ಸರ್ಕಾರ ನಿಗದಿ ಪಡಿಸಿದ ದರ ಪ್ರತಿ ಟನ್ ಕಬ್ಬಿಗೆ ₹3300 ನೀಡುವುದಾಗಿ ಈಐಡಿ ಕಾಖಾನೆ ಘೋಷಿಸಲಿ

| Published : Nov 16 2025, 02:45 AM IST

ಸರ್ಕಾರ ನಿಗದಿ ಪಡಿಸಿದ ದರ ಪ್ರತಿ ಟನ್ ಕಬ್ಬಿಗೆ ₹3300 ನೀಡುವುದಾಗಿ ಈಐಡಿ ಕಾಖಾನೆ ಘೋಷಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ಹಳಿಯಾಳದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಸಹ ಪ್ರತಿ ಟನ್ ಕಬ್ಬಿಗೆ ₹3300 ನೀಡುವುದಾಗಿ ಅಧಿಕೃತವಾಗಿ ಘೋಷಿಸಬೇಕು.

ಸುದ್ದಿಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಒಕ್ಕೂರಲಿನ ಆಗ್ರಹಕನ್ನಡಪ್ರಭ ವಾರ್ತೆ ಹಳಿಯಾಳ

ರಾಜ್ಯ ಸರ್ಕಾರ ಶೇ.11.25 ಇಳುವರಿ ಆಧರಿಸಿ ಪ್ರತಿ ಟನ್ ಕಬ್ಬಿಗೆ ₹3300 ದರ ಘೋಷಿಸಿದೆ. ರಾಜ್ಯದಲ್ಲಿನ ಬಹುತೇಕ ಸಕ್ಕರೆ ಕಾರ್ಖಾನೆಗಳು ಸರ್ಕಾರ ಘೋಷಿಸಿದ ದರವನ್ನು ನೀಡುವುದಾಗಿ ಹೇಳಿವೆ. ಹಳಿಯಾಳದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಸಹ ಪ್ರತಿ ಟನ್ ಕಬ್ಬಿಗೆ ₹3300 ನೀಡುವುದಾಗಿ ಅಧಿಕೃತವಾಗಿ ಘೋಷಿಸಬೇಕು ಎಂದು ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಾಗೇಂದ್ರ ಜಿವೋಜಿ ಆಗ್ರಹಿಸಿದ್ದಾರೆ.

ಶನಿವಾರ ಪಟ್ಟಣದ ಮರಾಠ ಭವನದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘ ತಾಲೂಕು ಘಟಕ ಹಾಗೂ ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿಯವರು ಜಂಟೀಯಾಗಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಕರಾರು ಪತ್ರವೇಕೆ?:

ಹಳಿಯಾಳದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹3200 ದರ ನಿಗದಿಯಾಗಿತ್ತು. ತದನಂತರ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹3300 ದರ ಘೋಷಿಸಿತು. ಆದರೆ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಗ್ರಾಮಾಂತರ ಭಾಗದಲ್ಲಿ ಪ್ರತಿ ಟನ್ ಕಬ್ಬಿಗೆ ₹3200 ದರ ಪಡೆಯಲು ಒಪ್ಪಿಗೆ ಸೂಚಿಸುವ ಕರಾರು ಪತ್ರಗಳನ್ನು ರೈತರಿಂದ ಒತ್ತಾಯಪೂರ್ವಕವಾಗಿ ಬರೆಯಿಸಿಕೊಳ್ಳುತ್ತಿದ್ದು, ಇದರಿಂದ ಕಬ್ಬಿನ ದರದ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಅದಕ್ಕಾಗಿ ಕಾರ್ಖಾನೆಯವರು ಈ ಒಪ್ಪಂದ ಪತ್ರ ಬರೆಯಿಸಿಕೊಳ್ಳುವುದನ್ನು ನಿಲ್ಲಿಸಿ ಗೊಂದಲಗಳಿಗೆ ವಿರಾಮ ಹಾಕಬೇಕು ಎಂದು ಜಿವೋಜಿ ಆಗ್ರಹಿಸಿದರು.

ರಾಜ್ಯ ಸರ್ಕಾರ ಘೋಷಿಸಿದ ಕಬ್ಬಿನ ದರವು ರಾಜ್ಯವ್ಯಾಪ್ಯಿ ಅನ್ವಯಿಸುತ್ತಿದೆ. ಹೀಗಿರುವಾಗ ಹಳಿಯಾಳದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಗೊಳಪಡುವ ಮೀಸಲಾತಿ ಕ್ಷೇತ್ರಗಳ ಕಬ್ಬು ಬೆಳೆಗಾರರಿಗೂ ಈ ದರದ ಪ್ರಯೋಜನವು ದೊರೆಯಲಿದ್ದು, ಅದಕ್ಕಾಗಿ ಯಾರೂ ಆತಂಕಕ್ಕೊಳಪಡಬಾರದೆಂದರು.ಕಾರ್ಖಾನೆಯಿಂದಲೇ ಲಗಾಣಿ ಗೊಂದಲ:

ಲಗಾಣಿ ಗೊಂದಲ ಕಾರ್ಖಾನೆಯವರ ಸೃಷ್ಟಿಯಾಗಿದೆ ಎಂದು ಜಿವೋಜಿ ಆರೋಪಿಸಿದರು. ಕಟಾವು ಮಾಡಲು ಬಂದಿಳಿದಿರುವ ಕಟಾವು ತಾಂಡಾಗಳಿಗೆ ಸರ್ಕಾರ ನಿಗದಿಪಡಿಸಿದ ಪ್ರಮಾಣದಲ್ಲಿ ಕಟಾವು ದರವನ್ನು ಈಐಡಿ ಕಾರ್ಖಾನೆಯವರು ನೀಡುತ್ತಿಲ್ಲ ಎಂದು ಕಟಾವು ತಾಂಡಾದವರು ನಮ್ಮ ಬಳಿ ಅಳಲು ತೊಡಿಕೊಳ್ಳುತ್ತಿದ್ದಾರೆ ಎಂದು ಜಿವೋಜಿ ಹೇಳಿದರು. ಕಾರ್ಖಾನೆಯವರು ನೀಡುವ ಕಟಾವು ಹಣ ಸಾಕಾಗದೇ ಗ್ಯಾಂಗಿನವರು ರೈತರ ಬಳಿ ಹೆಚ್ಚಿನ ಹಣದ ಬೇಡಿಕೆ ಇಡುತ್ತಿದ್ದಾರೆ. ಇದರಿಂದ ತಾಲೂಕಿನೆಲ್ಲೆಡೆ ಕಬ್ಬು ಕಟಾವು ಗ್ಯಾಂಗಿನಿಂದ ಲಗಾಣಿ ಹೆಸರಿನಲ್ಲಿ ಅತ್ಯಧಿಕ ಶೋಷಣೆ ನಡೆದಿದೆ. ಹೀಗಾದರೇ ವರ್ಷವಿಡಿ ಬೇಸಾಯ ಮಾಡಿದ ರೈತರಿಗೆ ಅವರ ಶ್ರಮಕ್ಕೆ ತಕ್ಕಂತೆ ಆದಾಯ ಬರುವದು ಕಷ್ಟಕರವಾಗಿದೆ ಎಂದು ಜಿವೋಜಿ ಆತಂಕ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕಾರ್ಖಾನೆಯವರು ನೀಡಿದ ವಾಗ್ದಾಣದಂತೆ ಲಗಾಣಿ ನಿಯಂತ್ರಣ ಮಾಡಬೇಕು ಎಂದು ಆಗ್ರಹಿಸಿದರು. ಕಾರ್ಖಾನೆಯ ಒಳಗಡೆಯಿರುವ ತೂಕದ ಯಂತ್ರವನ್ನು ನವೀಕರಿಸಬೇಕು. ಕಬ್ಬು ಬೆಳೆಗಾರರ ನಿಯೋಗವು ಇತ್ತೀಚೆಗೆ ಕಾರ್ಖಾನೆಗೆ ಭೇಟಿ ನೀಡಿ ಸಕ್ಕರೆ ಇಳುವರಿ ಪ್ರಮಾಣವನ್ನು ಅಳೆಯುವ ಪ್ರಯೋಗಾಲಯದ ಪರಿಶೀಲನೆ ನಡೆಸಿದಾಗ ಪ್ರಯೋಗಾಲಯ ದೋಷಪೂರಿತವಾಗಿದ್ದು ಕಂಡು ಬಂದಿದ್ದು, ಇದರ ನವೀಕರಣ ಅವಶ್ಯಕವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ಅಶೋಕ ಮೇಟಿ, ಪ್ರಮುಖರಾದ ಭರತೇಶ ಪಾಟೀಲ, ಸಾತೇರಿ ಗೋಡೇಮನಿ, ರಾಮದಾಸ ಬೆಳಗಾಂವಕರ, ನಕುಲ ಇದ್ದರು.ಈಗಲಾದರೂ ರಹಸ್ಯ ಬಹಿರಂಗಪಡಿಸಿ

ಕಾಳಿನದಿ ನೀರಾವರಿ ಯೋಜನೆ ಸೇರಿದಂತೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಯಾವಾಗ ಕಾರ್ಯಾರಂಭಿಸುತ್ತವೆ ಎಂಬ ರಹಸ್ಯವನ್ನು ಶಾಸಕರು ಬಹಿರಂಗಪಡಿಸಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರ ಕಾಜಗಾರ ಆಗ್ರಹಿಸಿದರು. ಕಳೆದ ಏಳೆಂಟು ವರ್ಷಗಳಿಂದ ಈ ಯೋಜನೆಗಳ ಕಾಮಗಾರಿಯು ಅತ್ಯಂತ ನಿಧಾನವಾಗಿ ನಡೆಯುತ್ತಿದ್ದೆ, ಈ ಯೋಜನೆಗಳ ಪ್ರಗತಿಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದರು. ತಾಲೂಕಿನೆಲ್ಲೆಡೆ ರಸ್ತೆಗಳು ಹದಗೆಟ್ಟು ಹೋಗಿದ್ದು, ಬೇಗನೆ ರಸ್ತೆ ಸುಧಾರಣೆ ಕಾಮಗಾರಿಯನ್ನು ಆರಂಭಿಸಬೇಕು ಎಂದರು.