ಸಾರಾಂಶ
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಕಳೆದ ಎರಡು ವರ್ಷಗಳಿಂದಷ್ಟೇ ಪರಿಚಯಿಸಿದ್ದ ‘ವರ್ಷಕ್ಕೆ ಮೂರು ಪರೀಕ್ಷೆ’ ನಡೆಸುವ ವ್ಯವಸ್ಥೆ ಪರಿಷ್ಕರಿಸಿ ‘ಪರೀಕ್ಷೆ-3’ಅನ್ನು ಕೈಬಿಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ
ಲಿಂಗರಾಜು ಕೋರಾ
ಬೆಂಗಳೂರು : ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಕಳೆದ ಎರಡು ವರ್ಷಗಳಿಂದಷ್ಟೇ ಪರಿಚಯಿಸಿದ್ದ ‘ವರ್ಷಕ್ಕೆ ಮೂರು ಪರೀಕ್ಷೆ’ ನಡೆಸುವ ವ್ಯವಸ್ಥೆ ಪರಿಷ್ಕರಿಸಿ ‘ಪರೀಕ್ಷೆ-3’ಅನ್ನು ಕೈಬಿಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ಪರೀಕ್ಷೆ -3 ಎಷ್ಟು ಅಗತ್ಯ ಮತ್ತು ಅನಗತ್ಯ ಎಂಬ ಬಗ್ಗೆ ಚರ್ಚಿಸಿ ವರದಿ ನೀಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಗೆ ಶಾಲಾ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಮೌಖಿಕ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಮಂಡಳಿ ಈಗಾಗಲೇ ಅಗತ್ಯ, ಅನಗತ್ಯತೆಗಳ ಪಟ್ಟಿ ಸಿದ್ಧಪಡಿಸುತ್ತಿದೆ.
ಮಂಡಳಿಯ ಉನ್ನತ ಮೂಲಗಳ ಪ್ರಕಾರ, ಸಾಧಕ-ಬಾಧಕ ಚರ್ಚೆಯಲ್ಲಿ ಪರೀಕ್ಷೆ-3 ಅಗತ್ಯ ಎನ್ನುವುದಕ್ಕಿಂತ ಅಗತ್ಯವಿಲ್ಲ ಎಂಬ ಅಭಿಪ್ರಾಯ ಹೆಚ್ಚಾಗಿದೆ. ಮೊದಲನೆಯದಾಗಿ ಪರೀಕ್ಷೆ-3 ಅನ್ನು ಸಾಮಾನ್ಯವಾಗಿ ಜೂನ್/ಜುಲೈನಲ್ಲಿ ನಡೆಸಲಾಗುತ್ತದೆ. ಈ ವೇಳೆಗೆ ಮುಂಗಾರು ಮಳೆ ಜೋರಾಗಿರುವ ಕರಾವಳಿ, ಮಲೆನಾಡು ಹಾಗೂ ಇನ್ನಿತರೆ ಭಾಗಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಬರುವುದೂ ಕಷ್ಟವಾಗುತ್ತಿದೆ.
ಎರಡನೆಯದು ಪರೀಕ್ಷೆ-1ರಲ್ಲಿ ಪ್ರತಿ ಹೋಬಳಿ, ಗ್ರಾಪಂ ಮಟ್ಟದಲ್ಲಿ ಪರೀಕ್ಷಾ ಕೇಂದ್ರಗಳು ಲಭ್ಯವಿರುತ್ತವೆ. ಇದರಿಂದ ಪರೀಕ್ಷಾ ಕೇಂದ್ರಕ್ಕೆ ಸುತ್ತಮುತ್ತಲ ಗ್ರಾಮಗಳ ವಿದ್ಯಾರ್ಥಿಗಳು ಹೆಚ್ಚೆಂದರೆ ಮೂರು ನಾಲ್ಕು ಕಿ.ಮೀ. ದೂರ ಕ್ರಮಿಸಬೇಕು. ಆದರೆ, ಪರೀಕ್ಷೆ 3ರಲ್ಲಿ ತಾಲೂಕು ಮಟ್ಟದಲ್ಲಿ ಪರೀಕ್ಷಾ ಕೇಂದ್ರಗಳು ಇರುತ್ತವೆ. ಇದರಿಂದ ಮಕ್ಕಳು ಪರೀಕ್ಷೆಗೆ 30 ಕಿ.ಮೀ. ವರೆಗೆ ಪ್ರಯಾಣ ಮಾಡಬೇಕಾಗುತ್ತದೆ. ಪರೀಕ್ಷೆ 3ಕ್ಕೆ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆ. ಉತ್ತೀರ್ಣರಾಗುವ ಪ್ರಮಾಣ ಇನ್ನೂ ಕಡಿಮೆ. ಪಾಸಾದವರೂ ಮುಂದಿನ ಅಥವಾ ಉನ್ನತ ಶಿಕ್ಷಣಕ್ಕೆ ಸೇರಲು ಎರಡ್ಮೂರು ತಿಂಗಳು ತಡವಾಗಿರುತ್ತದೆ. ಇದರಿಂದ ತಮ್ಮಿಷ್ಟದ ಕೋರ್ಸಿಗೆ ಸೇರಲಾಗದೆ ಅನಿವಾರ್ಯವಾಗಿ ಸಿಕ್ಕ ಕೋರ್ಸಿಗೆ ಪ್ರವೇಶ ಪಡೆಯುತ್ತಾರೆ. ಸಿಇಟಿ ಪ್ರವೇಶ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕೈತಪ್ಪಬಹುದು. ಇವೆಲ್ಲ ‘ಪರೀಕ್ಷೆ-3’ಅನ್ನು ಕೈಬಿಡಬಹುದು ಎನ್ನುವುದಕ್ಕೆ ಇರುವ ಕಾರಣಗಳು.
