ಕೇಂದ್ರದ ಜಾತಿ-ಜನಗಣತಿ ಮುನ್ನ ಗುರು-ವಿರಕ್ತರು ಒಂದಾಗಲಿ: ಸೋಮಣ್ಣ

| Published : Jul 23 2025, 04:22 AM IST

ಕೇಂದ್ರದ ಜಾತಿ-ಜನಗಣತಿ ಮುನ್ನ ಗುರು-ವಿರಕ್ತರು ಒಂದಾಗಲಿ: ಸೋಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಗೃಹ ಇಲಾಖೆ ವ್ಯವಸ್ಥಿತವಾಗಿ 2026ರಲ್ಲಿ ದೇಶಾದ್ಯಂತ ಕೈಗೊಳ್ಳುವ ಜಾತಿ-ಜನಗಣತಿಯಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸುವ, ಸಂಘಟಿಸುವ ರೀತಿ ಗುರು-ವಿರಕ್ತರು ಒಂದಾಗಿ ಇಡೀ ಸಮಾಜವನ್ನು ಮುನ್ನಡೆಸಬೇಕು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ, ಸಮಾಜದ ಹಿರಿಯ ನಾಯಕ ವಿ.ಸೋಮಣ್ಣ ಮನವಿ ಮಾಡಿದ್ದಾರೆ.

- ರಾಜ್ಯ ಸರ್ಕಾರದ ಜಾತಿಗಣತಿ ಎಡವಟ್ಟು, ವೀರಶೈವ ಲಿಂಗಾಯತಕ್ಕೆ ವರವಾಗಿ, ಪಂಚಪೀಠ ಒಂದಾಗಿವೆ: ಕೇಂದ್ರ ರೈಲ್ವೆ ಸಚಿವ

- ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದ 2ನೇ ದಿನದ ಕಾರ್ಯಕ್ರಮ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೇಂದ್ರ ಗೃಹ ಇಲಾಖೆ ವ್ಯವಸ್ಥಿತವಾಗಿ 2026ರಲ್ಲಿ ದೇಶಾದ್ಯಂತ ಕೈಗೊಳ್ಳುವ ಜಾತಿ-ಜನಗಣತಿಯಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸುವ, ಸಂಘಟಿಸುವ ರೀತಿ ಗುರು-ವಿರಕ್ತರು ಒಂದಾಗಿ ಇಡೀ ಸಮಾಜವನ್ನು ಮುನ್ನಡೆಸಬೇಕು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ, ಸಮಾಜದ ಹಿರಿಯ ನಾಯಕ ವಿ.ಸೋಮಣ್ಣ ಮನವಿ ಮಾಡಿದರು.

ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದ 2ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅತ್ಯಂತ ವ್ಯವಸ್ಥಿತವಾಗಿಯೇ ಕೇಂದ್ರ ಗೃಹ ಇಲಾಖೆ ದೇಶದಲ್ಲಿ ಗಣತಿ ಕಾರ್ಯ ಕೈಗೊಳ್ಳಲಿದೆ. ಗಣತಿದಾರರು ಮನೆ ಬಾಗಿಲಿಗೆ ಬಂದಾಗ ಒಳಪಂಗಡಗಳನ್ನು ಮರೆತು, ಗುರು-ವಿರಕ್ತರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಏನು ಸೂಚನೆ ನೀಡುತ್ತದೋ ಅದನ್ನು ಸಮಾಜ ಬಾಂಧವರು ದಾಖಲಿಸಬೇಕು ಎಂದರು.

ದಾವಣಗೆರೆಯಿಂದಲೇ ನಾಂದಿ ಹಾಡಿ:

