ಕಾಲುಸಂಕದ ಹೊರತು ಚಟ್ಕುಣಿ ಗ್ರಾಮಕ್ಕೆ ದಾರಿಯೇ ಇಲ್ಲ

| Published : May 18 2025, 11:46 PM IST

ಕಾಲುಸಂಕದ ಹೊರತು ಚಟ್ಕುಣಿ ಗ್ರಾಮಕ್ಕೆ ದಾರಿಯೇ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ , ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ, ಸುವರ್ಣ ಸ್ವಾತಂತ್ರ್ಯೋತ್ಸವ ಸಂಭ್ರಮ ಆಚರಿಸಿಕೊಂಡರೂ ಇಲ್ಲಿನ ಗ್ರಾಮಸ್ಥರು ಕಾಲುಸಂಕದಲ್ಲಿಯೇ ಓಡಾಡುತ್ತಿದ್ದಾರೆ. ಬೇರೆ ಸೇತುವೆಯೂ ಇಲ್ಲ. ಅಡಕೆ ಮರದ ತುಂಡುಗಳು, ಮರದ ದಿಮ್ಮಿಗಳು, ಬೀಳು, ಮರದ ಕಂಬಗಳಿಂದ ಸ್ವಯಂ ನಿರ್ಮಿತ ಕಾಲು ಸಂಕದ ಮೇಲೆ ನಿತ್ಯ ಗ್ರಾಮಸ್ಥರ ಓಡಾಟ. ಆದರೂ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ, ಸರ್ಕಾರವಾಗಲೀ ಇತ್ತ ಕಣ್ಣು ಹಾಯಿಸಿಯೇ ಇಲ್ಲ.

ಮಳೆಗಾಲದಲ್ಲಿ ಹಳ್ಳ ಉಕ್ಕಿ ಹರಿದರೆ ಅಪಾಯ ಖಚಿತ । ಚಟ್ಕುಣಿ ಗ್ರಾಮಸ್ಥರಿಗೆ ದಾಟಲು ಸೇತುವೆಯಿಲ್ಲ ಕಾಲುಸಂಕವೇ ಗತಿ । ಅಧಿಕಾರಿಗಳು,ಜನಪ್ರತಿನಿಧಿಗಳು,ಸರ್ಕಾರದ ನಿರ್ಲಕ್ಷ । ಜೀವ ಕೈಯಲ್ಲಿ ಹಿಡಿದೇ

ನೆಮ್ಮಾರ್ ಅಬೂಬಕರ್.

ಕನ್ನಡಪ್ರಭ ವಾರ್ತೆ, ಶೃಂಗೇರಿ

ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ, ಸುವರ್ಣ ಸ್ವಾತಂತ್ರ್ಯೋತ್ಸವ ಸಂಭ್ರಮ ಆಚರಿಸಿಕೊಂಡರೂ ಇಲ್ಲಿನ ಗ್ರಾಮಸ್ಥರು ಕಾಲುಸಂಕದಲ್ಲಿಯೇ ಓಡಾಡುತ್ತಿದ್ದಾರೆ. ಬೇರೆ ಸೇತುವೆಯೂ ಇಲ್ಲ. ಅಡಕೆ ಮರದ ತುಂಡುಗಳು, ಮರದ ದಿಮ್ಮಿಗಳು, ಬೀಳು, ಮರದ ಕಂಬಗಳಿಂದ ಸ್ವಯಂ ನಿರ್ಮಿತ ಕಾಲು ಸಂಕದ ಮೇಲೆ ನಿತ್ಯ ಗ್ರಾಮಸ್ಥರ ಓಡಾಟ. ಆದರೂ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ, ಸರ್ಕಾರವಾಗಲೀ ಇತ್ತ ಕಣ್ಣು ಹಾಯಿಸಿಯೇ ಇಲ್ಲ.

ಇದು ತಾಲೂಕಿನ ಮರ್ಕಲ್ ಪಂಚಾಯಿತಿ ಚಟ್ಕುಣಿ ಗ್ರಾಮಸ್ಥರ ಅಗತ್ಯ ಸೇತುವೆ ನಿರ್ಮಾಣ ಬೇಡಿಕೆ ಕಥೆ- ವ್ಯಥೆ. ಕಿಗ್ಗಾದಿಂದ ಸುಮಾರು 5 ಕಿಲೋ ಮೀಟರ್ ದೂರದಲ್ಲಿರುವ ಚಟ್ಕುಣಿ ಗ್ರಾಮ. ಇಲ್ಲಿ ಸುಮಾರು 30 ರಿಂದ 40 ಮನೆಗಳಿವೆ. ಇಲ್ಲಿಗೆ ಬಂದು ಹೋಗಲು, ಓಡಾಡಲು ಸಮರ್ಪಕ ರಸ್ತೆ ಸೌಲಭ್ಯವಿಲ್ಲ. ಮೋಬೈಲ್ ನೆಟ್ ವರ್ಕ ಇಲ್ಲವೇ ಇಲ್ಲ. ಮೂಲಭೂತ ಸೌಕರ್ಯಗಳೇ ಇಲ್ಲದೇ ಜ್ವಲಂತ ಸಮಸ್ಯೆಗಳೇ ಗ್ರಾಮಸ್ಥರನ್ನು ಕಾಡುತ್ತಿವೆ.

ಚಟ್ಕುಣಿ ಗ್ರಾಮಸ್ಥರು ಕಿಗ್ಗಾ ಪಟ್ಟಣಕ್ಕೆ ಬರಬೇಕಾದರೆ ಸುಮಾರು 25 ಕಿಲೋಮೀಟರ್ ದೂರ ಸಂಚರಿಸಬೇಕು. ನಡುವೆ ಹಳ್ಳ ದಾಟಬೇಕು. ಇಲ್ಲೊಂದು ಕಾಲು ಸಂಕವಿದೆ. ಕಿಗ್ಗಾ ಚಟ್ಕುಣಿ ನಡುವೆ ಸಂಪರ್ಕ ಕಲ್ಪಿಸುವ ಕೇಂದ್ರ ಬಿಂದುವಾದ ಈ ಕಾಲು ಸಂಕದ ಮೂಲಕವೇ ಗ್ರಾಮಸ್ಥರು ಅಗತ್ಯ ಕೆಲಸಗಳಿಗೆ ಕಿಗ್ಗಾ ಪಟ್ಟಣಕ್ಕೆ ಬರಬೇಕು. ಹಲವಾರು ವರ್ಷಗಳಿಂದ ಈ ಗ್ರಾಮಸ್ಥರು ಇಲ್ಲಿಗೊಂದು ಸೇತುವೆಯೋ, ತೂಗು ಸೇತುವೆಯನ್ನೂ ನಿರ್ಮಿಸಿಕೊಡುವಂತೆ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ವಾರ್ಡ್ ಸಭೆ, ಗ್ರಾಮಸಭೆ, ಜನಸಂಪರ್ಕ ಸಭೆಗಳಲ್ಲಿ ತಮ್ಮ ಅಹವಾಲುಗಳ ಮನವಿ ನೀಡುತ್ತಲೇ ಬರುತ್ತಿದ್ದಾರೆ. ಸರ್ಕಾರ ಜನಪ್ರತಿನಿಧಿಗಳು ಬದಲಾಗುತ್ತಲೇ ಇದ್ದಾರೆ. ಭರವಸೆಗಳು ನೀಡುತ್ತಲೇ ಇದ್ದಾರೆ. ಪರಿಸ್ಥಿತಿ ಮಾತ್ರ ಬದಲಾಗಿಲ್ಲ.

ಈ ಹಳ್ಳ ಮಳೆಗಾಲದಲ್ಲಿ ತುಂಬಿ ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತದೆ. ಕಾಲು ಸಂಕ ಮುಳುಗಿ, ನೀರಿನ ರಭಸಕ್ಕೆ ಕಾಲು ಸಂಕ ಕೊಚ್ಚಿಕೊಂಡು ಹೋಗುತ್ತದೆ. ಗ್ರಾಮಸ್ಥರು ಪ್ರತೀ ವರ್ಷ ಕಾಲು ಸಂಕ ನಿರ್ಮಾಣ ಮಾಡುತ್ತಾರೆ. ಈ ಕಾಲು ಸಂಕದ ಮೇಲೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ಕಚೇರಿ, ಆಸ್ಪತ್ರೆ, ಬ್ಯಾಂಕ್ ಇತ್ಯಾದಿ ಕೆಲಸಗಳಿಗೆ ಗ್ರಾಮಸ್ಥರು ಓಡಾಡಬೇಕಿದೆ. ಮಕ್ಕಳು, ವಿದ್ಯಾರ್ಥಿಗಳು, ಹೆಂಗಸರು, ವೃದ್ದರು ಮಳೆಗಾಲದಲ್ಲಿ ತುಂಬಿ ಹರಿಯುವ ಈ ಹಳ್ಳದ ಮೇಲಿನ ಕಾಲುಸಂಕದಲ್ಲಿ ಜೀವಭಯದಿಂದ ಓಡಾಡಬೇಕು. ಎಚ್ಚರ ತಪ್ಪಿದರೆ ಹಳ್ಳದಲ್ಲಿ ಚಿರನಿದ್ರೆ ಖಚಿತ. ಕಳೆದ ಕೆಲ ವರ್ಷಗಳಲ್ಲಿ ಭಾರೀ ಮಳೆಯಿಂದ ರಾಜ್ಯದ ವಿವಿಧೆಡೆ ಕಾಲು ಸಂಕದಲ್ಲಿ ಬಿದ್ದು ಕೊಚ್ಚಿಕೊಂಡ ಹೋದ ದಾರುಣ ಘಟನೆ ಮರೆಯುವಂತಿಲ್ಲ.

ಮಳೆಗಾಲದಲ್ಲಿ ಗ್ರಾಮಸ್ಥರ ಗೋಳು ಹೇಳ ತೀರದು. ಹಳ್ಳ ಉಕ್ಕಿ ಹರಿದಾಗ ಸಂಪರ್ಕ ಕಡಿತಗೊಂಡು ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ, ಅಗತ್ಯ ವಸ್ತು, ಕೆಲಸಗಳಿಗೆ ಹೋಗುವ ಗ್ರಾಮಸ್ಥರಿಗೆ ಆಗುವ ತೊಂದರೆ ಅನುಭವಿಸಿದವರಿಗೆ ಗೊತ್ತು. ಒಂದೆಡೆ ರಸ್ತೆ ಸಂಪರ್ಕ ಕಡಿತವಾದರೆ ಇನ್ನೊಂದೆಡೆ ನೆಟ್ ವರ್ಕ್ ಸಮಸ್ಯೆ. ತುರ್ತು ಸಂಚಾರಕ್ಕೂ ಪರದಾಟ, ತುರ್ತು ಕರೆ ಮಾಡಲು ಆಗದೆ ಪರದಾಡುವ ಸ್ಥಿತಿ. ಇನ್ನೂ ಅನಾರೋಗ್ಯ ಪೀಡಿತರ ಪರಿಸ್ಥಿತಿಯಂತು ಶೋಚನೀಯ.

ಈ ಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುವುದರಿಂದ 3-4 ತಿಂಗಳ ಕಾಲ ಹಳ್ಳ ನಿರಂತರವಾಗಿ ತುಂಬಿ ಹರಿಯುತ್ತಿರುತ್ತದೆ. ನೀರು ತುಂಬಿದಾಗಲೆಲ್ಲ ಕಾಲು ಸಂಕ ಮುಳುಗಡೆಯಾಗುತ್ತದೆ. ಗ್ರಾಮಸ್ಥರ ಬದುಕು, ಮಕ್ಕಳ ಶೈಕ್ಷಣಿಕ ಭವಿಷ್ಯ ಎಲ್ಲವೂ ಈ ಕಾಲು ಸಂಕದ ಮೇಲೆ ನಿಂತಿದೆ. ಆದರೂ ಕೂಡ ಜನಪ್ರತಿನಿಧಿಗಳು, ಸರ್ಕಾರ ಇತ್ತ ಗಮನ ಹರಿಸದಿರುವುದು ವಿಷಾದಕರ.

