ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಭಾಷಾವಾರು ಪ್ರಾಂತ್ಯ ವಿಂಗಡಣೆ ವೇಳೆ ಕನ್ನಡಿಗರು ಇರುವ ಅನೇಕ ಗ್ರಾಮಗಳು ಹೊರನಾಡಿನಲ್ಲಿ ಉಳಿದುಕೊಂಡರೂ ಈಗಲೂ ಕನ್ನಡತನ ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ರಾಜ್ಯ ಸರ್ಕಾರ ಮತ್ತು ಗಡಿನಾಡು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಡುನಾಡು, ಗಡಿನಾಡು ಮತ್ತು ಹೊರನಾಡು ಕನ್ನಡಿಗರು ಎಂಬ ತಾರತಮ್ಯ ಮಾಡದೇ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಸುರೇಖಾ ಹೊರ್ತಿಕರ ಆಗ್ರಹಿಸಿದರು.ಸಮೀಪದ ಜತ್ತ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಾತಾಜಿ ಅಕ್ಕಮಹಾದೇವಿ ಜ್ಞಾನ ಯೋಗಾಶ್ರಮ, ಉಮರಾಣಿ ಇವರ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆ ಮತ್ತು ಸಾಹಿತ್ಯ, ಕಲೆ, ಸಂಸ್ಕೃತಿಯ ಶ್ರೀಮಂತಿಕೆ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕು. ನಾವೆಲ್ಲರೂ ಸ್ಥಾನಿಕವಾಗಿ ಮಹಾರಾಷ್ಟ್ರದಲ್ಲಿ ನೆಲೆಸಿದರೂ ನಮ್ಮ ಭಾಷಾ ಬಾಂಧವ್ಯ ಮತ್ತು ಭಾವನೆಗಳು ಎಂದೆಂದಿಗೂ ಕನ್ನಡಮಯವಾಗಿವೆ. ರಾಜ್ಯ ಸರ್ಕಾರ ಮತ್ತು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕನ್ನಡಿಗರ ಭಾವನೆಗಳಿಗೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದು ಆಗ್ರಹಿಸಿದರು.ಕನ್ನಡ ಶಾಲೆಗಳ ಪುನಶ್ಚೇತನ ಹಾಗೂ ಶಿಕ್ಷಕರ ಕೊರತೆ ಸರಿದೂಗಿಸಬೇಕು. ಕನ್ನಡ ಅಂಗನವಾಡಿಗಳನ್ನು ತೆರೆಯಬೇಕು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸಹಾಯಧನವನ್ನು ಪದವಿ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು. ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರಿಗೆ ಮಹಾರಾಷ್ಟ್ರ ಜಿಲ್ಲಾ ಪರಿಷತ್ ಘಟಕದಲ್ಲಿ ಮರಾಠಿ ಭಾಷೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಇಲ್ಲಿ ನಮ್ಮ ಶಿಕ್ಷಕರಿಗೆ ತೊಂದರೆಯಾಗುತ್ತಿದ್ದು, ಕನ್ನಡ ಭಾಷೆಯಲ್ಲಿ ತರಬೇತಿ ನೀಡುವಂತಾಗಬೇಕು. ಗಡಿನಾಡು ಮತ್ತು ಹೊರನಾಡು ರಾಜ್ಯಗಳಲ್ಲಿ ಕನ್ನಡ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ನೀಡುವಲ್ಲಿ ವಿಶೇಷ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.