ಅಗತ್ಯ ಏಕೆ?:ಪರೀಕ್ಷೆ-3 ಬರೆಯುವವರ ಸಂಖ್ಯೆ, ಪಾಸಾಗುವವರ ಸಂಖ್ಯೆ ಕಡಿಮೆಯೇ ಇರಬಹುದು. ಆದರೆ ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಮಕ್ಕಳು ಪುನರಾವರ್ತಿತ(ರಿಪೀಟರ್ಸ್), ಖಾಸಗಿ ಅಭ್ಯರ್ಥಿಗಳು ಇರುತ್ತಾರೆ. ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ವಿದ್ಯಾರ್ಹತೆ ದೊರೆತರೆ ಅವರ ಮುಂದಿನ ವಿದ್ಯಾಭ್ಯಾಸಕ್ಕೋ, ವೃತ್ತಿಬದುಕಿಗೋ ಸಹಕಾರಿ. ಹಾಗಾಗಿ ಈ ಪರೀಕ್ಷೆ ಉಳಿಸಿಕೊಳ್ಳಬೇಕು ಎನ್ನುವುದಕ್ಕೆ ಇರುವ ಕಾರಣ. ಹಾಗಾಗಿ ಸಾಧಕ-ಬಾಧಕ ಅಂಶಗಳನ್ನು ಮಂಡಳಿ ಪಟ್ಟಿ ಮಾಡಿ ಸರ್ಕಾರಕ್ಕೆ ಸಲ್ಲಿಸಲಿದೆ. ಅಂತಿಮವಾಗಿ ಸರ್ಕಾರ ತೀರ್ಮಾನ ಮಾಡಬೇಕಿದೆ ಎನ್ನುತ್ತಾರೆ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು.-ಬಾಕ್ಸ್-
ಎಸ್ಸೆಸ್ಸೆಲ್ಸಿಗೆ ಸಿಬಿಎಸ್‌ಇ ಮಾದರಿ
ಜಾರಿಯಾದ್ರೆ ಟಿ-3 ಅಗತ್ಯವಿರಲ್ಲ
ಮತ್ತೊಂದೆಡೆ ಸರ್ಕಾರ ಎಸ್ಸೆಸ್ಸೆಲ್ಸಿಯಲ್ಲಿ ಸಿಬಿಎಸ್‌ಇ ಮಾದರಿ ಪರೀಕ್ಷಾ ವ್ಯವಸ್ಥೆ ಜಾರಿಗೆ ಹೊರಟಿದೆ. ಇದು ಈ ವರ್ಷವೇ ಜಾರಿಯಾದರೆ ಸಿಬಿಎಸ್‌ಇ ಮಾದರಿಯಲ್ಲೇ ರಾಜ್ಯದ ಎಸ್ಸೆಸ್ಸೆಲ್ಸಿ ಫಲಿತಾಂಶ ವಾರ್ಷಿಕ ಪರೀಕ್ಷೆ 1ರಲ್ಲೇ ಶೇ.95 ದಾಟಬಹುದೆಂಬ ಲೆಕ್ಕಾಚಾರವಿದೆ. ಉಳಿದ ಶೇ.ಎರಡ್ಮೂರು ಪರ್ಸೆಂಟ್ ವಿದ್ಯಾರ್ಥಿಗಳಿಗೆ ಪರೀಕ್ಷೆ 2 ಸಾಕು, ಪರೀಕ್ಷೆ 3 ನಡೆಸುವ ಅಗತ್ಯವೇ ಬರುವುದಿಲ್ಲ ಎನ್ನಲಾಗಿದೆ.
ಫಲಿತಾಂಶ ಭಾರೀ ಪ್ರಮಾಣದಲ್ಲಿ ಏರಿಕೆ ಹೇಗೆ ಸಾಧ್ಯ ಎಂದರೆ, ವಿಷಯವಾರು ಉತ್ತೀರ್ಣಕ್ಕೆ ಪಡೆಯಬೇಕಾದ ಅಂಕಗಳ ಪ್ರಮಾಣ ಶೇ.35ರ ಬದಲು ಶೇ 33ಕ್ಕೆ(ಆಂತರಿಕ ಮತ್ತು ಲಿಖಿತ ಪರೀಕ್ಷೆ ಎರಡೂ ಸೇರಿ) ಇಳಿಯಲಿದೆ. ಈವರೆಗೆ ಪಾಸ್ ಅಂಕಕ್ಕೆ ಆಂತರಿಕ ಅಂಕಗಳನ್ನು ಪರಿಗಣಿಸುತ್ತಿರಲಿಲ್ಲ. ಲಿಖಿತ ಪರೀಕ್ಷೆಯಲ್ಲಿ ಪ್ರತಿ ವಿಷಯದಲ್ಲಿ ಶೇ.28 ಅಂಕ ಪಡೆಯುವುದು ಕಡ್ಡಾಯವಾಗಿತ್ತು. ಆದರೆ, ಸಿಬಿಎಸ್‌ಇ ವ್ಯವಸ್ಥೆ ಜಾರಿಯಾದರೆ ಒಂದು ವಿಷಯದಲ್ಲಿ 20 ಆಂತರಿಕ ಅಂಕ ಪಡೆದರೆ, ಲಿಖಿತ ಪರೀಕ್ಷೆಯಲ್ಲಿ 13 ಅಂಕ ಪಡೆದರೂ ಸಾಕು ವಿದ್ಯಾರ್ಥಿ ಪಾಸಾಗುತ್ತಾನೆ.