ರಾಷ್ಟ್ರಮಟ್ಟದಲ್ಲಿ ಜಾತಿಗಣತಿಗೆ ಕೇಂದ್ರ ಮುಂದಾಗಿರುವುದು ಎಲ್ಲೋ ಒಂದು ಕಡೆ ದೇವರ ದಯೆ, ಇಚ್ಛೆಯೋ ಗೊತ್ತಿಲ್ಲ. ರಾಜ್ಯ ಸರ್ಕಾರ ಯಾಕೆ ಎಡವಟ್ಟು ಮಾಡಿತೋ ಅದೂ ಗೊತ್ತಿಲ್ಲ. ರಾಜ್ಯ ಸರ್ಕಾರ ಎಡವಟ್ಟು ಮಾಡಿದ್ದರಿಂದಲೇ ಪಂಚಪೀಠಗಳು ಇಂದು ಒಂದಾಗಿವೆ. ಈ ಸಮಾಜ ಯಾರೇ ಬಂದರೂ ನಮ್ಮವರೆಂದು, ಅಪ್ಪುವ, ಒಪ್ಪುವ ಸಮಾಜವಾಗಿದೆ. ನಮ್ಮ ವೀರಶೈವ ಲಿಂಗಾಯತ ಧರ್ಮಕ್ಕೆ ಇದೊಂದು ಸುದಿನ. ಪಂಚಪೀಠಗಳು ಒಂದಾಗಿದ್ದಕ್ಕೆ ಗುರುಗಳಿಗೆ ದೀರ್ಘದಂಡ ನಮಸ್ಕಾರ ಮಾಡುತ್ತೇನೆ ಎಂದ ಅವರು, ಸಮಾಜಕ್ಕೆ ಶಕ್ತಿ ತುಂಬುವ ಮಹಾತ್ಕಾರ್ಯಕ್ಕೆ ಇದೇ ದಾವಣಗೆರೆಯಿಂದಲೇ ಗುರು-ವಿರಕ್ತರು ನಾಂದಿ ಹಾಡಲಿ ಎಂದು ಅರಿಕೆ ಮಾಡಿಕೊಂಡರು.

ಶಿವಶಂಕರಪ್ಪ-ಮಹಾಸಭಾಗೆ ಅಭಿನಂದನೆ:

ಪಂಚಪೀಠಗಳ ಗುರುಗಳ ಒಗ್ಗೂಡುವಿಕೆಯು ಈ ಸಮಾವೇಶಕ್ಕಷ್ಟೇ ನಿಲ್ಲಬಾರದು. ಗುರು-ವಿರಕ್ತರನ್ನು ಒಂದು ಮಾಡುವ ಕೆಲಸವಾಗಬೇಕು. ಸುಮಾರು 3 ಸಾವಿರ ಮಠಗಳು ರಾಜ್ಯವ್ಯಾಪಿ ತಮ್ಮ ಕರ್ತವ್ಯ ಮಾಡುತ್ತಾ, ವೀರಶೈವ ಲಿಂಗಾಯತರಿಗೆ ಭದ್ರ ಬುನಾದಿ ನೀಡುತ್ತಿವೆ. ಗುರು- ವಿರಕ್ತರನ್ನು ಒಂದು ಕಡೆ ತರುವಲ್ಲಿ ಹಿರಿಯರಾದ ಶಾಮನೂರು ಶಿವಶಂಕರಪ್ಪ ಮತ್ತು ಬಳಗ, ಕುಟುಂಬಕ್ಕೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಗೆ ಅಭಿನಂದಿಸುತ್ತೇನೆ. ಪಂಚಾಚಾರ್ಯರ ಸಂದೇಶ, ಮುಂದೆ ಕೊಂಡೊಯ್ಯುವ, ಗುರುಗಳ ದೂರದೃಷ್ಟಿಯ ಜೊತೆಗೆ ನಾವೆಲ್ಲರೂ ಸಾಗೋಣ ಎಂದರು.

ವೀರಶೈವ ಲಿಂಗಾಯತ ಬೇರುಗಳನ್ನು ಮೊದಲು ಗಟ್ಟಿಗೊಳಿಸೋಣ. ನಮ್ಮಂತಹ ರಾಜಕಾರಣಿಗಳ ಕೈಯಲ್ಲಿ ಇಂತಹ ಕೆಲಸ ಆಗುವುದಿಲ್ಲ. ನಾವು ರಾಜಕಾರಣಿಗಳು, ಗೆಲ್ಲುವವರೆಗೂ ನಮ್ಮದು ಅಂತೀವಿ. ಹರ ಗುರು ಚರ ಮೂರ್ತಿಗಳು ಸಮಾಜವನ್ನು ಒಗ್ಗೂಡಿಸುವ, ಶಕ್ತಿ ತುಂಬುವ ಕೆಲಸ ಮಾಡಬೇಕು. ವೀರಶೈವ ಲಿಂಗಾಯತ ಧರ್ಮ, ಈ ಧರ್ಮೀಯರು ನಡೆದು ಬಂದ ಇತಿಹಾಸ ದೊಡ್ಡದಿದೆ. ಸಾವಿರಾರು ವರ್ಷಗಳ ಇತಿಹಾಸ, ಹಿನ್ನೆಲೆಯ ವಿಶಾಲ ಸಮಾಜ ನಮ್ಮದು. ಸಮಾಜವನ್ನು ಉಳಿಸುವ, ಸಂಘಟಿಸುವ ಹಾಗೂ ಮುಂದಿನ ಸಾವಿರಾರು ವರ್ಷ ಸದೃಢವಾಗಿ ಸಾಗುವಂತೆ ಗುರು-ವಿರಕ್ತರು ಒಂದಾಗಿ ಕೆಲಸ ಮಾಡಲಿ ಎಂದು ಅವರು ಮನವಿ ಮಾಡಿದರು.

