ಭಾಷೆಯಾಗಿ ಮತ್ತು ತೃತೀಯ ಭಾಷೆಯಾಗಿ ಹಿಂದಿ ಕಲಿಸಲಾಗುತ್ತಿದೆ. ರಾಜ್ಯ ಪಠ್ಯಕ್ರಮದಲ್ಲಿ ಓದುವ ಮಕ್ಕಳು 3ನೇ ಭಾಷೆಯಾಗಿ ಹಿಂದಿ ಕಲಿಯುವುದು ಕಡ್ಡಾಯ ಮತ್ತು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ನೂರು ಅಂಕಗಳಿಗೆ ಹಿಂದಿ ಪರೀಕ್ಷೆ ಬರೆಯುವುದು ಕಡ್ಡಾಯ. ತೃತೀಯ ಭಾಷೆಯಾದ ಹಿಂದಿಯು ಕರ್ನಾಟಕದ ವಿದ್ಯಾರ್ಥಿಗಳಿಗೆ ಅನಗತ್ಯ ಒತ್ತಡ ಒಡ್ಡುತ್ತಿದೆ. ೨೦೨೪ರ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ೯೦,೭೯೪ ವಿದ್ಯಾರ್ಥಿಗಳು ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದಾರೆ. ಇದು ಒಟ್ಟು ವಿದ್ಯಾರ್ಥಿಗಳಲ್ಲಿ ಸುಮಾರು ಶೇ.೨೧ರಷ್ಟಿದೆ. ೨೦೨೫ರಲ್ಲಿ ಈ ಸಂಖ್ಯೆ ೧.೨ ಲಕ್ಷಕ್ಕಿಂತ ಹೆಚ್ಚಾಗಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಇದು ಅತ್ಯಂತ ಆಘಾತಕಾರಿ ಬೆಳವಣಿಗೆಯಾಗಿದೆ ಎಂದರು.
ಹಿಂದಿ ಕಡ್ಡಾಯ ಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಶೈಕ್ಷಣಿಕ ಹೊರೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಹಿಂದಿ ಹೇರಿಕೆಗೆ ಕನ್ನಡದ ಮಕ್ಕಳ ಭವಿಷ್ಯ ಬಲಿಯಾಗುತ್ತಿದೆ. ತ್ರಿಭಾಷೆ ಸೂತ್ರದ ಕುರಿತು ರಾಷ್ಟ್ರಕವಿ ಕುವೆಂಪು ಅವರು ಹಿಂದೆಯೇ ತೀಕ್ಷ್ಣವಾದ ವಿರೋಧವನ್ನು ಸಾರಿದ್ದರು. ಕರ್ನಾಟಕದ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ ಭಾಷೆ ಕಡ್ಡಾಯಗೊಳಿಸುವ ದ್ವಿಭಾಷೆ ನೀತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರೆಂದರು.ತೃತೀಯ ಭಾಷೆ ಹಿಂದಿ ಪಠ್ಯಕ್ರಮದಿಂದ ಹೊರಗಿಡಬೇಕು. ರಾಜ್ಯ ಮತ್ತು ಕೇಂದ್ರೀಯ ಶಿಕ್ಷಣ ವ್ಯವಸ್ಥೆಗಳಾದ ಸಿಬಿಎಎಸ್ಇ, ಐಸಿಎಸ್ಇ ಶಾಲೆಗಳಿಗೆ ಏಕರೂಪದ ದ್ವಿಭಾಷೆ ನೀತಿ ಜಾರಿಗೊಳಿಸಬೇಕು. ಸಿಬಿಎಎಸ್ಇ, ಐಸಿಎಸ್ಇ ಶಾಲೆಗಳಲ್ಲೂ ಪ್ರಥಮ ಭಾಷೆಯಾಗಿ ಕನ್ನಡವನ್ನೇ ಕಡ್ಡಾಯಗೊಳಿಸಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಬಲಪಡಿಸಿ. ಉತ್ತಮ ಗುಣಮಟ್ಟದ ಇಂಗ್ಲಿಷ ಶಿಕ್ಷಣ ನೀಡಬೇಕು. ಕರ್ನಾಟಕದ ಶಿಕ್ಷಣ ವ್ಯವಸ್ಥೆಯು ರಾಜ್ಯದ ಭಾಷಿಕ ಆಸ್ಮಿತೆ ಗೌರವಿಸುವ, ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸು ಖಾತ್ರಿಪಡಿಸುವ ಮತ್ತು ಜಾಗತಿಕ ಸ್ಪರ್ಧೆಗೆ ಸಿದ್ಧವಾಗಿರುವಂತಹ ಒಂದು ವ್ಯವಸ್ಥೆಯಾಗಿರಬೇಕು. ತ್ರಿಭಾಷೆ ನೀತಿಯಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಅನಗತ್ಯ ಒತ್ತಡವನ್ನು ತೆಗೆದುಹಾಕಿ, ತಮಿಳುನಾಡು ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳ ದ್ವಿಭಾಷೆ ನೀತಿ ಅನುಸರಿಸುವ ಮೂಲಕ ಕರ್ನಾಟಕವು ತನ್ನ ಭಾಷಿಕ ಗುರುತನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಂಚಾಲಕ ಸಂತೋಷ ಪಾಟೀಲ ಡಂಬಳ ಮಾತನಾಡಿ, ತಮಿಳುನಾಡು ೧೯೬೮ರಿಂದಲೇ ತ್ರಿಭಾಷೆ ನೀತಿ ತಿರಸ್ಕರಿಸಿ, ತಮಿಳು ಮತ್ತು ಇಂಗ್ಲಿಷ ಭಾಷೆಯೊಳಗೊಂಡ ದ್ವಿಭಾಷಾ ನೀತಿ ಯಶಸ್ವಿಯಾಗಿ ಜಾರಿಗೆ ತಂದಿದೆ. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ಸಹ ತ್ರಿಭಾಷೆ ನೀತಿ ರದ್ದುಗೊಳಿಸಿ, ಮರಾಠಿ ಮತ್ತು ಇಂಗ್ಲಿಷ ಭಾಷೆ ಕಡ್ಡಾಯಗೊಳಿಸುವ ನಿರ್ಧಾರ ಕೈಗೊಂಡಿದೆ. ಈ ರಾಜ್ಯಗಳು ತಮ್ಮ ಭಾಷಿಕ ಗುರುತನ್ನು ರಕ್ಷಿಸುವುದರ ಜೊತೆಗೆ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಂಡಿವೆ. ಕರ್ನಾಟಕವು ಈ ಉದಾಹರಣೆಗಳಿಂದ ಸ್ಫೂರ್ತಿ ಪಡೆದು, ಕನ್ನಡ ಮತ್ತು ಇಂಗ್ಲಿಷ ಭಾಷೆಗಳಿಗೆ ಆದ್ಯತೆ ನೀಡುವ ದ್ವಿಭಾಷೆ ನೀತಿ ಜಾರಿಗೆ ತರಬೇಕಾಗಿದೆ. ಕರ್ನಾಟಕದ ರಾಜ್ಯ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳು 5 ವಿಷಯಗಳನ್ನು (ಮೂರು ವಿಷಯಗಳು ಮತ್ತು ಎರಡು ಭಾಷೆಗಳು) ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಬರೆಯುತ್ತಾರೆ. ಆದರೆ, ತೃತೀಯ ಭಾಷೆ ಹಿಂದಿ ಕಡ್ಡಾಯವಾಗಿ ಓದಬೇಕಾದ ಒತ್ತಡವು ವಿದ್ಯಾರ್ಥಿಗಳಿಗೆ ಅನಗತ್ಯ ಹೊರೆಯಾಗಿದೆ ಎಂದು ದೂರಿದರು.ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಮಾತನಾಡಿದರು. ಮಹಾದೇವ ರಾವಜಿ, ರಾಜು ಕಂಬಾಗಿ, ರವಿ ಕಿತ್ತೂರ, ದಸ್ತಗೀರ ಸಾಲೋಟಗಿ, ಫಯಾಜ ಕಲಾದಗಿ, ಮುತ್ತು ಹಿರೇಮಠ, ಜೈಭೀಮ ಮುತ್ತಗಿ, ಅನುರಾಧಾ ಕಲಾಲ, ಕಸ್ತೂರಿ ಪೂಜಾರಿ, ಶ್ರೀಕಾಂತ ಬಿಜಾಪುರ, ಎಚ್.ಎಸ್.ಕಬಾಡೆ, ಸಾಧಿಕ ಜಾನ್ವೇಕರ, ದಾದಾಪೀರ ಮುಜಾವರ, ಆಸೀಫ ಪೀರವಾಲೆ, ದಯಾನಂದ ಸಾವಳಗಿ, ವಿನೋದ ದಳವಾಯಿ, ಮಲ್ಲನಗೌಡ ಪಾಟೀಲ, ಬಸವರಾಜ ಬಿ.ಕೆ, ವಿಜಯಕುಮಾರ ಯಂಭತನಾಳ, ಮಂಜುನಾಥ ಹಿರೇಮಠ, ನಿಸಾರ ಬೇಪಾರಿ, ಹಣಮಂತ ಟಕ್ಕಳಕಿ, ತಾಜೋದ್ದೀನ ಕಲೀಫಾ, ಅಮೀನ ಅಗಸಿಮನಿ, ಕವಿತಾ ಸಾವಳಗಿ, ಐ.ಸಿ.ಪಠಾಣ, ರಾಜು ಇಜೇರಿ, ಮೊಹ್ಮದ ಮುಲ್ಲಾ, ಇಮ್ತಿಯಾಜ ಮುಲ್ಲಾ, ಪಿದಾ ಕಲಾದಗಿ, ಬಸಲಿಂಗ ಮಡಿವಾಳ, ಭರತ ಚಿಬಲಿ, ಆನಂದ ಬಿರಾದಾರ, ಮನೋಹರ ತಾಜವ ಸೇರಿ ಇತರರಿದ್ದರು.