ನೊಂದು-ಬೆಂದ ಜೀವಕ್ಕೆ ಪುಸ್ತಕ ಸ್ಫೂರ್ತಿಯಾಗಲಿ

| Published : Oct 10 2023, 01:02 AM IST

ಸಾರಾಂಶ

ಕುಷ್ಟಗಿ ಪಟ್ಟಣದ ಬಸವ ಭವನದಲ್ಲಿ ತಾಲೂಕು ಕಸಾಪ, ಕುಷ್ಟಗಿಯ ತಿರುಳ್ಗನ್ನಡ ಪ್ರಕಾಶನದ ಸಹಯೋಗದಲ್ಲಿ ಕವಿಗೋಷ್ಠಿ ಹಾಗೂ ಲೇಖಕ ರವೀಂದ್ರ ಬಾಕಳೆ ಅವರ ''ಕೂಡಿಟ್ಟ ಕನಸು'' ಕಥಾ ಸಂಕಲನವನ್ನು ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಜಂಟಿಯಾಗಿ ಲೋಕಾರ್ಪಣೆಗೊಳಿಸಿದರು.

ಕುಷ್ಟಗಿ: ಪಟ್ಟಣದ ಬಸವ ಭವನದಲ್ಲಿ ತಾಲೂಕು ಕಸಾಪ, ಕುಷ್ಟಗಿಯ ತಿರುಳ್ಗನ್ನಡ ಪ್ರಕಾಶನದ ಸಹಯೋಗದಲ್ಲಿ ಕವಿಗೋಷ್ಠಿ ಹಾಗೂ ಲೇಖಕ ರವೀಂದ್ರ ಬಾಕಳೆ ಅವರ ''''ಕೂಡಿಟ್ಟ ಕನಸು'''' ಕಥಾ ಸಂಕಲನವನ್ನು ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಜಂಟಿಯಾಗಿ ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಜೀವನದಲ್ಲಿ ಬಹಳಷ್ಟು ನೊಂದು ಬೆಂದು ಹೋಗಿರುವ ಜನರಿಗೆ ಸಾಹಿತಿಗಳು ರಚಿಸುವ ಪುಸ್ತಕಗಳು ಹಾಗೂ ಕವಿತೆಗಳು ಅವರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕು. ಅಂತಹ ಪುಸ್ತಕಗಳನ್ನು ರಚನೆ ಮಾಡಬೇಕು. ಸಾಹಿತ್ಯ ಎಂಬುದು ಸಮಾಜದಲ್ಲಿನ ವ್ಯಾಧಿಗಳಿಗೆ ಮುಲಾಮು ಆಗುವಂತೆ ಕೆಲಸ ಮಾಡುವಂತಿರಬೇಕು ಎಂದು ಹೇಳಿದರು.

ಮಾಜಿ ಸಚಿವ ಅಮರೇಗೌಡ ಪಾಟೀಲ ಭಯ್ಯಾಪುರ ಮಾತನಾಡಿ, ಕವಿ ಕಲಾವಿದರಿಗೆ ಸಮಾಜದ ಪ್ರೋತ್ಸಾಹ ಅಗತ್ಯವಿದೆ. ಸಹೃದಯರು ಅವರನ್ನು ಸಮಾಜದ ಆಸ್ತಿಯಂತೆ ಪರಿಗಣಿಸಬೇಕು ಎಂದರು.ಜಾನಪದ ಕಲಾವಿದ ಡಾ.ಜೀವನಸಾಬ ಬಿನ್ನಾಳ ಕವಿಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದರು. ಸಾಹಿತ್ಯ ಮನುಷ್ಯ ಬದುಕಿನ ಪ್ರತಿಬಿಂಬ, ಗತಿಬಿಂಬ. ಸಾಹಿತ್ಯ ಇಂದಿನ ಸಮಕಾಲಿನ ಸಂಕಷ್ಟಗಳಿಗೆ ಸವಾಲುಗಳಿಗೆ ಪರಿಹಾರವಾಗಬೇಕಾಗಿದೆ. ಸಾಹಿತ್ಯ ಧ್ವನಿ ಇಲ್ಲದವರ ಧ್ವನಿಯಾಗಬೇಕು. ಶೋಷಿತರ, ಬಡವರ, ನಿರ್ಗತಿಕರ ಸಮಾಜದ ಮುಖ್ಯವಾಹಿನಿಯಿಂದ ದೂರ ಇರುವ ಅನೇಕರಿಗೆ ಅದು ಚೈತನ್ಯ ತುಂಬಬೇಕಾಗಿದೆ ಎಂದರು.

