ಗ್ರಾಮದಲ್ಲಿ ರಾತ್ರಿ ವೇಳೆ ಬಸ್‌ ತಂಗುವಂತಾಗಲಿ: ಶಾಸಕ ಗೋವಿಂದಪ್ಪ

| Published : Sep 26 2024, 10:14 AM IST

ಗ್ರಾಮದಲ್ಲಿ ರಾತ್ರಿ ವೇಳೆ ಬಸ್‌ ತಂಗುವಂತಾಗಲಿ: ಶಾಸಕ ಗೋವಿಂದಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

Let the bus stay in the village at night: MLA Govindappa

- ರೈತರು, ವಿದ್ಯಾರ್ಥಿಗಳ ಅನುಕೂಲಕ್ಕೆ ಕ್ರಮ ಕೈಗೊಳ್ಳಿ: ಡಿಪೋ ವ್ಯವಸ್ಥಾಪಕರಿಗೆ ಶಾಸಕರ ಸಲಹೆ

--------

ಕನ್ನಡಪ್ರಭ ವಾರ್ತೆ ಹೊಸದುರ್ಗ

ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ವೇಳೆ ಬಸ್‌ ತಂಗುವಂತಾಗಬೇಕು. ಬೆಳಿಗ್ಗೆ ನಗರ ಪ್ರದೇಶಗಳಿಗೆ ಬರುವ ರೈತರು ಹಾಗೂ ವಿದ್ಯಾರ್ಥಿಗಳ ಅನುಕೂಲತೆಗೆ ಕ್ರಮ ಕೈಗೊಳ್ಳಿ ಎಂದು ಶಾಸಕ ಬಿಜಿ ಗೋವಿಂದಪ್ಪ ಡಿಪೋ ವ್ಯವಸ್ಥಾಪಕರಿಗೆ ಸೂಚಿಸಿದರು.

ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಶಕ್ತಿ ಯೋಜನೆಯಡಿ ದಿನಪ್ರತಿ ಎಷ್ಠು ಮಹಿಳೆಯರು ಅನುಕೂಲ ಪಡೆಯುತ್ತಿದ್ದಾರೆ. ಇದರಿಂದ ಸಂಸ್ಥೆಗೆ ಎಷ್ಠು ಆದಾಯ ಬಂದಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಯ ಬಳಿ ಮಾಹಿತಿ ಇಲ್ಲದ್ದನ್ನು ಕಂಡು ಸರಿಯಾದ ಮಾಹಿತಿಯಿಲ್ಲದೆ ಸಭೆಗೆ ಯಾಕೆ ಬರುತ್ತೀರೀ ಎಂದು ಬೇಸರ ವ್ಯಕ್ತ ಪಡಿಸಿ, ಸಭೆಯಲ್ಲಿಯೇ ಕೆಎಸ್‌ಆರ್‌ಟಿಸಿ ವಿಭಾಗಾಧಿಕಾರಿಗೆ ದೂರುವಾಣಿ ಕರೆ ಮಾಡಿ. ಗ್ರಾಮೀಣ ಭಾಗದಲ್ಲಿ ಬಸ್‌ಗಳು ತಂಗುವ ವ್ಯವಸ್ಥೆಯ ಜೊತೆಗೆ ಹೊಸದಾಗಿ ಡಿಪೋಗೆ ಬಂದಿರುವ ಬಸ್‌ಗಳನ್ನು ಗ್ರಾಮೀಣ ಪ್ರದೇಶಗಳಿಗೆ ಓಡಿಸುವಂತೆ ಸೂಚಿಸಿದರು.

ಗೃಹಲಕ್ಷ್ಮೀ ಯೋಜನೆಯಡಿ ಒಬಿಸಿಯವರು 19077, ಅಲ್ಪಸಂಖ್ಯಾತರು-2939, ಪ.ಜಾತಿ-11500. ಪ.ಪಂ- 4020, ಇತರೆ - 19672 ಒಟ್ಟು 57208 ಜನರು ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 321 ಜನರಿಗೆ ತಾಂತ್ರಿಕ ಕಾರಣಗಳಿಂದ ಹಣ ಬಂದಿಲ್ಲ ಎಂದು ಸಿಡಿಪಿಒ ಅಭಿಲಾಷ ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಹಣ ಬಾರದ 321 ಜನರನ್ನು ಗುರುತಿಸಿದ್ದೀರಾ, ಅವರಿಗೆ ಸರಿಯಾದ ಮಾಹಿತಿ ನೀಡಿ ಅವರಿಗೂ ಹಣ ತಲುಪುವಂತೆ ಮಾಡಿ ಮುಂದಿನ ಸಭೆಯೊಳಗೆ ಹಣ ತಲುಪದವರ ಸಂಖ್ಯೆ ಶೂನ್ಯ ಇರಬೇಕು ಎಂದರು.

