ಚುನಾವಣಾ ಆಯೋಗ ಮೋದಿ ಮೇಲೆ ಕ್ರಮ ಜರುಗಿಸಲಿ -ಹರಿಪ್ರಸಾದ್‌

| Published : Apr 23 2024, 12:49 AM IST

ಸಾರಾಂಶ

ಚುನಾವಣಾ ಆಯೋಗ ನಿಷ್ಪಕ್ಷಪಾತ ಚುನಾವಣೆ ಮಾಡುವುದಾದರೆ, ತೆರಿಗೆ ಹಣ ಯಾವುದೋ ಒಂದು ಸಮುದಾಯಕ್ಕೆ ಹೋಗುತ್ತದೆ ಎಂದು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಧಾನಿ ಮೋದಿ ನೀಡಿದ ಹೇಳಿಕೆ ಬಗ್ಗೆ ಮೋದಿ ಅವರ ಮೇಲೆ ಕ್ರಮ ಜರುಗಿಸಲಿ.

ಹಾವೇರಿ: ಚುನಾವಣಾ ಆಯೋಗ ನಿಷ್ಪಕ್ಷಪಾತ ಚುನಾವಣೆ ಮಾಡುವುದಾದರೆ, ತೆರಿಗೆ ಹಣ ಯಾವುದೋ ಒಂದು ಸಮುದಾಯಕ್ಕೆ ಹೋಗುತ್ತದೆ ಎಂದು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಧಾನಿ ಮೋದಿ ನೀಡಿದ ಹೇಳಿಕೆ ಬಗ್ಗೆ ಮೋದಿ ಅವರ ಮೇಲೆ ಕ್ರಮ ಜರುಗಿಸಲಿ. ಪ್ರಚೋದನಕಾರಿಯಾಗಿ ಮಾತಾಡಿದರೆ ಪೊಲೀಸರೂ ಸ್ವಯಂಪ್ರೇರಿತರಾಗಿ ಎಫ್‌ಐಆರ್‌ ದಾಖಲಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ನರೇಂದ್ರ ಮೋದಿ ಹಾಗೆ ಮಾತಾಡೋಕೆ ಯಾವುದೋ ಪಂಚಾಯಿತಿ ಸದಸ್ಯ ಅಲ್ಲ, ಅವರು ಪ್ರಧಾನ ಮಂತ್ರಿ. ಎಲ್ಲ ನಾಗರಿಕರ ಜೀವ ಕಾಪಾಡುವ ಮೂಲಭೂತ ಜವಾಬ್ದಾರಿ ಅವರ ಮೇಲಿದೆ. ತೆರಿಗೆ ಕಟ್ಟಬೇಕಾದರೆ ಒಂದೇ ಧರ್ಮ, ಭಾಷೆಯವರು ಕಟ್ಟಿರುವುದಿಲ್ಲ. ಸರ್ವರಿಗೂ ಸಮಪಾಲು, ಸಮಬಾಳು ಆಶಯದ ಮೇಲೆ ತೆರಿಗೆ ಹಣ ಹಂಚಬೇಕು ಎಂದರು.

ಬಿಜೆಪಿ ಮೊಸಳೆ ಕಣ್ಣೀರು: ಬಿಜೆಪಿಯವರು ಜಾಹೀರಾತಿನಲ್ಲಿ ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಬಿಹಾರ್‌ನಲ್ಲಿ ಮೀಸಲಾತಿ ಬಗ್ಗೆ ಮಾತಾಡಿದ್ದಕ್ಕೆ ಸೋತರು. ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಮಾಡಬೇಕು ಅಂದಿದ್ದರು. ಸಂವಿಧಾನದಲ್ಲಿರುವ ಸಮಾನ ಅವಕಾಶ ಹಕ್ಕಿಗೆ ವಿರುದ್ಧ ಇರೋರು ಬಿಜೆಪಿಯವರು ಎಂದು ವಾಗ್ದಾಳಿ ನಡೆಸಿದರು.

ನಕ್ಸಲ್‌ ದಾಳಿ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ಹಿಂದೆ ನಡೆದ ನಕ್ಸಲ್‌ ದಾಳಿಯಲ್ಲಿ 27 ಕಾಂಗ್ರೆಸ್‌ ನಾಯಕರನ್ನು ಕಳೆದುಕೊಂಡಿದ್ದೀವಿ. ನಕ್ಸಲ್‌ ಹಾಗೂ ಬಿಜೆಪಿ ಸೂತ್ರಧಾರರ ನಡುವೆ ಒಳ್ಳೆ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿದ್ದಾರೆ. ಮೋದಿ ಅವರು ಅಮೃತ ಕಾಲ ಎಂದು ದೊಡ್ಡದಾಗಿ ಭಾಷಣ ಮಾಡುತ್ತಾರೆ. 10 ವರ್ಷ ಏನು ಮಾಡಿದ್ದಾರೆ ಎಂಬುದನ್ನು ಜಾಹೀರಾತಿನಲ್ಲಿ ಹೇಳಿಲ್ಲ. ಸಾಲ ಯಾರಿಗಾಗಿ ಮಾಡಿದ್ದಾರೆ ಎಂದು ಪ್ರಣಾಳಿಕೆಯಲ್ಲಿ ಹೇಳಿಲ್ಲ ಎಂದು ಟೀಕಿಸಿದರು.

ಬರೀ ಪಾಕಿಸ್ತಾನ , ಹಿಂದೂ– ಮುಸ್ಲಿಂ, ಪಾಳು ಬಿದ್ದಿರುವ ದೇವಸ್ಥಾನ, ಮಸೀದಿ ಮೇಲೆ ರಾಜಕಾರಣ ಮಾಡ್ತಾ ಇದ್ದಾರೆ. ಬದುಕೋದಕ್ಕೆ ಏನು ಮಾಡಬೇಕು ಅದನ್ನು ಮಾಡಿಲ್ಲ. ಕೇಂದ್ರದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ, ಅದನ್ನು ಭರ್ತಿ ಮಾಡಿಲ್ಲ. ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣದಲ್ಲಿ ಹೆಣದ ಮೇಲೆ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದು, ಇದರಲ್ಲಿ ಕುಖ್ಯಾತಿ ಪಡೆದಿದ್ದಾರೆ. ಯಾರೋ ಒಬ್ಬ ಹತ್ಯೆ ಮಾಡಿದ್ದಕ್ಕೆ ಇಡೀ ಸಮುದಾಯ ದೂಷಿಸೋದು ಸರಿಯಲ್ಲ. ಆಪರೇಷನ್ ಕಮಲ ಮಾಡೋದ್ರಲ್ಲಿ ಇಡೀ ಪ್ರಪಂಚದಲ್ಲಿ ಇವರಷ್ಟು ಕುಖ್ಯಾತಿ ಪಡೆದವರಿಲ್ಲ. ಮುಂದೆಯೂ ಆಪರೇಶನ್‌ ಕಮಲ ಮಾಡ್ತಾರೆ, ಆದರೆ ಅದು ಯಶಸ್ವಿ ಆಗಲ್ಲ ಎಂದು ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಬ್ಲಾಕ್‌ ಅಧ್ಯಕ್ಷ ಎಂ.ಎಂ. ಮೈದೂರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ಇತರರು ಇದ್ದರು.