ಸಾರಾಂಶ
‘ಸಹಕಾರ ಸಂಸ್ಥೆಗಳಲ್ಲಿ ಅನ್ವೇಷಣೆ, ತಾಂತ್ರಿಕತೆ ಮತ್ತು ಉತ್ತಮ ಆಡಳಿತ’ ವಿಷಯದಲ್ಲಿ ಶ್ರೀಷ ಕೆ.ಎಂ. ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಬೆಂಗಳೂರು, ಕೋಲಾರ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲು ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಬೇಡಿಕೆಯಷ್ಟು ಹಾಲು ಸಂಗ್ರಹಣೆ ಆಗಬೇಕಾದರೆ ಹೈನುಗಾರರಿಗೆ ಉತ್ಪಾದನಾ ವೆಚ್ಚ ಹೆಚ್ಚು ಸಿಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಲಿಮಿಟೆಡ್, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹಾಗೂ ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕುಲಶೇಖರ ಹಾಲು ಒಕ್ಕೂಟದ ಆವರಣದಲ್ಲಿ ಶುಕ್ರವಾರ 71ನೇ ಅ.ಭಾ. ಸಹಕಾರ ಸಪ್ತಾಹ 2024 ಉದ್ಘಾಟಿಸಿ ಅವರು ಮಾತನಾಡಿದರು.ದಕ್ಷಿಣ ಕನ್ನಡ ಬ್ಯಾಂಕಿಂಗ್ ಮಾತ್ರವಲ್ಲದೆ ಸಹಕಾರ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ. ಮಹಿಳೆಯರು ಕೂಡ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ರಾಜ್ಯದಲ್ಲೇ ಗುರುತಿಸಿಕೊಂಡಿದೆ ಎಂದರು.ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಕೆ.ಪಿ. ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಕ್ಷೇತ್ರದಲ್ಲಿ ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗಬೇಕಾದ ಅವಶ್ಯಕತೆ ಇದೆ. ಹೈನುಗಾರಿಕೆಯಲ್ಲಿ ತಾಂತ್ರಿಕತೆಯನ್ನು ಬಳಸಿಕೊಂಡಾಗ ಯಶಸ್ಸು ಗಳಿಸುವ ಜತೆಗೆ ಭಾರತದ ಆರ್ಥಿಕಾಭಿವೃದ್ಧಿಗೆ ಕೊಡುಗೆ ನೀಡಿದಂತಾಗುತ್ತದೆ ಎಂದರು.ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಸಹಕಾರಿ ಧ್ವಜಾರೋಹಣಗೈದರು. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ, ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ರವಿರಾಜ್ ಹೆಗ್ಡೆ, ಪ್ರಕಾಶ್ಚಂದ್ರ ಶೆಟ್ಟಿ, ಪದ್ಮನಾಭ ಶೆಟ್ಟಿ ಅರ್ಕಜೆ, ಬಿ.ಸುಧಾಕರ ರೈ, ಸುಧಾಕರ ಶೆಟ್ಟಿ, ಸವಿತಾ ಎನ್. ಶೆಟ್ಟಿ, ಸ್ಮಿತಾ ಆರ್.ಶೆಟ್ಟಿ, ಟಿ.ಸದಾಶಿವ ಶೆಟ್ಟಿ, ಚೇಳ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.‘ಸಹಕಾರ ಸಂಸ್ಥೆಗಳಲ್ಲಿ ಅನ್ವೇಷಣೆ, ತಾಂತ್ರಿಕತೆ ಮತ್ತು ಉತ್ತಮ ಆಡಳಿತ’ ವಿಷಯದಲ್ಲಿ ಶ್ರೀಷ ಕೆ.ಎಂ. ಮಾಹಿತಿ ನೀಡಿದರು. ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ. ಸ್ವಾಗತಿಸಿದರು. ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ. ಹಿರೇಮಠ ವಂದಿಸಿದರು. ಜಾನೆಟ್ ನಿರೂಪಿಸಿದರು.