ಪಂಚಪೀಠಗಳು ಕೇವಲ ನಮ್ಮ ಸಮುದಾಯಕ್ಕೆ ಮಾತ್ರ ಸೀಮಿತವಾಗದೇ, ಎಲ್ಲ ಜಾತಿ, ಧರ್ಮೀಯರಿಗೆ, ಶಕ್ತಿ ಇಲ್ಲದ, ಧ್ವನಿ ಎಲ್ಲದ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿಕೊಂಡೇ ಬಂದಿವೆ. ದೆಹಲಿಯಲ್ಲಿ ಲೋಕಸಭೆ ಅಧಿವೇಶನ ನಡೆಯುತ್ತಿದೆ. ದೇಶಕ್ಕೆ ಅಡಿಪಾಯ ಹಾಕಿ, ಸಂಸ್ಕೃತಿ, ಸಂಸ್ಕಾರ, ಧರ್ಮಪ್ರಚಾರ ಮಾಡುತ್ತಿರುವ ಪಂಚ ಪೀಠಾಧೀಶರ ಕಾರ್ಯಕ್ರಮಕ್ಕೆ ನೀವು ಹೋಗಿ, ಬನ್ನಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ನನಗೆ ಕಳಿಸಿದ್ದಾರೆ ಎಂದು ಹೇಳಿದರು.

ಐತಿಹಾಸಿಕ ಪರಂಪರೆ:

ಯಾವುದೇ ರಾಜ್ಯಕ್ಕೆ ಹೋದರೂ ಅಲ್ಲಿನ ತಪಸ್ವಿಗಳು, ಮಠಾಧೀಶರು, ಹರ ಗುರು ಚರಮೂರ್ತಿಗಳ ಭೇಟಿ ಮಾಡಿ, ದರ್ಶನ ಪಡೆಯಿರಿ. ಅಂತಹ ಭಾವನೆ ಅರ್ಥ ಮಾಡಿಕೊಳ್ಳಿ. ಸಂದೇಶ ಮೈಗೂಡಿಸಿಕೊಳ್ಳಿ ಅಂತಾ ನರೇಂದ್ರ ಮೋದಿ ಹೇಳುತ್ತಾರೆ. ನಾನು ಎಲ್ಲಿಗೆ ಹೋದರೂ ತಪಸ್ಪಿಗಳು, ಹರ, ಗುರು, ಚರಮೂರ್ತಿಗಳ ದರ್ಶನಾಶೀರ್ವಾದ ಪಡೆಯುತ್ತಾನೆ. ಐತಿಹಾಸಿಕ ಪರಂಪರೆ ಹೇಗೆ ನಡೆಯಬೇಕು, ನಾವು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಇಂತಹದ್ದರಿಂದ ಅರಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ರಾಮಕೃಷ್ಣ ಹೆಗಡೆ ಅವರಿಗೆ ತಪ್ಪು ಗ್ರಹಿಕೆ ಹೋಯಿತು:

ವೀರಶೈವ ಲಿಂಗಾಯತರ ಬಗ್ಗೆ ಸಾಕಷ್ಟು ಜನರಿಗೆ ತಪ್ಪುಗ್ರಹಿಕೆ ಇದೆ. ಉಳ್ಳವರು, ಶ್ರೀಮಂತರೇ ಇದ್ದಾರೆಂಬುದು. ಸ್ವತಃ ಹಿಂದೆ ರಾಮಕೃಷ್ಣ ಹೆಗಡೆ ಅವರಿಗೂ ಇಂತಹದ್ದೇ ಭಾವನೆ ಇತ್ತು. ಹಳ್ಳಿಯೊಂದರಲ್ಲಿ ತಲೆ ಮೇಲೆ ಹುಲ್ಲಿನ ಹೊರೆ ಹೊತ್ತು, ಕೊರಳಲ್ಲಿ ಚೌಕ (ಕರಡಿಗೆ) ಧರಿಸಿ, ಬರಿಮೈಯಲ್ಲಿ ಬರುತ್ತಿದ್ದ ಇಬ್ಬರು ಕೂಲಿ ಮಾಡುವ ನಮ್ಮ ಸಮುದಾಯದ ಜನರನ್ನು ನಾನು ಮಾತನಾಡಿಸಿದಾಗ ಸಮಾಜದ ಬಗ್ಗೆ ಇದ್ದ ರಾಮಕೃಷ್ಣ ಹೆಗಡೆ ಅವರಿಗೆ ಇದ್ದ ತಪ್ಪು ಗ್ರಹಿಕೆ ಹೋಯಿತು. ಅಂದು ಸಚಿವರಿದ್ದ ಎಸ್.ಆರ್.ಬೊಮ್ಮಾಯಿ, ಎಚ್.ಡಿ.ದೇವೇಗೌಡರು ಜೊತೆಗಿದ್ದರು ಎಂದು ಅವರು ಸೋಮಣ್ಣ ಮೆಲಕು ಹಾಕಿದರು.

ಎಲ್ಲ ಧರ್ಮಕ್ಕೂ ಕೊಡುಗೆಗಳು:

ದೇಶದಲ್ಲಿ ವೀರಶೈವ ಲಿಂಗಾಯತರು ವಿಭಿನ್ನವಾಗಿ ಜೀವನ ನಡೆಸುವವರು. ಗ್ರಾಮೀಣ ಪ್ರದೇಶದಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಗುರುಗಳು ಮಾಡುತ್ತಿದ್ದಾರೆ. ಕನಕಪುರ ಸಮೀಪದ ತಮ್ಮ ಊರಿನ ಪಕ್ಕದ ವೀರಶೈವರ 40*50 ಮನೆಗಳ ಗ್ರಾಮಕ್ಕೆ ರಂಭಾಪುರಿ ಶ್ರೀಗಳು ಪ್ರವೇಶ, ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಭಾಗಿಯಾಗಿದ್ದರು. ವೀರಶೈವರಿಗಿಂತ ಅನ್ಯಧರ್ಮೀಯರು ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಎಲ್ಲ ಧರ್ಮಕ್ಕೂ ನಮ್ಮ ಸಮುದಾಯದ ಮಠ-ಪೀಠಗಳ ಕೊಡುಗೆ ಇದೆ ಎಂಬುದನ್ನು ತೋರಿಸುತ್ತದೆ ಎಂದು ತಿಳಿಸಿದರು.

ರಂಭಾಪುರಿ ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿ ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಸ್ವಾಮೀಜಿ, ಶ್ರೀಶೈಲ ಪೀಠದ ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಾಶಿ ಪೀಠದ ಶ್ರೀ ಚಂದ್ರಶೇಖರ ರಾಜದೇಶೀ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಬಸವನ ಬಾಗೇವಾಡಿ ಹಿರೇಮಠದ ಶ್ರೀ ಶಿವಪ್ರಕಾಶ ಸ್ವಾಮೀಜಿ ಹೃದಯ ಹಂಬಲದ ನುಡಿಗಳನ್ನಾಡಿದರು. ಎಡೆಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಮುಕ್ತಿ ಮಂದಿರ ಕ್ಷೇತ್ರದ ಶ್ರೀ ವಿಮಲ ರೇಣುಕ ವೀರಮುಕ್ತಿ ಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವರಾದ ಸಿ.ಸಿ. ಪಾಟೀಲ, ಹರಿಹರ ಶಾಸಕ ಬಿ.ಪಿ.ಹರೀಶ, ಮಾಜಿ ಶಾಸಕರಾದ ಎಚ್.ಎಸ್.ಶಿವಶಂಕರ, ಮಹಿಮಾ ಜೆ.ಪಟೇಲ್, ಆಯನೂರು ಮಂಜುನಾಥ, ಮಹಾಂತೇಶ ಕವಟಗಿಮಠ, ಡಾ. ಎ.ಸಿ. ವಾಲಿ, ಅಣಬೇರು ರಾಜಣ್ಣ, ಅಥಣಿ ಎಸ್.ವೀರಣ್ಣ, ವಿಪ ಸದಸ್ಯ ಕೆ.ಎಸ್.ನವೀನ, ಗಂಗಾಧರ ಹಿರೇಮಠ, ಡಾ. ಎ.ಎಚ್. ಶಿವಯೋಗಿಸ್ವಾಮಿ, ಮುರುಗೇಶ ಆರಾಧ್ಯ ಇತರರು ಇದ್ದರು. ಇದೇ ವೇಳೆ ಪಂಚ ಪೀಠಗಳು ಕೈಗೊಂಡ 12 ನಿರ್ಣಯಗಳನ್ನು ರಂಭಾಪುರಿ ಶ್ರೀಗಳು ಪ್ರಕಟಿಸಿದರು.