ಗಡಿ ಭಾಗದ ರಸ್ತೆಗಳನ್ನು ಸುಧಾರಣೆ ಮಾಡುವುದರ ಜತೆಗೆ ಸದಾ ಬರಗಾಲ ಎದುರಿಸುತ್ತಿರುವ ರೈತರ ಬದುಕು ಹಸಿರಾಗಬೇಕು. ಕೆರೆ ತುಂಬುವ ಯೋಜನೆ, ಏತ ನಿರಾವರಿ ಯೋಜನೆಗಳನ್ನು ಜತ್ತ ತಾಲೂಕಿನ ಅನೇಕ ಕನ್ನಡಿಗರು ಇರುವ ಗ್ರಾಮಗಳಿಗೆ ಒದಗಿಸುವ ಮೂಲಕ ರೈತರ ಹಿತ ಕಾಪಾಡಬೇಕು. ನಮ್ಮ ರೈತರಿಗೆ ಬೀಜ ಮತ್ತು ಗೊಬ್ಬರ, ಕೃಷಿ ಸಲಕರಣೆಗಳು ದೊರಕುವಂತೆ ಸರ್ಕಾರ ಸ್ಪಂದಿಸಬೇಕು ಎಂದು ಮನವಿ ಮಾಡಿದರು.ಹಿರಿಯ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿಭಾಗದ ಈ ಪುಟ್ಟ ಗ್ರಾಮದಲ್ಲಿ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಕನ್ನಡ ಹಬ್ಬ ಆಯೋಜಿಸುವುದರ ಜತೆಗೆ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ಸಂತಸದ ವಿಚಾರ. ಮಠಮಾನ್ಯಗಳು ಜನರಿಗೆ ಧಾರ್ಮಿಕ ಸಂಸ್ಕಾರ ನೀಡುವುದರ ಜತೆಗೆ ಕನ್ನಡ ಭಾಷೆ ಸಂಸ್ಕೃತಿ ಉಳಿಸಿ, ಬೆಳೆಸುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಚಿಂತನಾಗೋಷ್ಠಿ ಕಾರ್ಯಕ್ರಮದಲ್ಲಿ ಕನ್ನಡ ಪ್ರಾಧ್ಯಾಪಕ ಅರ್ಜುನ ಕಾಂಬಳೆ ಕನ್ನಡ ವಚನ ಸಾಹಿತ್ಯದ ಮೂಲಕ ನಡೆದ ಸಾಮಾಜಿಕ ಚಿಂತನೆಗಳ ಬಗ್ಗೆ ಉಪನ್ಯಾಸ ನೀಡಿದರು. ಗಡಿನಾಡಿನಲ್ಲಿ ಕನ್ನಡ ಜಾಗೃತಿ ಅವಶ್ಯಕತೆ ಕುರಿತು ಉಪನ್ಯಾಸಕ ಅರವಿಂದ ಕರಡಿ ಮಾತನಾಡಿದರು. ಕನ್ನಡ ಸಾಹಿತ್ಯ ಮತ್ತು ಕನ್ನಡ ಶಾಲೆಗಳ ಪುನಶ್ಚೇತನಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಗಡಿನಾಡಿನ ಆದರ್ಶ ಶಿಕ್ಷಕ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ವಿವಿಧ ರೂಪಕ, ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕನ್ನಡ ಸಾಧಕರನ್ನು ಸನ್ಮಾನಿಸಲಾಯಿತು.ಚಿಕ್ಕಪಡಸಲಗಿಯ ಮಾತೋಶ್ರೀ ಅಭಿನವ ಅಕ್ಕಮಹಾದೇವಿ ಸಾನ್ನಿಧ್ಯ ವಹಿಸಿ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡವನ್ನು ಇನ್ನಷ್ಟು ಗಟ್ಟಿಗೊಳಿಸುವ ಕಾರ್ಯ ಈ ಸಮ್ಮೇಳನದ ಮೂಲಕ ಜರುಗಬೇಕು. ಕಳೆದ ಎರಡು ವರ್ಷಗಳಿಂದ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಎಲ್ಲಾ ಕನ್ನಡದ ಮನಸುಗಳನ್ನು ಅಭಿನಂದಿಸಿದರು.