ಸಮುದಾಯ ಭವನ ಸಮಾಜಮುಖಿ ಕಾರ್ಯಕ್ಕೆ ಬಳಕೆಯಾಗಲಿ: ಮಹಾಂತೇಶ ಕವಟಗಿಮಠ

| Published : Aug 27 2024, 01:40 AM IST

ಸಮುದಾಯ ಭವನ ಸಮಾಜಮುಖಿ ಕಾರ್ಯಕ್ಕೆ ಬಳಕೆಯಾಗಲಿ: ಮಹಾಂತೇಶ ಕವಟಗಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕೋಡಿ ಪಟ್ಟಣದ ಮರಡಿ ಬಸವೇಶ್ವರ ದೇವಸ್ಥಾನದ ಸಮುದಾಯ ಭವನ ಉದ್ಘಾಟನೆ ಮಹೋತ್ಸವ ಹಾಗೂ ವಾಸ್ತುಶಾಂತಿ ಸಮಾರಂಭಕ್ಕೆ ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಮರಡಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ₹1 ಕೋಟಿ ಅನುದಾನದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನವನ್ನು ಸಮಾಜ ಬಾಂಧವರು ಸದುಪಯೋಗಪಡಿಸಿಕೊಂಡು ಇಲ್ಲಿ ನಿರಂತರವಾಗಿ ಸಮಾಜಮುಖಿ ಕೆಲಸ ನಡೆಯಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ಪಟ್ಟಣದ ಮರಡಿ ಬಸವೇಶ್ವರ ದೇವಸ್ಥಾನದ ಸಮುದಾಯ ಭವನ ಉದ್ಘಾಟನೆ ಮಹೋತ್ಸವ ಹಾಗೂ ವಾಸ್ತುಶಾಂತಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮನುಷ್ಯನ ಭಾವನೆಗಳು ಬದಲಾಗಿವೆ. ಹೀಗಾಗಿ ಯುವ ಜನಾಂಗ ಜನ್ಮ ನೀಡಿದ ತಂದೆ,ತಾಯಿಗಳನ್ನು ಹಾಗೂ ಸಂಸ್ಕಾರವನ್ನು ಮರೆಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮರಡಿ ಬಸವೇಶ್ವರ ದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದೆ. ಕಾಯಕ ಆಧಾರದ ಮೇಲೆ ಜೀವಿಸುವ ಮಾಳಿ, ಸುಣಗಾರ, ಮೆದಾರ, ಹಾಲುಮತ ಸಮಾಜ ವಾಸಿಸುವ ಈ ಭಾಗದಲ್ಲಿ ಸಾಮಾನ್ಯ ಬಡವರು ಸಮುದಾಯ ಭವನ ನಿರ್ಮಾಣ ಆಗಬೇಕೆಂಬ ಬಹುದಿನಗಳ ಬೇಡಿಕೆಯಾಗಿತ್ತು. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರ ಆಡಳಿತಾವಧಿಯಲ್ಲಿ ₹1 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಸಮುದಾಯಭವನ ಸಭೆ, ಸಮಾರಂಭಕ್ಕೆ ಸೀಮಿತವಾಗದೆ ಸಮಾಜಮುಖಿಯಾಗಿ ಉಚಿತ ಆರೋಗ್ಯ ಚಿಕಿತ್ಸೆ ಶಿಬಿರ ಸೇರಿದಂತೆ ಸಮಾಜಮುಖಿ ಕೆಲಸ ಮಾಡಬೇಕೆಂದರು.

ಸಾನ್ನಿಧ್ಯ ವಹಿಸಿದ್ದ ಸಂಪಾದನಾ ಚರಮೂರ್ತಿಮಠದ ಶ್ರೀಸಂಪಾದನಾ ಸ್ವಾಮೀಜಿ ಮಾತನಾಡಿ, ಜನರು ಆರ್ಥಿಕವಾಗಿ ಸಬಲರಾಗುವುದಷ್ಟೇ ಮುಖ್ಯವಲ್ಲ ಸಾಂಸ್ಕೃತಿವಾಗಿ, ಧಾರ್ಮಿಕವಾಗಿ, ಮಾನಸಿಕವಾಗಿ ಸದೃಢವಾದಾಗ ಮಾತ್ರ ನಮ್ಮ ಸಮಾಜ ಗಟ್ಟಿಯಾಗಲು ಸಾಧ್ಯ. ಈ ಸಮುದಾಯ ಭವನ ನಿರ್ಮಿಸಿರುವುದು ಅರ್ಥಪೂರ್ಣವಾಗಿದೆ ಎಂದರು.

ಸಮಾರಂಭದಲ್ಲಿ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಉಪಾಧ್ಯಕ್ಷ ಜಗದೀಶ ಕವಟಗಿಮಠ, ಅನೀಲ ಮಾನೆ, ಸಿದ್ದಪ್ಪ ಡಂಗೇರ, ಸುಭಾಸ ಕವಲಾಪೂರೆ, ಸುರೇಶ ಕಾಳಿಂಗೆ, ಸದಾಶಿವ ಮಾಳಿ, ಟ್ರಸ್ಟ್ ಕಮೀಟಿ ಅಧ್ಯಕ್ಷ ಪ್ರಶಾಂತ ಕಾಳಿಂಗೆ, ಉಪಾಧ್ಯಕ್ಷ ನಾಗರಾಜ ಮೇದಾರ, ಕಾರ್ಯದರ್ಶಿ ರಾವಸಾಬ ಮಾಳಿ, ರಾಜಶೇಖರ ಚಿತ್ತವಾಡಗಿ, ಸಂದೀಪ ಮಾಳಿ,ಚಂದ್ರಕಾಂತ ಬುರುಡ, ಶಿವಾನಂದ ಖಾನಾಯಿ, ದೀಪಕ ಸಮೃತಶೆಟ್ಟಿ, ಕೇದಾರಿ ಮಾಳಿ, ಸಾಗರ ಕಾಳಿಂಗೆ, ವಿನಾಯಕ ಕೃಷ್ಣಾ ಮಾಳಿ ಉಪಸ್ಥಿತರಿದ್ದರು. ಸಂದೀಪ ಮಾಳಿ ಸ್ವಾಗತಿಸಿದರು.ರಾವಸಾಹೇಬ ಮಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಲ್ಮೇಶ ಕೆ ನಿರೂಪಿಸಿ ವಂದಿಸಿದರು.