- - -

(ಬಾಕ್ಸ್‌)

* ರಾಜ್ಯದ 7 ಕೋಟಿ ಜನರಲ್ಲಿ 2 ಕೋಟಿ ವೀರಶೈವ ಲಿಂಗಾಯತರು: ಸೋಮಣ್ಣ ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯದ 7 ಕೋಟಿ ಜನಸಂಖ್ಯೆಯಲ್ಲಿ ನಾವೆಲ್ಲಾ ಮನಸ್ಸು ಮಾಡಿದರೆ 2 ಕೋಟಿ ವೀರಶೈವ ಲಿಂಗಾಯತರು ಇದ್ದಾರೆ ಎಂಬುದನ್ನು ಎತ್ತಿತೋರಿಸಲು ಸಾಧ್ಯ. ನಮ್ಮಲ್ಲಿ ಬಡತನವಿದೆ. ಆದರೂ, ದುಡಿಮೆಯೇ ದೇವರೆಂದು ಪ್ರಾಮಾಣಿಕವಾಗಿ, ಕೂಲಿ ಮಾಡಿಕೊಂಡು ಬದುಕನ್ನು ಕಟ್ಟಿಕೊಂಡಿದ್ದೇವೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ವೀರಶೈವ ಲಿಂಗಾಯತರಲ್ಲಿ ಬುದ್ಧಿವಂತಿಕೆ, ಪ್ರಾಮಾಣಿಕತೆಗೆ ಬಡತನವಿಲ್ಲ. ಸಮಾಜವನ್ನು ಮೇಲ್ಪಂಕ್ತಿಗೆ ತರುವ, ಸಮಾಜದ ಅಂಕು ಡೊಂಕನ್ನು ಸರಿಪಡಿಸಲು ಗುರು-ವಿರಕ್ತರು ಒಂದು ಕಡೆ ಸೇರಲಿ. ಗುರು-ವಿರಕ್ತರನ್ನು ಒಗ್ಗೂಡಿಸುವ ಶಕ್ತಿ ರಂಭಾಪುರಿ, ಉಜ್ಜಯಿನಿ, ಶ್ರೀಶೈಲ, ಕೇದಾರ ಹಾಗೂ ಕಾಶಿ ಪೀಠಗಳಿಗೆ ಇದೆ ಎಂದು ಹೇಳಿದರು.

ನನ್ನ ಮೊದಲ ಆದ್ಯತೆ ಒಳಪಂಗಡದ ವಿಚಾರ. ವೀರಶೈವ ಲಿಂಗಾಯತದಲ್ಲಿ ಒಳಪಂಗಡ ತೆಗೆಯದಿದ್ದರೆ ನಮ್ಮಪ್ಪನ ಆಣೆಗೂ ಮುಂದಿನ ದಿನಗಳಲ್ಲಿ ತೀರಾ ಕಷ್ಟವಾಗುತ್ತದೆ. ಈ ಬಗ್ಗೆ ಗುರು-ವಿರಕ್ತರು, ಅಭಾವೀಮ ಸಹ ಗಂಭೀರವಾಗಿ ಆಲೋಚಿಸಬೇಕು ಎಂದು ವಿ.ಸೋಮಣ್ಣ ಮನವಿ ಮಾಡಿದರು.

- - -

(* ಸೋಮಣ್ಣ ಹೇಳಿದ್ದು..)

- ನನ್ನ 6 ತಿಂಗಳ ವೇತನ ರಂಭಾಪುರಿ ಪೀಠಕ್ಕೆ ನನ್ನದು ಕನಕಪುರ ತಾಲೂಕಿನ ಕುಗ್ರಾಮ, ಇಂದಿಗೂ ಅಲ್ಲಿ ನಮ್ಮದು ಒಂದೇ ಒಂದು ಮನೆ ಇದೆ. ನನ್ನ ತಾಯಿ ರಂಭಾಪುರಿ ಪೀಠದವರು, ತಂದೆ ಉಜ್ಜಯಿನಿ ಪೀಠದವರು. ಉಜ್ಜಯಿನಿ ಪೀಠಕ್ಕೆ ಈಚೆಗೆ ಭೇಟಿ ನೀಡಿದ್ದ ವೇಳೆ ಸಾವಿರಾರು ಭಕ್ತರು ದೇಗುಲಕ್ಕೆ ಬಂದು ಎಣ್ಣೆ ಮಜ್ಜನ ಮಾಡುತ್ತಿದ್ದರು. ಪುಣ್ಯಾತ್ಮರ ತಪಸ್ಸಿನ ಫಲ ಲಕ್ಷ ಲೀಟರ್ ಎಣ್ಣೆ ಹಾಕಿದರೂ ಒಂದು ಹನಿಯೂ ಹರಿಯುವುದಿಲ್ಲ. ಇತ್ತ ರಂಭಾಪುರಿ ಪೀಠದಲ್ಲಿ 51 ಅಡಿ ರೇಣುಕರ ಪುತ್ಥಳಿ ಸ್ಥಾಪಿಸಲು ಗುರುಗಳು ಮುಂದಾಗಿದ್ದಾರೆ. ಇದಕ್ಕೆ ನನ್ನ 6 ತಿಂಗಳ ವೇತನವನ್ನು ನಾಳೆಯೇ ಶ್ರೀಮಠದ ಖಾತೆಗೆ ಕಳಿಸುತ್ತೇನೆ. - ಅಪಚಾರವಿಲ್ಲದೇ ಸಿಎಂ ಆಗಿದ್ದ ನಮ್ಮ ನಾಯಕರು

ಧರ್ಮ, ಧಾರ್ಮಿಕ ಚಿಂತನೆಗಳ ಜೊತೆಗೆ ಗುರು-ವಿರಕ್ತರನ್ನು ಒಂದು ಕಡೆ ಸೇರಿಸುವಾಗ ಕೆಲವು ಅಡೆತಡೆಗಳಿಗೆ ನಾವು ಕಡಿವಾಣ ಹಾಕಿ, ನಿಷ್ಟುರವಾಗಿ ಮಾತನಾಡಬೇಕಿದೆ. 5-10 ಸಾವಿರ ವೀರಶೈವ ಲಿಂಗಾಯತ ಮತಗಳಿಲ್ಲದ ಕ್ಷೇತ್ರದಿಂದ ಕಡೆ 5 ಸಲ ಶಾಸಕ, 2 ಪಾಲಿಕೆ ಸದಸ್ಯನಾಗಿ, 2 ಸಲ ವಿಪ ಸದಸ್ಯನಾಗಿದ್ದೇನೆ. ರಾಜಕಾರಣ ನಿಂತ ನೀರಲ್ಲ. ಗುರುಗಳ ತೀರ್ಮಾನ, ನಿರ್ಧಾರ ಪಂಚ ಪೀಠ, ಉಪ ಪಂಗಡಗಳನ್ನು ಒಂದಾಗಿಸುವ ಕೆಲಸಕ್ಕೆ ನಾವೂ ಜೊತೆಗಿರುತ್ತೇವೆ. ಮಹಾರಾಷ್ಟ್ರದಲ್ಲಿ 1.10 ಕೋಟಿ ವೀರಶೈವ ಲಿಂಗಾಯತರಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಲ್ಲೂ ಇದ್ದಾರೆ. ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಜೆ.ಎಚ್.ಪಟೇಲ್, ಎಸ್.ಆರ್. ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಹೀಗೆ ನಮ್ಮ ಸಮುದಾಯದಿಂದ ಮುಖ್ಯಮಂತ್ರಿ ಆದವರು ಒಂದೇ ಒಂದು ಅಪಚಾರ ವಿಲ್ಲದ ಆಡಳಿತ ನೀಡಿದ್ದಾರೆ. - ಪಂಚ ಪೀಠದ ಸಂದೇಶ ಪ್ರಧಾನಿಗೆ ತಲುಪಿಸುವೆ

