ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ನೂತನ ಜಿಲ್ಲೆ ವಿಜಯನಗರ ಕೈಗಾರಿಕಾ ವಲಯದಲ್ಲೂ ಹೆಸರುವಾಸಿ. ಉತ್ಕೃಷ್ಟ ಕಬ್ಬಿಣದ ಅದಿರು ಸಿಗುವ ನಾಡಿನ ಬೆರಳೆಣಿಕೆ ಪ್ರದೇಶಗಳಲ್ಲಿ ವಿಜಯನಗರ ಕೂಡ ಒಂದಾಗಿದೆ. ಹಾಗಾಗಿ ಈ ಜಿಲ್ಲೆಯಲ್ಲಿ ಮೆದು ಕಬ್ಬಿಣ ಘಟಕಗಳು ಸೇರಿದಂತೆ ಕಟ್ಟಡ ಸಾಮಗ್ರಿ ಮತ್ತು ಗೃಹ ನಿರ್ಮಾಣಕ್ಕೆ ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ಉತ್ತೇಜನ ದೊರೆಯಲಿ ಎಂಬುದು ಕೈಗಾರಿಕೋದ್ಯಮಿಗಳ ನಿರೀಕ್ಷೆ ಇದೆ.ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಜಯನಗರ ಜಿಲ್ಲೆ ಮೇಲೆ ವಿಶೇಷ ಪ್ರೀತಿ ಹೊಂದಿದ್ದಾರೆ. ಕೈಗಾರಿಕೆ ವಲಯ ಬೆಳೆದರೆ ಜಿಲ್ಲೆಯ ಜಿಡಿಪಿ ಪ್ರಮಾಣ ಕೂಡ ಹೆಚ್ಚಾಗಲಿದೆ. ಜತೆಗೆ ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ಕೂಡ ಸಿಗಲಿದೆ. ಈ ಭಾಗದಲ್ಲಿ ಕೈಗಾರಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆದರೆ, ಕಲ್ಯಾಣ ಕರ್ನಾಟಕ ಪ್ರದೇಶದ ಭಾಗ ಕೂಡ ಅಭಿವೃದ್ಧಿ ಕಾಣಲಿದೆ ಎಂಬುದು ಉದ್ಯಮಿಗಳ ಅಭಿಮತವಾಗಿದೆ.
ಉತ್ತೇಜನ ಸಿಗಲಿ: ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆಯಲ್ಲಿ ಉದ್ಯಮ ರಂಗ ಬೆಳೆಯುವ ವಾತಾವರಣ ಸೃಷ್ಟಿ ಮಾಡಬೇಕು. ಈ ಭಾಗದಲ್ಲಿ ಕಬ್ಬಿಣದ ಅದಿರು ಸಿಗುತ್ತದೆ. ಜತೆಗೆ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲೂ ಅದಿರು ದೊರೆಯುತ್ತದೆ. ಈ ಹಿನ್ನೆಲೆ ಹೊಸಪೇಟೆ ಭಾಗದಲ್ಲಿ ಮೆದು ಕಬ್ಬಿಣ ಘಟಕಗಳು ಮತ್ತು ಕಟ್ಟಡ ಸಾಮಗ್ರಿ ಮತ್ತು ಗೃಹ ನಿರ್ಮಾಣಕ್ಕೆ ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯ ಸರ್ಕಾರ ವಿಶೇಷ ಒತ್ತು ನೀಡಬೇಕು. ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿಗಾಗಿ ಸರ್ಕಾರ ಆದ್ಯತೆ ನೀಡಬೇಕು. ಕೈಗಾರಿಕಾ ಇಲಾಖೆ ಚುರುಕುಗೊಳಿಸಿ ಹೊಸ ಹೊಸ ಯೋಜನೆ ರೂಪಿಸಬೇಕು. ಯುವ ಉದ್ಯಮಿಗಳು ಉದ್ಯಮ ಸ್ಥಾಪನೆಗೆ ವಾತಾವರಣ ಸೃಷ್ಟಿಸಬೇಕು. ಅಲ್ಲದೇ, ಬಂಡವಾಳ ಹರಿದು ಬರಲು ಸರ್ಕಾರ ವಿಶೇಷ ಆಸಕ್ತಿ ವಹಿಸಿ ಮೂಲ ಸೌಕರ್ಯ ಕಲ್ಪಿಸಲು ಆಸಕ್ತಿ ವಹಿಸಬೇಕಿದೆ. ಇದಕ್ಕಾಗಿ ಬಜೆಟ್‌ನಲ್ಲೇ ವಿಶೇಷ ಅನುದಾನ ಒದಗಿಸಬೇಕು ಎಂದು ಉದ್ಯಮಿಗಳು ಹೇಳುತ್ತಾರೆ.ಏಕಗವಾಕ್ಷಿ: ಉದ್ಯಮಿಗಳಿಗೆ ಕಿರಿಕಿರಿಯಾಗದಂತೆ ಏಕಗವಾಕ್ಷಿ ಸ್ಥಾಪಿಸಬೇಕು. ಉದ್ಯಮಿಗಳಿಗೆ ಪರವಾನಗಿ ಸೇರಿದಂತೆ ವಿವಿಧ ಪ್ರಮಾಣಪತ್ರಗಳು ಒಂದೆಡೆ ಏಕಗವಾಕ್ಷಿಯಲ್ಲಿ ದೊರೆಯುವಂತೆ ಮಾಡಬೇಕು. ಸಣ್ಣ, ಮಧ್ಯಮ ಉದ್ಯಮಗಳು ಸ್ಥಾಪನೆಗೆ ಸರ್ಕಾರವೇ ಯುವ ಉದ್ಯಮಿಗಳಿಗೆ ವಿಶೇಷ ತರಬೇತಿ ನೀಡಿ, ಸಾಲ ಸೌಲಭ್ಯ ಕೂಡ ಒದಗಿಸಬೇಕು. ಗಣಿಗಾರಿಕೆ ವಲಯದ ವಹಿವಾಟು ಬೇರೆ ರಾಜ್ಯ ಹಾಗೂ ಬೇರೆ ರಾಷ್ಟ್ರಕ್ಕೆ ಹರಿದು ಹೋಗದಂತೆ ಜಿಲ್ಲೆಯಲ್ಲೇ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ದೊರೆಯಬೇಕಿದೆ.
