ಎಸ್‌ಐಆರ್‌ ಮೂಲಕ ಪ್ರಜಾಪ್ರಭುತ್ವದ ಮತದಾನದ ಹಕ್ಕು ಕಸಿಯಲಾಗುತ್ತಿದ್ದು, ಬರೀ ಕಾಂಗ್ರೆಸ್‌ ಪಕ್ಷ ಮಾತ್ರವಲ್ಲದೇ ಜನಸಾಮಾನ್ಯರು ಈ ಬಗ್ಗೆ ಧ್ವನಿ ಎತ್ತಬೇಕು.

ಧಾರವಾಡ:

ಎಸ್‌ಐಆರ್‌ ಮೂಲಕ ಪ್ರಜಾಪ್ರಭುತ್ವದ ಮತದಾನದ ಹಕ್ಕು ಕಸಿಯಲಾಗುತ್ತಿದ್ದು, ಬರೀ ಕಾಂಗ್ರೆಸ್‌ ಪಕ್ಷ ಮಾತ್ರವಲ್ಲದೇ ಜನಸಾಮಾನ್ಯರು ಈ ಬಗ್ಗೆ ಧ್ವನಿ ಎತ್ತಬೇಕೆಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ವಜಾ ಹಾಗೂ ಎಸ್‌ಐಆರ್‌ ರದ್ದುಗೊಳಿಸಬೇಕೆಂದು ಆಗ್ರಹಿಸಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯು ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬರೀ ನಗರ ಮಾತ್ರವಲ್ಲದೇ ಗ್ರಾಮೀಣ ಪ್ರದೇಶದ ಬೂತ್‌ ಮಟ್ಟದಲ್ಲಿ ಬಡವರ, ದಲಿತರ, ಅಲ್ಪಸಂಖ್ಯಾತರ ಮತಗಳು ಕಾಣೆಯಾಗಿವೆ. ಇದರೊಂದಿಗೆ ಒಂದೇ ಬೂತ್‌ನಲ್ಲಿದ್ದ ಮತಗಳು ಪ್ರತ್ಯೇಕಗೊಂಡಿದ್ದು ಈ ಮೂಲಕ ಕಾಂಗ್ರೆಸ್‌ ಮತಗಳನ್ನು ಒಡೆದು ಪ್ರಜಾಪ್ರಭುತ್ವದ ಮತದಾನದ ಹಕ್ಕು ಕಸಿಯುವಂತೆ ಬಿಜೆಪಿ ಯೋಜನೆ ರೂಪಿಸಿದೆ. ಇಡೀ ದೇಶದಲ್ಲಿ ಒಟ್ಟಾರೆ 14 ಕೋಟಿ ಮತಗಳನ್ನು ರದ್ದುಗೊಳಿಸಿದ್ದು ಇನ್ನಾದರೂ ಜನರು ಎಚ್ಚೆತ್ತುಕೊಂಡು ಬೀದಿಗಳಿದು ಹೋರಾಟ ಮಾಡಬೇಕಿದೆ ಎಂದರು.

ವಿಧಾನಪರಿಷತ್‌ ಸದಸ್ಯ ಎಫ್‌.ಎಚ್‌. ಜಕ್ಕಪ್ಪನವರ ಮಾತನಾಡಿ, ಮತ ಕದ್ದು ಈ ಹಿಂದಿನ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರ ರಚನೆ ಮಾಡಿದ್ದಾರೆ ಎಂಬ ಸಂಶಯ ಶುರುವಾಗಿದೆ. ಸಂವಿಧಾನ ಬದ್ಧವಾಗಿ ಚುನಾವಣೆಗೆ ಹೋಗಲು ಬಿಜೆಪಿ ಸಿದ್ಧವಿಲ್ಲದೇ ಈ ರೀತಿ ಮತ ಕದಿಯುವ ಕಾರ್ಯಕ್ಕೆ ಕೈಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಿರಿಯ ಮುಖಂಡ ದೀಪಕ ಚಿಂಚೋರೆ ಮಾತನಾಡಿ, ದೇಶದಲ್ಲಿ ಮತಗಳನ್ನು ಹೇಗೆ ರದ್ದುಗೊಳಿಸಬೇಕು ಎಂದು ಬಿಜೆಪಿ ಮುಖಂಡರು ತರಬೇತಿ ಪಡೆದುಕೊಂಡಿದ್ದಾರೆ. ಮತ ಚೋರಿ ಬಗ್ಗೆ ರಾಹುಲ್‌ ಗಾಂಧಿ ಅವರು ಧ್ವನಿ ಎತ್ತಿದಾಗಲೇ ಈ ವಿಷಯ ಬಹಿರಂಗವಾಗಿದೆ. ಜನರ ಆಶೀರ್ವಾದ ಪಡೆದು ಗೆಲವು ಸಾಧಿಸುವ ಬದಲು ಅಡ್ಡದಾರಿ ಮೂಲಕ ಅಧಿಕಾರ ಪಡೆಯಬೇಕು ಎಂಬ ಬಿಜೆಪಿ ನೀತಿಯನ್ನು ಕಾಂಗ್ರೆಸ್‌ ವಿರೋಧಿಸುತ್ತದೆ. ಪ್ರಜಾಪ್ರಭುತ್ವ ಕೊಂದ ಬಿಜೆಪಿಯವರೇ ಈಗ ಪ್ರಜಾಪ್ರಭುತ್ವ ಉಳಿಸಿ ಎಂದು ಹೋರಾಡುತ್ತಿರುವುದು ವಿಪರ್ಯಾಸ. ಬಿಜೆಪಿಯು ಆರ್‌ಎಸ್‌ಎಸ್‌ ಮಾತು ಕೇಳಿ ದೇಶದಲ್ಲಿ ಅರಾಜತೆ ಸೃಷ್ಟಿಸುತ್ತಿದ್ದು, ಇದನ್ನು ವಿರೋಧಿಸಿ ನಾವು ಆರ್‌ಎಸ್‌ಎಸ್‌ ಕಚೇರಿ ವರೆಗೆ ಪಾದಯಾತ್ರೆ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸದಾನಂದ ಡಂಗನವರ, ಮುಖಂಡರಾದ ಅರವಿಂದ ಏಗನಗೌಡರ, ಐ.ಜಿ. ಸನದಿ, ಹನುಮಂತ ಕೊರವರ, ಈಶ್ವರ ಶಿವಳ್ಳಿ, ಶರೀಫ್‌ ಗರಗದ, ವಸಂತ ಅರ್ಕಾಚಾರ, ಆನಂದ ಸಿಂಗನಾಥ, ಮಯೂರ ಮೋರೆ, ರೇಣುಕಾ ಕಳ್ಳಿಮನಿ, ಮೆಹಬೂಬ ಪಠಾಣ, ರಾಜು ಕಮತಿ, ಮನೋಜ ಕರ್ಜಗಿ, ಶಂಭು ಸಾಲಿಮನಿ, ನಾಗರಾಜ ಗುರಿಕಾರ, ಕವಿತಾ ಕಬ್ಬೇರ, ದೀಪಾ ನೀರಲಕಟ್ಟಿ, ಭೀಮಪ್ಪ ಕಸಾಯಿ, ಪ್ರಕಾಶ ಹಳಿಯಾಳ ಇದ್ದರು. ಪ್ರತಿಭಟನೆಗೂ ಮುಂಚೆ ಕಲಾಭವನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.