ಮುಂದಿನ ಒಂದು ತಿಂಗಳು 10 ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನೊಳಗೊಂಡು ನಡೆಯಲಿರುವ ಕರಾವಳಿ ಉತ್ಸವವು ಜನರ ನಡುವೆ ಹೃದಯಗಳನ್ನು ಬೆಸೆಯುವ ವೇದಿಕೆಯಾಗಲಿ. ಈ ಮೂಲಕ ಸಹಬಾಳ್ವೆಯ ಸಂದೇಶಭಾವ ಜನರ ಮನಸ್ಸಿನಲ್ಲಿ ಬೆಳೆಯಲಿ ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಆಶಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮುಂದಿನ ಒಂದು ತಿಂಗಳು 10 ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನೊಳಗೊಂಡು ನಡೆಯಲಿರುವ ಕರಾವಳಿ ಉತ್ಸವವು ಜನರ ನಡುವೆ ಹೃದಯಗಳನ್ನು ಬೆಸೆಯುವ ವೇದಿಕೆಯಾಗಲಿ. ಈ ಮೂಲಕ ಸಹಬಾಳ್ವೆಯ ಸಂದೇಶಭಾವ ಜನರ ಮನಸ್ಸಿನಲ್ಲಿ ಬೆಳೆಯಲಿ ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಆಶಿಸಿದ್ದಾರೆ.

ದ.ಕ. ಜಿಲ್ಲಾಡಳಿತ ವತಿಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಶನಿವಾರ ಸಂಜೆ ಜ.31ರವರೆಗೆ ನಡೆಯಲಿರುವ ವೈಭವದ ಕರಾವಳಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾವೆಲ್ಲರೂ ಒಂದೇ ದೇಶದ ಮಕ್ಕಳು ಎನ್ನುವ ಭಾವನೆ ಎಲ್ಲರಲ್ಲೂ ಬೆಳೆಯಬೇಕು ಎಂಬ ಉದ್ದೇಶ ಕರಾವಳಿ ಉತ್ಸವದ ಹಿಂದಿದೆ. ಎಲ್ಲ ಬಗೆಯ ಕಾರ್ಯಕ್ರಮಗಳಲ್ಲಿ ಎಲ್ಲರೂ ಬೆರೆತು ಪಾಲ್ಗೊಂಡಾಗ ಸಹೋದರತ್ವ, ಪ್ರೀತಿ, ವಿಶ್ವಾಸ ಬೆಳೆಯುತ್ತದೆ. ಪ್ರಸ್ತುತ ದಕ್ಷಿಣ ಕನ್ನಡ ಶಾಂತಿಯಿಂದ ಇದ್ದು, ಇದೇ ವಾತಾವರಣ ಮುಂದುವರಿಯಲಿ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿ, ಕ್ರೀಡೆಗೆ ಸುದೀರ್ಘ ಇತಿಹಾಸ, ಹಿನ್ನೆಲೆ ಇದೆ. ಇವುಗಳನ್ನು ಉಳಿಸುವ ಆಸಕ್ತಿ ಜನರಿಗೂ ಇದ್ದಾಗ ಇಂಥ ಉತ್ಸವಗಳಿಗೆ ವಿಭಿನ್ನ ಕಳೆ ಬರುತ್ತದೆ. ಕರಾವಳಿ ಉತ್ಸವದ ಮೂಲಕ ಜ.31ರವರೆಗೂ ವಿವಿಧ ಕಾರ್ಯಕ್ರಮಗಳು ಹಬ್ಬದ ವಾತಾವರಣ ಸೃಷ್ಟಿಸಲಿವೆ. ಈ ಸಂದರ್ಭ ರಜಾ ಸಮಯವೂ ಹೆಚ್ಚಿರುವುದರಿಂದ ಸ್ಥಳೀಯರು ಮಾತ್ರವಲ್ಲ ಹೊರವೂರಿನವರೂ ಬರಲಿದ್ದಾರೆ. ಈ ವರ್ಷ ಹಿಂದಿಗಿಂತ ಉತ್ತಮವಾಗಿ ಉತ್ಸವ ಯೋಜಿಸಲು ಸರ್ವ ಸಿದ್ಧತೆ ನಡೆಸಿದ್ದೇವೆ. ಆಕರ್ಷಣೀಯವಾಗಿ, ಉತ್ಸಾಹ ಮೂಡಿಸುವಂತೆ ನಡೆಯಲಿದೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ಕರಾವಳಿ ಭಾಗವು ರಾಜ್ಯದ ಸಂಸ್ಕೃತಿಯ ಕೇಂದ್ರ ಸ್ಥಾನ. ಕಲೆಯನ್ನು ಬೆಳೆಸುತ್ತಿರುವ ಪ್ರದೇಶ ಇದು. ಇಲ್ಲಿ ಅನೇಕ ಪ್ರತಿಭೆಗಳಿದ್ದು, ಈ ಉತ್ಸವದ ಮೂಲಕ ಅವರಿಗೆ ಪ್ರೋತ್ಸಾಹ ನೀಡಲಾಗುತ್ತದೆ ಎಂದರು.

ಶಾಸಕರಾದ ವೇದವ್ಯಾಸ ಕಾಮತ್, ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ವಿವಿಧ ನಿಗಮ ಮಂಡಳಿ ಅಧ್ಯಕ್ಷರಾದ ಎಂ.ಎ. ಗಫೂರ್, ಲಾವಣ್ಯ ಬಲ್ಲಾಳ್, ಶಾಲೆಟ್ ಪಿಂಟೊ, ವಿಶ್ವಾಸ್ ಕುಮಾರ್ ದಾಸ್, ಮಮತಾ ಗಟ್ಟಿ, ಟಿ.ಎಂ. ಶಹೀದ್ ತೆಕ್ಕಿಲ್, ಸದಾನಂದ ಮಾವಜಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜಿಪಂ ಸಿಇಒ ನರ್ವಾಡೆ ವಿನಾಯಕ ಕಾರ್ಬಾರಿ, ಡಿಎಫ್‌ಒ ಆಂಟನಿ ಮರಿಯಪ್ಪ, ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಇದ್ದರು.

ಜ.3, 4ರಂದು ಸಿಎಂ ಕರೆಸಲು ಪ್ರಯತ್ನ

ಕರಾವಳಿ ಉತ್ಸವಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು 2 ಕೋಟಿ ರು. ಅನುದಾನವನ್ನು ರಾಜ್ಯ ಸರ್ಕಾರ ನೀಡಿದೆ. ಉತ್ಸವಕ್ಕೆ ಸ್ಥಳೀಯವಾಗಿ ಧನ ಸಂಗ್ರಹ ಕಡಿಮೆಯಾದಾಗ ಸಿಎಂ ಸಿದ್ದರಾಮಯ್ಯ ಬಹುದೊಡ್ಡ ಮೊತ್ತದ ಅನುದಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರಾವಳಿ ಉತ್ಸವಕ್ಕೆ ಒಂದು ದಿನ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಲಿದ್ದೇವೆ. ಜ.3 ಅಥವಾ 4ರಂದು ದೊಡ್ಡ ಕಾರ್ಯಕ್ರಮ ಇರುವ ದಿನ ಕರೆಸಲು ಪ್ರಯತ್ನ ನಡೆಸಲಾಗುವುದು ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.