ವಿಜಯನಗರ ಜಿಲ್ಲೆ ಭೌಗೋಳಿಕವಾಗಿ ಬೆಂಗಳೂರು, ಹೈದರಾಬಾದ್‌ಗೂ ಸಮಾನ ಅಂತರದಲ್ಲಿದೆ. ಈ ಭಾಗದಲ್ಲಿ ಖಾಸಗಿ ವಿಮಾನ ನಿಲ್ದಾಣಗಳು ಕೂಡ ಇವೆ. ಜಿಂದಾಲ್‌ನ ತೋರಣಗಲ್ ವಿಮಾನ ನಿಲ್ದಾಣ ಮತ್ತು ಕೊಪ್ಪಳದ ಎಂಎಸ್‌ಪಿಎಲ್ ವಿಮಾನ ನಿಲ್ದಾಣ ಇದೆ. ಉದ್ಯಮ ರಂಗದ ಉತ್ತೇಜನಕ್ಕೆ ಪೂರಕ ವಾತಾವರಣವೂ ಇದೆ. ತುಂಗಭದ್ರಾ ಜಲಾಶಯ ಕೂಡ ಇರುವುದರಿಂದ ಕೃಷಿ ಜತೆಗೆ ಕೈಗಾರಿಕೆ ವಲಯ ಸ್ಥಾಪನೆಗೂ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಕೈಗಾರಿಕಾ ವಲಯಕ್ಕೆ ಜಮೀನುಗಳನ್ನು ಗುರುತಿಸಿ ಭೂ ಬ್ಯಾಂಕ್ ಸ್ಥಾಪನೆ ಮಾಡಿದರೆ, ಉದ್ಯಮ ರಂಗ ಬೆಳೆಯಲಿದೆ. ಇದರಿಂದ ಜಿಲ್ಲೆ ಕೈಗಾರಿಕಾ ಕ್ಷೇತ್ರದಲ್ಲೂ ಹೆಸರು ಮಾಡಲಿದೆ ಎಂಬುದು ಕೈಗಾರಿಕೋದ್ಯಮಿಗಳ ಅಭಿಪ್ರಾಯವಾಗಿದೆ.ವಿಜಯನಗರ ಜಿಲ್ಲೆಯಲ್ಲಿ ಈಗಾಗಲೇ ಬಿಎಂಎಂ ಇಸ್ಪಾತ್ ಲಿ., ಸ್ಮಯೋರ್ ಸೇರಿದಂತೆ ಅನೇಕ ಕೈಗಾರಿಕೆಗಳು ಇವೆ. ಈಗಿರುವ ಕೈಗಾರಿಕೆಗಳ ಜತೆಗೆ ಇನ್ನಷ್ಟು ಕೈಗಾರಿಕೆಗಳ ಬೆಳವಣಿಗೆಗೆ ಸರ್ಕಾರ ಆಸ್ಥೆ ವಹಿಸಿದರೆ, ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಅಲ್ಲದೇ ಆರ್ಥಿಕ ಚೇತರಿಕೆ ಕಾಣಲಿದೆ ಎಂಬುದು ಉದ್ಯಮಿಗಳ ಅಭಿಮತವಾಗಿದೆ.ಗಮನಹರಿಸಿ: ಜಿಲ್ಲೆಯಲ್ಲಿ ಮೆದು ಕಬ್ಬಿಣ ಘಟಕಗಳು ಸೇರಿದಂತೆ ಕಟ್ಟಡ ಸಾಮಗ್ರಿ ಮತ್ತು ಗೃಹ ನಿರ್ಮಾಣಕ್ಕೆ ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಗೆ ಬಜೆಟ್‌ನಲ್ಲಿ ಉತ್ತೇಜನ ಸಿಗಬೇಕು. ಉದ್ಯಮಿಗಳಿಗೆ ಏಕಗವಾಕ್ಷಿ ಸ್ಥಾಪನೆ ಮಾಡಿ ಪರವಾನಗಿ ಲಭಿಸುವಂತೆ ಮಾಡಬೇಕು. ಯುವ ಉದ್ಯಮಿಗಳಿಗೆ ತರಬೇತಿ ನೀಡಿ, ಸಾಲಸೌಲಭ್ಯ ಒದಗಿಸಬೇಕು. ಕೈಗಾರಿಕಾ ವಲಯದ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸಬೇಕು ಎಂದು ವಾಣಿಜೋದ್ಯಮ ಹಾಗೂ ಕೈಗಾರಿಕಾ ಸಂಘದ ಜಿಲ್ಲಾಧ್ಯಕ್ಷ ಅಶ್ವಿನ್ ಕೋತ್ತಂಬರಿ ಆಗ್ರಹಿಸಿದರು.