ಇದು ನಕ್ಸಲ್ ಪ್ರಭಾವಿತ ಪ್ರದೇಶವಾಗಿದ್ದರೂ ಇಲ್ಲಿಗೆ ಈ ಹಿಂದೆ ಸರ್ಕಾರದ ನಕ್ಸಲ್ ಪ್ಯಾಕೇಜ್ ಅಡಿ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಚುನಾವಣೆಗಳ ಸಂದರ್ಭಗಳಲ್ಲಿ ನೀಡಿದ ಭರವಸೆಗಳು ಹಾಗೆಯೇ ಉಳಿದಿವೆ. ಇನ್ನಾದರೂ ಸಂಬಂಧ ಮಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು, ತಾಲೂಕು ಆಡಳಿತ,ಜಿಲ್ಲಾ ಪಂಚಾಯಿತಿ ಗ್ರಾಮಸ್ಥರ ಬೇಡಿಕೆಯನ್ನು ಗಂಬೀರವಾಗಿ ಪರಿಗಣಿಸಿ ಶಾಶ್ವತ ಸೇತುವೆ ಅಥವಾ ತೂಗು ಸೇತುವೆ ನಿರ್ಮಿಸಲು ಮುಂದಾಗಬೇಕಿದೆ.

-- ಬಾಕ್ಸ್--

ತುರ್ತು ಸೇತುವೆ ನಿರ್ಮಿಸಿ.

ನಮಗೆ ಓಡಾಡಲು ಅಗತ್ಯ ಸೇತುವೆ ಬೇಕಿದೆ. ಪ್ರತೀ ವರ್ಷ ಕಾಲು ಸಂಕ ನಿರ್ಮಾಣ ಮಾಡಬೇಕು. ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುವುದರಿಂದ ಶಾಲಾ ಕಾಲೇಜು ಮಕ್ಕಳು ಸೇರಿದಂತೆ ಇದರ ಮೇಲೆ ಓಡಾಡುವವರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನಾದರೂ ಜನಪ್ರಕಿನಿಧಿಗಳು, ಸರ್ಕಾರ ಇಲ್ಲಿಗೊಂದು ಸೇತುವೆ ಅಥವಾ ತೂಗು ಸೇತುವೆ ನಿರ್ಮಿಸಿಕೊಡಬೇಕಿದೆ. ಇಲ್ಲಿ ಕೃಷಿ ಕುಟುಂಬದವರು ಹೆಚ್ಚಾಗಿ ಇದ್ದು ಜಮೀನುಗಳಿಗೂ ಓಡಾಡಲು ರಸ್ತೆ ಅಗತ್ಯವಿದೆ.

-ಸುರೇಶ್ ಆಚಾರ್, ಚಟ್ಕುಣಿ

--

ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ

ನಾವು ಹಲವು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಮಾಡುತ್ತಲೇ ಬಂದಿದ್ದೇವೆ. ನಮ್ಮ ಮನವಿಗಳಿಗೆ ಬೆಲೆಯೇ ಇಲ್ಲವಾಗಿದೆ. ಇನ್ನಾದರೂ ಇತ್ತಗಮನ ಹರಿಸಿ ಅನಾಹುತ ಸಂಭವಿಸುವ ಮೊದಲು ಇಲ್ಲಿಗೊಂದು ಸೇತುವೆ ನಿರ್ಮಿಸಿ.

-ಗೋಪಾಲ್, ಗ್ರಾಮಸ್ಥ

18 ಶ್ರೀ ಚಿತ್ರ 1-

ಶೃಂಗೇರಿ ಮರ್ಕಲ್ ಪಂಚಾಯಿತಿ ಕಿಗ್ಗಾ ಸಮೀಪ ಚಟ್ಕುಣಿ ಹಳ್ಳಕ್ಕೆ ಕಾಲುಸಂಕ ನಿರ್ಮಾಣ ಮಾಡಿರುವುದು.

18 ಶ್ರೀ ಚಿತ್ರ 2-

ಕಾಲುಸಂಕದ ಮೇಲೆರೈತನೊಬ್ಬನ ನಡಿಗೆ.

18 ಶ್ರೀ ಚಿತ್ರ 3-

ಸುರೇಶ್ ಆಚಾರ್ . ಗ್ರಾಮಸ್ಥ.