ಪಂಚ ಪೀಠಗಳು ಆಶೀರ್ವಾದ ಮಾಡಿ, ನಮಗೆ ವಹಿಸುವ ಜವಾಬ್ಧಾರಿ ನಿರ್ವಹಿಸುತ್ತೇವೆ. ಗುರು-ವಿರಕ್ತರು ಸಮಾಜದ ಹಿತಕ್ಕಾಗಿ ನೀಡುವ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಗಮನಕ್ಕೂ ತರುತ್ತೇವೆ. ವಿಶ್ವ ಭೂಪಟದಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಮೇಲ್ಪಂಕ್ತಿಗೆ ತರುವಂತೆ ಅಭಿವೃದ್ಧಿ ಚಿಂತಕ ನರೇಂದ್ರ ಮೋದಿ ನಡೆದುಕೊಳ್ಳುವುದನ್ನೂ ಹತ್ತಿರದಿಂದ ಗಮನಿಸುತ್ತಿದ್ದೇನೆ. ವೀರರಾಣಿ ಕಿತ್ತೂರು ಚನ್ನಮ್ಮ, ಶ್ರೀ ರೇಣುಕರು, ಬಸವ ಜಯಂತಿ ಎಲ್ಲವೂ ಒಂದೇ ನಾಣ್ಯದ ಎರಡು ಮುಖಗಳಂತೆ. ನಾವೆಲ್ಲಾ ಸೇರಿ, ಕೆಲಸ ಮಾಡೋಣ. - ಸಂಸ್ಕೃತಿ, ಸಂಸ್ಕಾರದಿಂದ ಇಂದು ಸ್ಥಾನಮಾನ ಕನ್ನಡ ಬಿಟ್ಟರೆ ಬೇರೆ ಭಾಷೆ ನನಗೆ ಗೊತ್ತಿರಲಿಲ್ಲ. ಅರ್ಹತೆ, ಅವಶ್ಯಕತೆಗಿಂತಲೂ ಮುಖ್ಯವಾಗಿ ಸಂಸ್ಕಾರ ಇರಬೇಕು. ಇದು ಇರುವುದರಿಂದಲೇ ಇತಿಹಾಸ ಬದಲಾವಣೆ ಮಾಡುವುದಕ್ಕೆ ಸಾಧ್ಯವೆಂಬುದಕ್ಕೆ ಈ ಸೋಮಣ್ಣನೇ ನಿದರ್ಶನ. ಎರಡು ಸಲ ನಾನು ಸೋತಾಗ, ನನಗೆ ಕರೆ ಮಾಡಿ, ಧೈರ್ಯ ಹೇಳಿ, ತುಮಕೂರಿನಿಂದ ಲೋಕಸಭೆಗೆ ಸ್ಪರ್ಧಿಸಲು ನನಗೆ ನಿಲ್ಲಲು ರಂಭಾಪುರಿ ಶ್ರೀಗಳು ಸೂಚಿಸಿದರು. ಅದರಂತೆ ನಿಂತು ಅಲ್ಲಿ ಗೆದ್ದೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸಂಸದರಾಗಿದ್ದರೂ ನರೇಂದ್ರ ಮೋದಿ ನನಗೆ ಕೇಂದ್ರ ಮಂತ್ರಿ ಮಾಡಿದರು. ದೇಶದ ಉದ್ದಗಲಕ್ಕೂ ಜನಪರ ಕೆಲಸ ಮಾಡಲು ಶ್ರೀರಕ್ಷೆ ಇದ್ದರೆ ಸಂಸ್ಕೃತಿ, ಸಂಸ್ಕಾರ, ನಮ್ಮ ನಡವಳಿಕೆಯೇ ಕಾರಣ.

- - -

-(ಫೋಟೋ ಬರಲಿವೆ).