ಈ ವೇಳೆ ನಿಕಟಪೂರ್ವ ಸಮ್ಮೇಳನದ ಸರ್ವಾಧ್ಯಕ್ಷ ಹಾಗೂ ಹಿರಿಯ ಸಾಹಿತಿ ಶ್ರೀಶೈಲ ಅವಟಿ, ಸಾಹಿತಿ ಎಂ.ಜಿ.ಕಾರಜನಗಿ, ಮಲ್ಲೇಶ ಕತ್ತಿ, ಮಲ್ಲಿಕಾರ್ಜುನ ಗದಗ, ಸಂತೋಷ ಗಡದಿ, ಭಾರತಿ ಅಲಿಬಾದಿ, ಕನ್ನಡಪರ ಹೋರಾಟಗಾರ ಮಲಿಕ ಜಾನಶೇಕ, ಅಣ್ಣಾಸಾಹೇಬ ತೆಲಸಂಗ, ಕಲ್ಲಿ ಮೊಹಮ್ಮದ್ ಅಪರಾಧ, ಚನ್ನಪ್ಪ ಸುತಾರ, ಮಾಣಿಕ ಪ್ರಭು ಬಡಿಗೇರ, ಸಂದೀಪ ಮಾಂಗ ಇನ್ನಿತರರು ಉಪಸ್ಥಿತರಿದ್ದರು. ಜಯಾನಂದ ತುಂಗಳ ಸ್ವಾಗತಿಸಿದರು. ಚೆನ್ನಪ್ಪ ಸುತಾರ ಮಾತನಾಡಿದರು. ಮೀನಾಕ್ಷಿ ಹತ್ತಿ ನಿರೂಪಿಸಿದರು. ಮಾಣಿಕ ಬಡಿಗೇರ ವಂದಿಸಿದರು.ಸಮ್ಮೇಳನದ ಸರ್ವಾಧ್ಯಕ್ಷರ ಭವ್ಯ ಮೆರವಣಿಗೆ
ಗಡಿನಾಡು ಉಮರಾಣಿಯಲ್ಲಿ ಆಯೋಜಿಸಲಾಗಿದ್ದ ಗಡಿನಾಡು ಸಾಹಿತ್ಯ ಸಮ್ಮೇಳನದ ಪೂರ್ವದಲ್ಲಿ ಕನ್ನಡಾಂಬೆಯ ಭಾವಚಿತ್ರ ಪೂಜೆಯೊಂದಿಗೆ ಆರಂಭವಾದ ಮೆರವಣಿಗೆಯಲ್ಲಿ ಸಾರೋಟದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಸುರೇಖಾ ಪ್ರಕಾಶ ಹೊರ್ತಿಕರ ಅವರನ್ನು ಮೆರವಣಿಗೆಯ ಮೂಲಕ ಸಮ್ಮೇಳನ ಸ್ಥಳಕ್ಕೆ ಬರಮಾಡಿಕೊಳ್ಳಲಾಯಿತು. ಈ ವೇಳೆ ವಿವಿಧ ಕಲಾತಂಡಗಳು, ಡೊಳ್ಳು ಕುಣಿತ, ಶಾಲಾ ಮಕ್ಕಳ ವಿವಿಧ ರೂಪಕಗಳು ಮತ್ತು ಕೈಯಲ್ಲಿ ಕನ್ನಡದ ಬಾವುಟಗಳನ್ನು ಜಯ ಘೋಷಗಳನ್ನು ಹಾಕುವ ಮೂಲಕ ಗಡಿ ಗ್ರಾಮದಲ್ಲಿ ಕನ್ನಡ ಹಬ್ಬವನ್ನು ವೈಭವದಿಂದ ಆಚರಿಸಲಾಯಿತು.ಕನ್ನಡ ನಾಡಿನಲ್ಲಿಯೇ ಇಂದು ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿ ಕನ್ನಡ ಉಳಿಸಿ, ಬೆಳೆಸಬೇಕೆನ್ನುವ ಪರಿಸ್ಥಿತಿ ಬಂದಿದೆ. ಆದರೆ, ಹೊರನಾಡು ಕನ್ನಡಿಗರು ಭಾಷಾ ಬಾಂಧವ್ಯವನ್ನು ಮರೆಯದೇ ಅತ್ಯಂತ ವೈಭವದಿಂದ ಕನ್ನಡ ಹಬ್ಬವನ್ನು ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.-ಅಪ್ಪಾಸಾಹೇಬ ಅಲಿಬಾದಿ,
ಹಿರಿಯ ಸಾಹಿತಿ.ರಾಜ್ಯ ಸರ್ಕಾರ ಶಿಕ್ಷಕರಿಗೆ, ಕಲಾವಿದರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡುತ್ತಿರುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಗಡಿನಾಡು ಮತ್ತು ಹೊರನಾಡ ಕನ್ನಡ ಸಾಧಕರಿಗೂ ನೀಡಬೇಕು. ಹೊರನಾಡಿನಲ್ಲಿರುವ ಕನ್ನಡ ಸಾಹಿತ್ಯಗಾರರ ಕೃತಿಗಳ ಮುದ್ರಣಕ್ಕೆ ರಾಜ್ಯ ಸರ್ಕಾರ ಸಹಾಯಧನ ನೀಡಬೇಕು.-ಡಾ.ಸುರೇಖಾ ಹೊರ್ತಿಕರ,
ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ.