ಚಕೋರ ಸಾಹಿತ್ಯ ವಿಚಾರ ವೇದಿಕೆ ಕಾರ್ಯಕ್ರಮಗಳು ಎಲ್ಲೆಡೆ ಪಸರಿಸಲಿ-ಸುಧಾ

| Published : May 18 2025, 11:46 PM IST

ಚಕೋರ ಸಾಹಿತ್ಯ ವಿಚಾರ ವೇದಿಕೆ ಕಾರ್ಯಕ್ರಮಗಳು ಎಲ್ಲೆಡೆ ಪಸರಿಸಲಿ-ಸುಧಾ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯ ಲೋಕಕ್ಕೆ ಜಿಲ್ಲೆಯು ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀದಿದೆ. ಅಂತಹ ಭವ್ಯ ಪರಂಪರೆಯ ಇತಿಹಾಸವನ್ನು ಅವಲೋಕನ ಮಾಡಿ ಅದನ್ನು ಇನ್ನಷ್ಟು ಪ್ರಸಾರ ಮಾಡುವ ಕೆಲಸವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರಿನ ಚಕೋರ ಸಾಹಿತ್ಯ ವಿಚಾರ ವೇದಿಕೆ ಗದಗ ಇದರ ವತಿಯಿಂದ ಗದಗ ಜಿಲ್ಲೆಯ ಎಲ್ಲೆಡೆ ಪಸರಿಸುವ ಕಾರ್ಯ ನಿರಂತರ ನಡೆಯುವಂತಾಗಲಿ ಎಂದು ಸಾಹಿತಿ ಸುಧಾ ಹುಚ್ಚಣ್ಣವರ ಹೇಳಿದರು.

ಗದಗ: ಕನ್ನಡ ಸಾಹಿತ್ಯ ಲೋಕಕ್ಕೆ ಜಿಲ್ಲೆಯು ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀದಿದೆ. ಅಂತಹ ಭವ್ಯ ಪರಂಪರೆಯ ಇತಿಹಾಸವನ್ನು ಅವಲೋಕನ ಮಾಡಿ ಅದನ್ನು ಇನ್ನಷ್ಟು ಪ್ರಸಾರ ಮಾಡುವ ಕೆಲಸವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರಿನ ಚಕೋರ ಸಾಹಿತ್ಯ ವಿಚಾರ ವೇದಿಕೆ ಗದಗ ಇದರ ವತಿಯಿಂದ ಗದಗ ಜಿಲ್ಲೆಯ ಎಲ್ಲೆಡೆ ಪಸರಿಸುವ ಕಾರ್ಯ ನಿರಂತರ ನಡೆಯುವಂತಾಗಲಿ ಎಂದು ಸಾಹಿತಿ ಸುಧಾ ಹುಚ್ಚಣ್ಣವರ ಹೇಳಿದರು. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವಿಚಾರ ವೇದಿಕೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ಪ್ರಾಚೀನ ಕವಿಗಳಾದ ನಯಸೇನ, ಚಾಮರಸ, ದುರ್ಗಸಿಂಹ, ಕುಮಾರವ್ಯಾಸ ಮೊದಲಾದವರ ಕೃತಿಗಳ ಓದು ಕಾರ್ಯಕ್ರಮಗಳು ನಡೆಯಲಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಯಸೇನನ ಧರ್ಮಾಮೃತ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ. ಅಂದಯ್ಯ ಹಿರೇಮಠ ಹನ್ನೊಂದನೆಯ ಶತಮಾನದ ಪೂರ್ವಾರ್ಧದಲ್ಲಿ ಧರ್ಮಾಮೃತ ಎಂಬ ಚಂಪೂ ಕೃತಿ ರಚನೆ ಮಾಡಿದ ಮುಳುಗುಂದದ ನಯಸೇನ ಒಬ್ಬ ದಿಗಂಬರ ಜೈನ ಸನ್ಯಾಸಿ. ಆ ಕಾಲದಲ್ಲಿಯ ಜೈನ ಧರ್ಮದ ತತ್ವ ಸಿದ್ದಾಂತಗಳ ಪ್ರಸಾರಕ್ಕಾಗಿ ಅವಿರತ ಪ್ರಯತ್ನ ಮಾಡಿದನು. ಅಲ್ಲದೆ ಇದುವರೆಗಿನ ಕಾವ್ಯ ಮಾರ್ಗವನ್ನು ಬದಲಿಸಿ ಜನಸಾಮಾನ್ಯರನ್ನು ಒಳಗೊಳ್ಳುವಂತೆ ಕಾವ್ಯ ಬರೆದಿರುವುದು ಅತ್ಯಂತ ಮಹತ್ವದ್ದು. ಇದು ಒಟ್ಟು ಹದಿನಾಲ್ಕು ಕತೆಗಳ ಸಂಗ್ರಹ. ಜೈನ ಧರ್ಮ ಇಳಿಮುಖವಾಗುತ್ತಿರುವ ಅಂದಿನ ಕಾಲದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ಕಾವ್ಯ ಬರೆದ ಜನಪದ ಕವಿ ನಯಸೇನ ಎಂಬುದು ಗಮನಾರ್ಹ ಸಮಗತಿ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತುಮಕೂರಿನ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿಗಳೆಲ್ಲ ನಮ್ಮ ಹೆಮ್ಮೆಯ ಅಭಿಮಾನದ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯೊಯುವ ಕೆಲಸವನ್ನು ಮಾಡಬೇಕಾದುದು ಅಗತ್ಯವಿದೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮುಂತಾದವರು ಮಾತನಾಡಿದರು. ಚಕೋರ ಸಾಹಿತ್ಯ ವಿಚಾರ ವೇದಿಕೆಯ ಗುರಿ ಉದ್ದೇಶಗಳನ್ನು ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಡಾ. ಅರ್ಜುನ ಗೊಳಸಂಗಿ ಮಾತನಾಡಿದರು. ಡಾ. ಜಿ.ಬಿ. ಪಾಟೀಲ, ಚಕೋರ ವೇದಿಕೆಯ ಸಂಚಾಲಕ ಎಸ್.ಯು. ಸಜ್ಜನಶೆಟ್ಟರ ನಿರೂಪಿಸಿದರು. ಶಿಲ್ಪಾ ಮ್ಯಾಗೇರಿ ಸ್ವಾಗತಿಸಿದರು.