ಕೇಂದ್ರ ಸರ್ಕಾರ ಕೂಡಲೇ ಬರ ಪರಿಹಾರ ನೀಡಲಿ

| Published : Feb 09 2024, 01:45 AM IST

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪಕ್ಷದ ಜಿಲ್ಲಾ ಪ್ರಮುಖರು ಹಾಗೂ ಸದಸ್ಯರು ಕೇಂದ್ರ ಸರ್ಕಾರ ಕೂಡಲೇ ತೆರಿಗೆ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಘೋಷಣೆ ಕೂಗಿದರು.

ಬಳ್ಳಾರಿ: ಕರ್ನಾಟಕದ ತೆರಿಗೆ ಹಣ ನೀಡುವಿಕೆಯಲ್ಲಿ ಕೇಂದ್ರವು ತಾರತಮ್ಯ ಎಸಗಬಾರದು ಹಾಗೂ ಬರಗಾಲ ಹಿನ್ನೆಲೆಯಲ್ಲಿ ರಾಜ್ಯಕ್ಕೆ ನೀಡಬೇಕಾದ ಪರಿಹಾರ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಸಿಪಿಐಎಂ ಪಕ್ಷದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿಪತ್ರ ಕಳಿಸಿದರು.

ದೇಶದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಕೆಲಸವಾಗಬೇಕೇ ವಿನಾ, ಕೇಂದ್ರವು ಆಯಾ ರಾಜ್ಯಗಳ ಮೇಲೆ ಅಧಿಕಾರ ದುರಪಯೋಗ ಮತ್ತು ಹಸ್ತಕ್ಷೇಪ ಕೆಲಸಗಳನ್ನು ಮಾಡಬಾರದು. ಇದರಿಂದ ದೇಶದ ಒಟ್ಟಾರೆ ಒಕ್ಕೂಟ ಸ್ವರೂಪಕ್ಕೆ ಧಕ್ಕೆಯಾಗುತ್ತದೆ. ಕರ್ನಾಟಕ ಹಾಗೂ ಕೇರಳ ರಾಜ್ಯಗಳು ಕೇಂದ್ರ ಸರ್ಕಾರದ ಅನುದಾನ ಹಂಚಿಕೆ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಹೋರಾಟಕ್ಕೆ ಧುಮುಕಿದ್ದು, ಈ ಎರಡು ರಾಜ್ಯಗಳ ಹೋರಾಟವನ್ನು ಸಿಪಿಐಎಂ ಪಕ್ಷ ಬೆಂಬಲಿಸುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜೆ. ಸತ್ಯಬಾಬು ಹಾಗೂ ಚಂದ್ರಕುಮಾರಿ ಅವರು ಮಾತನಾಡಿ, ಕೇಂದ್ರದ ಪ್ರಾಯೋಜಿತ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹಾಕುವುದನ್ನು ನಿಲ್ಲಿಸಬೇಕು. ರಾಜ್ಯ ಸರ್ಕಾರಗಳನ್ನು ಗುರಿಯಾಗಿರಿಸಿಕೊಂಡು ಜಾರಿ ನಿರ್ದೇಶನಾಲಯ(ಇಡಿ), ಕೇಂದ್ರೀಯ ತನಿಖಾ ದಳ(ಸಿಬಿಐ) ಹಾಗೂ ಆದಾಯ ತೆರಿಗೆ ಇಲಾಖೆಗಳನ್ನು(ಐಟಿ) ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ರಾಜ್ಯದ ವಿವಿಗಳ ವಿಚಾರದಲ್ಲಿ ರಾಜ್ಯಪಾಲರ ಹಸ್ತಕ್ಷೇಪವೂ ನಿಲ್ಲಬೇಕು ಎಂದು ಆಗ್ರಹಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪಕ್ಷದ ಜಿಲ್ಲಾ ಪ್ರಮುಖರು ಹಾಗೂ ಸದಸ್ಯರು ಕೇಂದ್ರ ಸರ್ಕಾರ ಕೂಡಲೇ ತೆರಿಗೆ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಘೋಷಣೆ ಕೂಗಿದರು.

ಪಕ್ಷದ ಜಿಲ್ಲಾ ಪ್ರಮುಖರಾದ ಪಿ.ಆರ್‌. ವೆಂಕಟೇಶ್, ಎಂ. ತಿಪ್ಪೇಸ್ವಾಮಿ ಕುಡಿತಿನಿ, ಯು. ಎರಿಸ್ವಾಮಿ, ಬೈಲಾ ಹನುಮಂತಪ್ಪ, ತಿಪ್ಪರುದ್ರಪ್ಪ ವೈ. ಕಗ್ಗಲ್, ಈರಮ್ಮ, ಕಿರಣ್‌ ಹಾಗೂ ಹಾಲಂಬಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.