ಸಾರಾಂಶ
ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕು
ಲಕ್ಷ್ಮೇಶ್ವರ: ವಿದ್ಯಾರ್ಥಿಗಳು ತಾವು ಪಡೆದ ಪದವಿಗಳಿಂದ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವುದು ಅಗತ್ಯವಾಗಿದೆ. ದೇಶ ಕಟ್ಟುವಲ್ಲಿ ವಿದ್ಯಾರ್ಥಿಗಳು ತಮ್ಮ ಪಾಲಿನ ಕೊಡುಗೆ ನೀಡಬೇಕು ಎಂದು ಬಿಸಿಎನ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪ್ರಶಾಂತ ನೆಲವಿಗಿ ಹೇಳಿದರು.
ಸೋಮವಾರ ಪಟ್ಟಣದ ಬಿಸಿಎನ್ ಪದವಿ ಕಾಲೇಜಿನ ಸಭಾಂಗಣದಲ್ಲಿ ವಿಜ್ಞಾನ,ವಾಣಿಜ್ಯ ಪದವಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಉನ್ನತ ಶಿಕ್ಷಣ ಅಥವಾ ಉದ್ಯೋಗದೊಂದಿಗೆ ತಮ್ಮ ಜೀವನದಲ್ಲಿ ಯಶಸ್ಸು ಪಡೆಯಲು ತಮಗೆ ದೊರೆತ ಅವಕಾಶ ಸಮರ್ಥವಾಗಿ ಬಳಸಿಕೊಂಡು ಉತ್ತಮ ಜೀವನ ಮೌಲ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕು. ತನ್ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಬಾಳೇಶ್ವರಮಠ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಸಮಗ್ರ ಚಟುವಟಿಕೆ ಹಾಗೂ ಅಭ್ಯಾಸದತ್ತ ಗಮನಹರಿಸಿ ಮುಂದಿನ ಭವಿಷ್ಯ ಉಜ್ವಲವನ್ನಾಗಿ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕು ನಡೆಸುವಂತಾಗಲಿ, ಜೀವನದಲ್ಲಿ ಯಶಸ್ಸು ಗಳಿಸಲು ನಿರಂತರ ಪ್ರಯತ್ನ ಹಾಗೂ ಗುರಿ ಬಹಳ ಮುಖ್ಯ ಎಂದು ಹೇಳಿದರು.ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳಾದ ಭವ್ಯ, ಕಾವ್ಯ, ದರ್ಶನ ತಮ್ಮ ಅನುಭವ ಹಂಚಿಕೊಂಡರು. ಈ ವೇಳೆ ಪ್ರಾಚಾರ್ಯ ಡಿ.ಎಸ್. ಪ್ಯಾಟಿ. ಪತ್ರಕರ್ತ ದಿಗಂಬರ ಪೂಜಾರ, ಉಪನ್ಯಾಸಕ ಖುಷಾ ಅರಳಿ, ಶಶಾಂಕ, ಮೇಘಾ ವಿ.,ಸುಧಾರಾಣಿ, ವಿದ್ಯಾ, ರಮೇಶ ಗಿಣಿ ಇದ್ದರು.
ಉಪನ್ಯಾಸಕ ಮಂಜುನಾಥ ಬಂಡಿವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾರದಾ ಮಾಂಡ್ರ ಸ್ವಾಗತಿಸಿದರು, ಆಶಿಯಾ ಕಮಡೊಳ್ಳಿ ವಂದಿಸಿದರು, ಚೈತ್ರಾ ಮುಳಗುಂದ ನಿರೂಪಿಸಿದರು.