ಇಂದು ಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಭಾವನೆ ಮೂಡುತ್ತಿದೆ. ಇದಕ್ಕೆಲ್ಲ ಹೊರತು ಎನ್ನುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆಗೆ ಪೈಪೋಟಿ ನೀಡುವಂತಹ ಶಾಲೆ ಇದಾಗಿದ್ದು ಇಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ.

ಅಳ್ನಾವರ:

ಸ್ಪರ್ಧಾತ್ಮಕ ದಿನದಲ್ಲಿ ಪ್ರತಿಯೊಬ್ಬ ಮಗುವಿಗೂ ಗುಣಾತ್ಮಕ ಶಿಕ್ಷಣ ದೊರಕಿಸಿಕೊಡುವ ಸಾಮಾಜಿಕ ಹೊಣೆಗಾರಿಕೆ ಎಲ್ಲರದ್ದಾಗಿದೆ ಎಂದು ಮಿಲ್ಲತ್ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಮುಸ್ತಾಕಅಹ್ಮದ್‌ ತೇಗೂರ ಹೇಳಿದರು.

ಪಟ್ಟಣದ ಮೌಲಾನಾ ಆಜಾದ್‌ ಆಂಗ್ಲ ಮಾಧ್ಯಮ ಮಾದರಿ ಸರ್ಕಾರಿ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಭಾವನೆ ಮೂಡುತ್ತಿದೆ. ಇದಕ್ಕೆಲ್ಲ ಹೊರತು ಎನ್ನುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆಗೆ ಪೈಪೋಟಿ ನೀಡುವಂತಹ ಶಾಲೆ ಇದಾಗಿದ್ದು ಇಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ ಎಂದ ಅವರು, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಇದು ಬಹಳಷ್ಟು ಉಪಯುಕ್ತವಾಗಿದೆ ಎಂದರು.

ಮುಖಂಡ ಹಸನಅಲಿ ಶೇಖ ಮಾತನಾಡಿ, ಮೌಲಾನಾ ಆಜಾದ್‌ ಶಾಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಸ್ಥಳೀಯವಾಗಿ ಒದಗಿಸಲಾಗುವುದು. ಮಕ್ಕಳಿಗೆ ಯಾವುದೇ ತರಹದ ಅನಾನುಕೂಲ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದರು.

ಶಾಲೆ ಉದ್ಘಾಟಿಸಿದ ಜಿಲ್ಲಾ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಗೋಪಾಲ ಲಮಾಣಿ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೇ ಬೋಧನೆ ಪ್ರಾರಂಭಿಸಲಿದ್ದು ಮಕ್ಕಳಿಗೆ ದಾಖಲಾತಿ ಪಡೆದುಕೊಳ್ಳಬೇಕು. ಇಲ್ಲಿ ಬೋಧನೆ ಮತ್ತು ಶೈಕ್ಷಣಿಕ ಪರಿಕರಗಳೆಲ್ಲವೂ ಉಚಿತವಾಗಿ ಸಿಗಲಿವೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧೀನದಡಿ ಕಾರ್ಯನಿರ್ವಹಿಸುವ ಈ ಶಾಲೆಗೆ ಪ್ರವೇಶ ಪ್ರಾರಂಭವಾಗಿದ್ದು 6ನೇ ತರಗತಿಗೆ ದಾಖಲಾತಿ ಪಡೆದುಕೊಳ್ಳುವಂತೆ ಪಾಲಕರಿಗೆ ಮನವಿ ಮಾಡಿದರು.

ಶಾಲೆಯ ಪ್ರಭಾರಿ ಪ್ರಾಂಶುಪಾಲ ಸಂಗಮೇಶ ಎಂ.ಎಚ್., ನಿವೃತ್ತ ಅರಣ್ಯಾಧಿಕಾರಿ ಅಜ್ಜಪ್ಪ ಕುರುಬರ, ಬಿ.ಡಿ. ದಾಸ್ತಿಕೊಪ್ಪ, ಖಲೀಲಅಹ್ಮದ್‌ ಮುನವಳ್ಳಿ, ಮಕ್ತುಮ ಹುದಲಿ ಇದ್ದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರ ವಿತರಿಸಲಾಯಿತು.