ರೈತರಿಗೆ ಸ್ಪಂದಿಸದ ರಾಜಕೀಯ ನಾಯಕರಿಗೆ ರೈತರು ಛೀಮಾರಿ ಹಾಕಲಿ

| Published : Mar 29 2024, 12:47 AM IST

ರೈತರಿಗೆ ಸ್ಪಂದಿಸದ ರಾಜಕೀಯ ನಾಯಕರಿಗೆ ರೈತರು ಛೀಮಾರಿ ಹಾಕಲಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಜಾನುವಾರುಗಳಿಗೆ ಮೇವು-ನೀರಿಲ್ಲ. ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಕೊಳವೆಬಾವಿಗಳ ಅಂತರ್ಜಲ ಕುಸಿದಿದೆ.

ಬಳ್ಳಾರಿ: ಬರಗಾಲದ ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸದ ರಾಜಕೀಯ ಪಕ್ಷಗಳ ಮುಖಂಡರು ಚುನಾವಣೆ ಮತ ಪ್ರಚಾರಕ್ಕೆಂದು ಹಳ್ಳಿಗಳಿಗೆ ಬಂದಾಗ ರೈತರು ಛೀಮಾರಿ ಹಾಕಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಜಾನುವಾರುಗಳಿಗೆ ಮೇವು-ನೀರಿಲ್ಲ. ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಕೊಳವೆಬಾವಿಗಳ ಅಂತರ್ಜಲ ಕುಸಿದಿದೆ. ರಾಜ್ಯದ 10 ಲಕ್ಷಕ್ಕೂ ಹೆಚ್ಚು ಕೊಳವೆಬಾವಿಗಳಲ್ಲಿ ನೀರು ಇಂಗಿ ಹೋಗಿದೆ. ರೈತರು ಹೊಟ್ಟೆಪಾಡಿಗಾಗಿ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಆದರೆ, ರಾಜಕೀಯ ನಾಯಕರು ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ರೈತರ ಹಿತ ಕಾಯುವ ಯಾವ ಕಾಳಜಿಗಳು ಇವರಿಗಿಲ್ಲ. ಹೀಗಾಗಿ ಚುನಾವಣೆ ಪ್ರಚಾರಕ್ಕೆಂದು ಬರುವ ರಾಜಕೀಯ ನಾಯಕರಿಗೆ ರೈತರು ಛೀಮಾರಿ ಹಾಕಿ ಕಳುಹಿಸಬೇಕು ಎಂದರು.

ಬರದ ಬವಣೆಯಲ್ಲಿರುವ ರೈತರ ಬೆಳೆಸಾಲವನ್ನು ವಸೂಲಿ ಮಾಡಬಾರದು ಎಂದು ಬ್ಯಾಂಕುಗಳು ಹಾಗೂ ಸಹಕಾರ ಸಂಘಗಳಿಗೆ ಆದೇಶವಿದ್ದಾಗ್ಯೂ ಬ್ಯಾಂಕುಗಳು ರೈತರ ಸುಲಿಗೆ ಮಾಡುತ್ತಿವೆ. ಸಂಕಷ್ಟದಲ್ಲಿರುವ ರೈತರ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಯಾವುದೇ ಕಾಳಜಿ ಇಲ್ಲ. ಬ್ಯಾಂಕ್‌ಗಳ ನಡೆಯನ್ನು ಖಂಡಿಸಿ ಸಂಘಟಿತ ಹೋರಾಟ ನಡೆಸಲಾಗುತ್ತಿದೆ. ಇನ್ನಾದರೂ ಬ್ಯಾಂಕುಗಳ ರೈತರ ಬಗ್ಗೆ ಕರುಣೆ ತೋರಿಸಲಿ ಎಂದು ಒತ್ತಾಯಿಸಿದರು.

ರೈತ ಸಂಘಟನೆಗಳು ರಾಜಕೀಯ ಪಕ್ಷಗಳ ಹಂಗಿನಲ್ಲಿರಬಾರದು. ಬಂಡವಾಳ ಶಾಹಿಗಳ ಕುತಂತ್ರಗಳಿಂದ ರೈತರ ಸಮಸ್ಯೆಗಳು ಹೆಚ್ಚುತ್ತಿದ್ದು, ಹಳ್ಳಿ ಹಳ್ಳಿಗಳಲ್ಲಿ ರೈತರು ಜಾತಿ ಹಾಗೂ ಪಕ್ಷವನ್ನು ಬದಿಗೊತ್ತಿ ಸಂಘಟಿತರಾಗಿ ಅನ್ಯಾಯ ವಿರುದ್ಧ ಹೋರಾಟಕ್ಕೆ ಸಜ್ಜಾಗಬೇಕು. ರೈತರ ಹೆಸರಿನಲ್ಲಿ ಅಸ್ವಿತ್ವ ಪಡೆಯುವ ಸಂಘಗಳು ರೈತರ ಹಿತ ಕಾಯುವ ಕೆಲಸ ಮಾಡಬೇಕು ಎಂದರು.

ಪಕ್ಷದ ರಾಜ್ಯ ಮುಖಂಡರಾದ ಬಲ್ಲೂರು ರವಿಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಜೆ.ವಿ. ಲಕ್ಷ್ಮಿದೇವಿ, ಕೊಟ್ರೇಶ್ ಚೌಧರಿ, ಎನ್‌.ಎಚ್. ದೇವಕುಮಾರ್, ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಸುನೀಲ್ ಸುದ್ದಿಗೋಷ್ಠಿಯಲ್ಲಿದ್ದರು. ಕೆರೆ-ಕಟ್ಟೆಗಳನ್ನು ನಿರ್ಮಿಸಿ: ಹಳ್ಳಿಗಳಲ್ಲಿ ದೇವಸ್ಥಾನ, ಸಮುದಾಯ ಭವನಗಳನ್ನು ನಿರ್ಮಿಸುವ ಬದಲು ಕೆರೆ-ಕಟ್ಟೆಗಳನ್ನು ನಿರ್ಮಿಸುವಂತಾಗಬೇಕು. ಬರದಿಂದಾಗಿ ಕೆರೆ-ಕಟ್ಟೆಗಳು ಬತ್ತಿಹೋಗಿವೆ. ಪರಿಸರ ನಾಶವಾಗುತ್ತಿದೆ. ಮುಂದಿನ ತಲೆಮಾರಿಗೆ ಕೃಷಿ ಉಳಿಸಲು ರೈತರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಮಂದಿರ ನಿರ್ಮಾಣದ ಬೇಡಿಕೆಯ ಬದಲು ಕೆರೆ-ಕಟ್ಟೆಗಳನ್ನು ನಿರ್ಮಿಸಿ ಎಂದು ರಾಜಕೀಯ ನಾಯಕರಿಗೆ ಒತ್ತಾಯಿಸಬೇಕು ಎಂದರು.