ಸಾಹಿತ್ಯ ಮನುಷ್ಯನಿಗೆ ಉತ್ತಮ ನಾಗರಿಕರಾಗಿ ಬದುಕಿ ಬಾಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಾವ್ಯ ಮನುಷ್ಯನ ಮನಸ್ಸನ್ನು ಅರಳಿಸುವಂತಿರಬೇಕು, ಬದಲಾಗಿ ಕೆರಳಿಸುವಂತಿರಬಾರದು. ಸಮಾಜದ ಶಾಂತಿ, ಸಾಮರಸ್ಯ ಭಾವೈಕ್ಯತೆದ ಪ್ರತಿಬಿಂಬದಂತೆ ಸಾಹಿತ್ಯ ರಚಿತವಾಗಬೇಕು. ಪುಸ್ತಕಗಳನ್ನು ಕೊಂಡುಓದುವ ಸಂಸ್ಕೃತಿ ಬೆಳೆಯಬೇಕು. ಸಾಹಿತಿಗಳಿಗೆ ಪ್ರೋತ್ಸಾಹ ಅಗತ್ಯ. ಕವಿ, ಕಲಾವಿದ, ಸಾಹಿತಿ ಈ ಸಮಾಜದ ಬಹುದೊಡ್ಡ ಆಸ್ತಿ ಎಂದರು.ಸಾಹಿತಿ ಶೇಖರಗೌಡ ಸರನಾಡಗೌಡ, ಲೇಖಕ ರವೀಂದ್ರ ಬಾಕಳೆ ಮಾತನಾಡಿ, ತಮ್ಮ ಪ್ರೋತ್ಸಾಹ ನಮಗೆ ಶ್ರೀರಕ್ಷೆ ಎಂದರು.ಸನ್ಮಾನ: ಪುಸ್ತಕ ಆಯ್ಕೆ ಸಮಿತಿಯ ಸದಸ್ಯ ಕಿಶನರಾವ್‌ ಕುಲಕರ್ಣಿ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬಸಪ್ಪ ವಾಲಿಕಾರ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನಟರಾಜ ಸೋನಾರ, ಜಂಬುನಾಥ ಅವರನ್ನು ಗೌರವಿಸಲಾಯಿತು.

ಗವಿಸಿದ್ದೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳು ಕೂಡಿಟ್ಟ ಕನಸು ಕಥೆಯ ರೂಪಕವನ್ನು ಅಭಿವ್ಯಕ್ತಿಸಿದರು. ಕಸಾಪ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ, ಡಾ. ರವಿಕುಮಾರ್ ದಾನಿ, ಶ್ರೀನಿವಾಸ್ ಜಹಗೀರದಾರ, ಶಾರದಾ ಶೆಟ್ಟರ್ ನಬಿಸಾಬ್ ಕುಷ್ಟಗಿ, ರವೀಂದ್ರ ಬಾಕಳೆ, ವಂದನಾ ಗೋಗಿ ಪಾಲ್ಗೊಂಡಿದ್ದರು. ಶರಣಪ್ಪ ವಡಿಗೇರಿ, ಡಾ. ಕೆ. ಶರಣಪ್ಪ ನೀಡಿಶೇಸಿ, ಹ.ಯ. ಈಟಿ, ತಾಜುದ್ದೀನ್ ದಳಪತಿ, ಚಂದಪ್ಪ ಹಕ್ಕಿ, ಅಮರೇಗೌಡ ಜಾಲಿಹಾಳ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಕಾರ್ಯದರ್ಶಿ ಮಹೇಶ ಹಡಪದ ಕಾರ್ಯಕ್ರಮ ನಿರೂಪಿಸಿದರು. ಶರಣಪ್ಪ ಲೈನದ ಸ್ವಾಗತಿಸಿದರು.