ಅನ್ನಭಾಗ್ಯ ಯೋಜನೆಯಡಿ 56081 ಅರ್ಹ ಫಲಾನುಭವಿಗಳಿದ್ದು ಅವರಲ್ಲಿ 713 ಜನರಿಗೆ ಅಕ್ಕಿಯ ಬದಲಾಗಿ ನೀಡಲಾಗುತ್ತಿರುವ ಹಣ ಬಂದಿಲ್ಲ ಎಂದು ಸಭೆಗೆ ಆಹಾರ ಇಲಾಖೆ ಅಧಿಕಾರಿ ತಿಳಿಸಿದಾಗ ಅವರಿಗೆ ಅಕ್ಕಿ ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ಅಕ್ಕಿ ನೀಡಲಾಗುತ್ತಿದೆ. ಆದರೆ, ಬ್ಯಾಂಕ್‌ಗಳಲ್ಲಿ ಎನ್‌ಪಿಸಿ ಮ್ಯಾಪಿಂಗ್‌ ಆಗದಿರುವ ಕಾರಣ ಹಣ ಬರುತ್ತಿಲ್ಲ ಎಂದು ತಿಳಿಸಿದರು.

ಗೃಹಜ್ಯೋತಿ ಯೋಜನೆಯಡಿ ಹೊಸದುರ್ಗ ಉಪ ವಿಭಾಗದಿಂದ 40010 ಸ್ಥಾವರಗಳು ಜಾಲ್ತಿಯಲ್ಲಿದ್ದು ಅದರಲ್ಲಿ 36615 ಜನರು ಈ ಯೋಜನೆಯ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ. ಹಾಗೆಯೇ ಶ್ರೀರಾಂಪುರ ಉಪ ವಿಭಾಗದಿಂದ 25652 ಸ್ಥಾವರಗಳಿದ್ದು ಅದರಲ್ಲಿ 24544 ಸ್ಥಾವರಗಳ ಫಲಾನುಭವಿಗಳು ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಬೆಸ್ಕಾಂ ನ ಎರಡು ಉಪ ವಿಭಾಗಗಳ ಅಧಿಕಾರಿಗಳು ಮಾಹಿತಿ ನೀಡಿದರು.

ಶ್ರೀರಾಂಪುರದಲ್ಲಿ ವಿದ್ಯುತ್‌ ಸಮಸ್ಯೆ ಇದೆ ಎಂಬ ದೂರು ಕೇಳಿ ಬರುತ್ತಿದೆ. ಹೋಬಳಿ ಕೇಂದ್ರ ಸೇರಿದಂತೆ ದೊಡ್ಡ ಗ್ರಾಮಗಳಿಗೆ ಎಂಯುಎಸ್‌ನಿಂದ ನೇರ ಮಾರ್ಗ ನಿರ್ಮಾಣ ಮಾಡಿಕೊಳ್ಳದೆ ಹಳ್ಳಿಗಳ ಮೂಲಕ ಮಾರ್ಗ ನಿರ್ಮಿಸಲಾಗಿದ್ದು, ಇದರಿಂದ ಹೆಚ್ಚು ಆದಾಯ ಬರುವ ಗ್ರಾಮಗಳಿಗೆ ವಿದ್ಯುತ್‌ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ನೇರ ಮಾರ್ಗ ರಚನೆಗೆ ವರದಿ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ತಾಲೂಕು ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ಜಿಲ್ಲಾ ಕೆಡಿಪಿ ಸದಸ್ಯೆ ದೀಪಿಕಾ ಸತೀಶ್, ಇಒ ಸುನೀಲ್ ಕುಮಾರ್, ಸೇರಿದಂತೆ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ಕೆಡಿಪಿ ಸದಸ್ಯರು ಹಾಜರಿದ್ದರು.----

ಪೋಟೋ, 25ಎಚ್‌ಎಸ್‌ಡಿ3: ಹೊಸದುರ್ಗದ ತಾಪಂ ಸಭಾಂಗಣದಲ್ಲಿ ಶಾಸಕ ಬಿಜಿ ಗೋವಿಂದಪ್ಪ ಅವರ ನೇತೃತ್ವದಲ್ಲಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು.