ಸಾರಾಂಶ
ಕನ್ನಡಪ್ರಭ ವಾರ್ತೆ ಔರಾದ್
ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ನಂತರ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಲಾಭ ದೊರೆಯಬೇಕು ಎನ್ನುವುದು ಪ್ರಧಾನ ಮಂತ್ರಿಗಳ ಆಶಯವಾಗಿದೆ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.ಪಕ್ಷದ ಲಾಭಾರ್ಥಿ ಸಂಪರ್ಕ ಅಭಿಯಾನದ ನಿಮಿತ್ತ ಮಾಜಿ ಸಚಿವರು ಹಾಗೂ ಔರಾದ್ (ಬಿ) ಶಾಸಕರಾದ ಪ್ರಭು ಚವ್ಹಾಣ್ ಬೋಂತಿ ತಾಂಡಾ ಬೂತ್ ಸಂಖ್ಯೆ 31ರಲ್ಲಿನ ಕೇಂದ್ರ ಸರ್ಕಾರದ ಫಲಾನುಭವಿಗಳ ಮನೆಗೆ ಭೇಟಿ ನೀಡಿ, ದರು. ಬಳಿಕ ಪಕ್ಷದ ಮುಖಂಡರು ಹಾಗೂ ಬೂತ್ ಕಾರ್ಯಕರ್ತರ ಜೊತೆಗೂಡಿ ಲಾಭಾರ್ಥಿಗಳ ಮನೆಗೆ ತೆರಳಿದ ಶಾಸಕರು, ಕರಪತ್ರಗಳನ್ನು ವಿತರಿಸಿ, ಗೋಡೆಗಳಿಗೆ ಸ್ವತಃ ಭಿತ್ತಿಪತ್ರಗಳನ್ನು ಅಂಟಿಸಿದರು. ಕೇಂದ್ರ ಸರ್ಕಾರದ ಸೌಲಭ್ಯ ಪಡೆದಿರುವ ಬಗ್ಗೆ ವಿವರಣೆ ಪಡೆದರು.
ಈ ವೇಳೆ ಮಾತನಾಡಿದ ಶಾಸಕರು, ಲಾಭಾರ್ಥಿ ಸಂಪರ್ಕ ಅಭಿಯಾನ ನಡೆಸಿ, ಫಲಾನುಭವಿಗಳ ಮನೆಗೆ ಭೇಟಿ ನೀಡಿ, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅಭಿಪ್ರಾಯಗಳನ್ನು ಪಡೆಯುವುದು, ಮಾಹಿತಿ ಇಲ್ಲದವರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಬೇಕು. ಈ ದಿಸೆಯಲ್ಲಿ ಕಾರ್ಯಕರ್ತರು ಪ್ರಮಾಣಿಕವಾಗಿ ಕೆಲಸ ಮಾಡಬೇಕೆಂದರು.ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಜಾಗತಿಕ ಮಟ್ಟದಲ್ಲಿ ದೇಶದ ಗೌರವ ಹೆಚ್ಚಾಗಿದೆ. ಬಡವರು, ರೈತರು, ಮಹಿಳೆಯರು, ಯುವಕರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ದೇಶದ ಪ್ರತಿ ನಾಗರಿಕರು ಒಂದಿಲ್ಲೊಂದು ರೀತಿಯಲ್ಲಿ ಕೇಂದ್ರ ಸರ್ಕಾರದ ಲಾಭಾರ್ಥಿಗಳಾಗಿದ್ದಾರೆ. ಹಾಗಾಗಿ ದೇಶಾದ್ಯಂತ ಪ್ರತಿ ವರ್ಷ ಪ್ರಧಾನ ಮಂತ್ರಿಯವರ ಅಲೆ ಹೆಚ್ಚುತ್ತಿದೆ. ಮುಂಬರುವ ಚುನಾವಣೆಯಲ್ಲಿಯೂ ಪುನಃ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದ್ದು, ನರೇಂದ್ರ ಮೋದಿಯವರು ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ಬಂಟಿ ರಾಂಪೂರೆ ಸೇರಿದಂತೆ ಬೂತ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಅಭಿಯಾನದಲ್ಲಿ ಪಾಲ್ಗೊಂಡರು.ಈ ಸಂದರ್ಭದಲ್ಲಿ ಕಿಸಾನ್ ಸಮ್ಮಾನ್ ಯೋಜನೆ, ಉಜ್ವಲಾ, ಪ್ರಧಾನ ಮಂತ್ರಿ ಆವಾಸ ಯೋಜನೆ, ಜಲ ಜೀವನ್ ಮಿಷನ್, ಆಯುಷ್ಮಾನ ಭಾರತ, ಸುಕನ್ಯಾ ಸಮೃದ್ಧಿ ಯೋಜನೆ, ಗರಿಬ್ ಕಲ್ಯಾಣ ಯೋಜನೆ, ಪ್ರಧಾನ ಮಂತ್ರಿ ಫಸಲ್ ಬಿಮಾ ಸೇರಿದಂತೆ ವಿವಿಧ ಯೋಜನೆಗಳಿಂದ ತಾವು ಲಾಭ ಪಡೆದುಕೊಂಡಿರುವುದಾಗಿ ಫಲಾನುಭವಿಗಳು ಸಂತೋಷ ಹಂಚಿಕೊಂಡರು.
ಮಾಜಿ ಯೋಧನಿಗೆ ಸನ್ಮಾನ: ನಂತರ 31 ವರ್ಷ ಸುದೀರ್ಘ ದೇಶ ಸೇವೆ ಮಾಡಿ ಗಡಿ ಭದ್ರತಾ ಪಡೆಯಿಂದ ನಿವೃತ್ತರಾದ ಭವಾನಿ ಬಿಜಲಗಾಂವ್ ಗ್ರಾಮದ ನರಸಿಂಗರಾವ್ ಸಲಗರ್ ಅವರನ್ನು ಭೇಟಿ ಮಾಡಿ ಸತ್ಕರಿಸಿದರು. ಸೇನೆಯಿಂದ ನಿವೃತ್ತರಾದರೂ ತಮ್ಮಿಂದ ದೇಶ ಸೇವೆ ಮುಂದುವರಿಯಬೇಕು. ನವ ಯುವಕರಲ್ಲಿ ದೇಶಪ್ರೇಮ ಜಾಗೃತಗೊಳಿಸುವ ಕೆಲಸ ಮಾಡಬೇಕೆಂದು ಹೇಳಿದರು.